13 ಮಕ್ಕಳಿದ್ದರೂ ತಂದೆಗೆ ಗತಿಯಿಲ್ಲ! ಅಧಿಕಾರಿಗಳ ಕಾಲು ಹಿಡಿದು ‘ಅನ್ನ ಕೊಡಿಸಿ’ ಎಂದು ಅತ್ತ ತಂದೆ

Published : Aug 20, 2026, 08:09 AM IST
father begs officials fo a meal

ಸಾರಾಂಶ

ಆಸ್ತಿಗಾಗಿ ಪೀಡಿಸುವ, ಹೆತ್ತವರನ್ನು ಬೀದಿಗೆ ತಳ್ಳುವ ಇಂತಹ ಮಕ್ಕಳ ನಡುವೆ ಮನುಷ್ಯತ್ವ ಎಲ್ಲಿಗೆ ಹೋಗುತ್ತಿದೆ ಎಂಬ ಪ್ರಶ್ನೆ ಮೂಡುತ್ತಿದೆ. 13 ಮಕ್ಕಳನ್ನು ಸಾಕಿ ಸಲಹಿದ ತಂದೆಗೆ ಒಂದು ಹೊತ್ತಿನ ಊಟ ನೀಡದ ಈ ಮಕ್ಕಳು ಸಮಾಜಕ್ಕೆ ಕಳಂಕದಂತಿದ್ದಾರೆ.

ಮೆದಕ್ (ತೆಲಂಗಾಣ): ಹೆತ್ತವರಿಗೆ ಮಕ್ಕಳೇ ಆಸ್ತಿ. ಅವರೇ ವೃದ್ಧಾಪ್ಯದ ಕೋಲು ಎಂಬ ನಂಬಿಕೆ ಸುಳ್ಳಾಗುತ್ತಿದೆ. 13 ಮಕ್ಕಳನ್ನು ಎತ್ತಿ ಆಡಿಸಿ, ಮೈ ಮುರಿದು ದುಡಿದು ಎಲ್ಲರನ್ನೂ ದಡ ಸೇರಿಸಿದ ಆ ತಂದೆಗೆ ಇಂದು ಒಂದು ತುತ್ತು ಅನ್ನ ನೀಡುವವರೂ ಇಲ್ಲದಂತಾಗಿದೆ. ಮೆದಕ್ ಜಿಲ್ಲೆಯ ಕರುಳು ಹಿಂಡುವ ಘಟನೆ ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ.

ಮೆದಕ್ ಜಿಲ್ಲೆಯ ಶಿವಂಪೇಟೆ ಮಂಡಲದ ನವಾಪೇಟೆ ಗ್ರಾಮದ ನಿವಾಸಿ ಎಂ.ಬಿ.ಮಹಬೂಬ್ ಅವರ ಕಣ್ಣೀರಿನ ಕಥೆಯಿದು. ಇವರಿಗೆ ಎಂಟು ಮಂದಿ ಗಂಡು ಮಕ್ಕಳು ಹಾಗೂ ಐವರು ಹೆಣ್ಣು ಮಕ್ಕಳು. ತನ್ನಲ್ಲಿದ್ದ ಮೂರು ಎಕರೆ ಭೂಮಿ, ಮನೆ ಹಾಗೂ ಸಾಕಿದ್ದ ಎಮ್ಮೆಗಳನ್ನು ಮಾರಿ ಎಲ್ಲ ಮಕ್ಕಳಿಗೂ ಮದುವೆ ಮಾಡಿ ನೆಲೆ ನಿಲ್ಲುವಂತೆ ಮಾಡಿದ್ದರು. ಆರು ವರ್ಷಗಳ ಹಿಂದೆ ಪತ್ನಿ ಮರಣ ಹೊಂದಿದ ನಂತರ ಮಹಬೂಬ್ ಅವರ ಬದುಕು ನರಕ ಸದೃಶವಾಗಿದೆ.

ಮಹಬೂಬ್ ಅವರ ಎಂಟು ಮಕ್ಕಳಲ್ಲಿ ಏಳು ಮಂದಿ ಹೈದರಾಬಾದ್‌ನಲ್ಲಿ ಸುಖವಾಗಿದ್ದಾರೆ. ಒಬ್ಬ ಮಗ ಗ್ರಾಮದಲ್ಲೇ ಇದ್ದಾನೆ. ಹೀಗಿದ್ದರೂ ಕಳೆದ ಒಂದು ವರ್ಷದಿಂದ ಈ ವೃದ್ಧ ತಂದೆಗೆ ಅನ್ನ ನೀಡಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಹಸಿವು ತಾಳಲಾರದೆ ಮಹಬೂಬ್ ಗ್ರಾಮದ ಮನೆ ಮನೆಗೆ ಅಲೆದು ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಶಿಥಿಲಗೊಂಡಿರುವ ಹಳೆಯ ಮನೆಯ ಮೂಲೆಯೊಂದರಲ್ಲಿ ದಿನ ಕಳೆಯುತ್ತಿದ್ದಾರೆ.

ಮಕ್ಕಳು ಬರುವರೆಂದು ಮೂರು ದಿನ ಪೊಲೀಸ್ ಠಾಣೆಯಲ್ಲೇ ಕಾದಿದ್ದರು!

ಕೆಲವು ದಿನಗಳ ಹಿಂದೆ ತನ್ನ ಕಷ್ಟ ಹೇಳಿಕೊಳ್ಳಲು ಮಹಬೂಬ್ ಪೊಲೀಸರ ಮೊರೆ ಹೋಗಿದ್ದರು. ಪೊಲೀಸರು ಮಕ್ಕಳನ್ನು ಕರೆಸಿದರೂ ಯಾವೊಬ್ಬ ಮಗನೂ ಬರಲಿಲ್ಲ. ನನ್ನ ಮಕ್ಕಳು ಬಂದು ನನ್ನನ್ನು ಕರೆದುಕೊಂಡು ಹೋಗುತ್ತಾರೆ ಎಂಬ ಆಸೆಯಿಂದ ಈ ವೃದ್ಧ ತಂದೆ ಸತತ ಮೂರು ದಿನಗಳ ಕಾಲ ಪೊಲೀಸ್ ಠಾಣೆಯಲ್ಲೇ ಮಲಗಿ ಕಾದಿದ್ದರು. ಕೊನೆಗೆ ಪೊಲೀಸರೇ ಸಚಿವರಿಗೆ ಮಾಹಿತಿ ನೀಡಿ ಗ್ರಾಮಕ್ಕೆ ವಾಪಸ್ ಕಳುಹಿಸಿಕೊಟ್ಟಿದ್ದರು.

ಅಧಿಕಾರಿಗಳ ಕಾಲು ಹಿಡಿದು ಗೋಳಾಟ

ಸೋಮವಾರ ನಡೆದ ಸಾರ್ವಜನಿಕ ಅಹವಾಲು ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಬೂಬ್, ಎಂಪಿಡಿಒ ವೆಂಕಟಲಕ್ಷ್ಮಿ ಅವರ ಕಾಲು ಹಿಡಿದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮೇಡಂ, ದಯವಿಟ್ಟು ನನ್ನ ಮಕ್ಕಳಿಗೆ ಹೇಳಿ ನನಗೆ ದಿನಕ್ಕೆ ಒಂದು ತುತ್ತು ಅನ್ನ ನೀಡುವಂತೆ ಮಾಡಿ. ನನ್ನ ಹೆಂಡತಿ ಬದುಕಿದ್ದರೆ ನನಗೆ ಈ ಗತಿ ಬರುತ್ತಿರಲಿಲ್ಲ ಎಂದು ಅವರು ಗೋಳಾಡಿದ ರೀತಿ ಅಲ್ಲಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸಿತು. ಆಸ್ತಿಗಾಗಿ ಪೀಡಿಸುವ, ಹೆತ್ತವರನ್ನು ಬೀದಿಗೆ ತಳ್ಳುವ ಇಂತಹ ಮಕ್ಕಳ ನಡುವೆ ಮನುಷ್ಯತ್ವ ಎಲ್ಲಿಗೆ ಹೋಗುತ್ತಿದೆ ಎಂಬ ಪ್ರಶ್ನೆ ಮೂಡುತ್ತಿದೆ. 13 ಮಕ್ಕಳನ್ನು ಸಾಕಿ ಸಲಹಿದ ತಂದೆಗೆ ಒಂದು ಹೊತ್ತಿನ ಊಟ ನೀಡದ ಈ ಮಕ್ಕಳು ಸಮಾಜಕ್ಕೆ ಕಳಂಕದಂತಿದ್ದಾರೆ. ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಂಡು ವೃದ್ಧನಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Live News: ದೇಶದಲ್ಲಿ ಜೆನ್‌ಝೀಗಳನ್ನು ಸೆಳೆಯಲು ಎನ್‌ಡಿಎ-ಇಂಡಿಯಾ ಒಕ್ಕೂಟಗಳ ಪೈಪೋಟಿ, ಇಲ್ಲಿವೆ ಮಾಸ್ಟರ್ ಪ್ಲಾನ್!
ಬರೋಬ್ಬರಿ 30 ವರ್ಷಗಳ ನಂತರ 20 ರೂಪಾಯಿ ಲಂಚದ ಕೇಸ್‌ಗೆ ಸುಪ್ರೀಂ ತೆರೆ! ಇಬ್ಬರೂ ದೋಷಮುಕ್ತ