
ನವದೆಹಲಿ (ಮೇ.28): ಬೆಟ್ಟಿಂಗ್ ಮತ್ತು ಗ್ಯಾಂಬ್ಲಿಂಗ್(Betting and Gambling) ಮೂಲಭೂತ ಹಕ್ಕಲ್ಲ(No Fundamental Right) ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್(Supreme court), ರಮ್ಮಿ(Rummy) ಮತ್ತು ಪೋಕರ್‌ನಂಥ ಆನ್‌ಲೈನ್ ಮನಿ ಗೇಮ್(Online money game)ಗಳ ಮೇಲೆ ನಿರ್ಬಂಧ ಹೇರಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಜಾರಿಗೆ ತಂದಿದ್ದ ಕಾನೂನನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಜೂಜು ಮತ್ತು ಬೆಟ್ಟಿಂಗ್ ಆಧಾರಿತ ಆಟಗಳನ್ನು ನಿರ್ಬಂಧಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂದು ಸ್ಪಷ್ಟಪಡಿಸಿದೆ.
ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ಹಣ ಅಥವಾ ಬಾಜಿ ಕಟ್ಟಿ ಆಡುವ ಆನ್‌ಲೈನ್ ರಮ್ಮಿ ಮತ್ತು ಪೋಕರ್ ಗೇಮ್‌ಗಳನ್ನು ನಿಷೇಧಿಸಿ ಕಾನೂನು ತಿದ್ದುಪಡಿ ತಂದಿತ್ತು. ಆದರೆ ಇದನ್ನು ಹೈಕೋರ್ಟ್‌ಗಳು ರದ್ದು ಮಾಡಿದ್ದವು.
ಇದೀಗ ನ್ಯಾ.ಜೆ.ಪರ್ದಿವಾಲಾ ಮತ್ತು ನ್ಯಾ.ಆರ್. ಮಹದೇವನ್ ಅವರಿದ್ದ ಪೀಠವು, ಸಾರ್ವಜನಿಕರ ಜೀವನದ ಮೇಲೆ ಪರಿಣಾಮ ಬೀರುವಂತಿದ್ದರೆ ಸ್ಕಿಲ್ ಗೇಮ್‌ಗಳ ಮೇಲೂ ಸರ್ಕಾರ ನಿರ್ಬಂಧ ವಿಧಿಸಬಹುದು. ಪೋಕರ್ ಅಥವಾ ರಮ್ಮಿ ಸ್ಕಿಲ್ ಗೇಮ್‌ಗಳಾದರೂ ಬಾಜಿ ಕಟ್ಟಿ ಹಾಡುವ ಇಂಥ ಆನ್‌ಲೈನ್ ಆಟಗಳಿಗೆ ನಿರ್ಬಂಧ ಹೇರುವ ಅಧಿಕಾರ ರಾಜ್ಯಗಳಿಗಿದೆ ಎನ್ನುವ ಮೂಲಕ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ವಜಾ ಮಾಡಿದೆ.
ಈ ಪ್ರಕರಣದಲ್ಲಿ ಹೈಕೋರ್ಟ್‌ಗಳು ಬೆಟ್ಟಿಂಗ್ ಹಾಗೂ ಜೂಜಿಗೆ ಸಂಬಂಧಿಸಿ ಸಂವಿಧಾನದಲ್ಲಿರುವ 34ನೇ ರಾಜ್ಯಪಟ್ಟಿಯ ಕುರಿತು ತೀರಾ ಕಿರಿದಾದ ಅರ್ಥ ವಿವರಣೆ ನೀಡಿದೆ. ಇದು ತಪ್ಪು ಎಂದಿರುವ ಪೀಠ, ಕೇವಲ ಕೌಶಲ್ಯದೊಂದಿಗೆ ಸಂಬಂಧ ಹೊಂದಿದೆ ಎಂಬ ಏಕೈಕ ಕಾರಣಕ್ಕೆ ರಾಜ್ಯಗಳು ಬೆಟ್ಟಿಂಗ್ ಹಾಗೂ ಜೂಜು ನಿಯಂತ್ರಿಸುವ ಅಧಿಕಾರ ಕಳೆದುಕೊಳ್ಳುವಂತೆ ಮಾಡುವುದು ಸರಿಯಲ್ಲ ಎಂದು ತಿಳಿಸಿದೆ.
ಸಂವಿಧಾನದ 19ನೇ ಪರಿಚ್ಛೇದದಡಿ ಕೌಶಲ್ಯ(ಸ್ಕಿಲ್)ದ ಆಟಕ್ಕೆ ರಕ್ಷಣೆಯಿದೆ. ಆದರೆ, ಬೆಟ್ಟಿಂಗ್ ಹಾಗೂ ಜೂಜನ್ನು ಒಳಗೊಂಡಿದ್ದರೆ ಇಂಥ ಆಟಕ್ಕೂ ಸಾಂವಿಧಾನಿಕ ರಕ್ಷಣೆ ಇರುವುದಿಲ್ಲ. ಇವು ಮೂಲಭೂತ ಹಕ್ಕಿನ ವ್ಯಾಪ್ತಿಗೆ ಬರುವುದಿಲ್ಲ. ಹೆಚ್ಚುತ್ತಿರುವ ವ್ಯಸನ, ಹಣಕಾಸು ನಷ್ಟಗಳು ಹಾಗೂ ಆತ್ಮಹತ್ಯೆ ಪ್ರಕರಣಗಳಿಂದಾಗಿ ಆನ್‌ಲೈನ್ ಮನಿ ಗೇಮ್‌ಗಳು ಸಾರ್ವಜನಿಕ ಸುವ್ಯವಸ್ಥೆ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ವಿಚಾರಗಳಾಗಿ ಪರಿಣಮಿಸುತ್ತಿವೆ. ಈ ರೀತಿಯ ಗೇಮ್‌ಗಳು ಸಾರ್ವಜನಿಕರ ನೆಮ್ಮದಿ ಕೆಡಿಸುತ್ತಿವೆ ಎಂದು ಪೀಠ ಹೇಳಿದೆ.
ಇದರ ಜತೆಗೆ ಆನ್‌ಲೈನ್ ಗೇಮಿಂಗ್ ಕಂಪನಿಗಳ ಮೇಲೆ ಶೇ.28ರಷ್ಟು ಜಿಎಸ್ಟಿ ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನೂ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಜತೆಗೆ, ಈ ರೀತಿಯ ಜಿಎಸ್ಟಿ ವಿಧಿಸುವುದು ಕಾನೂನುಬದ್ಧವಾಗಿಯೇ ಇದೆ ಎಂದು ಅಭಿಪ್ರಾಯಪಟ್ಟಿದೆ.
ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ಕೇವಲ ಮಧ್ಯವರ್ತಿಗಳಲ್ಲ, ಬದಲಾಗಿ ಅವುಗಳನ್ನು ಜಿಎಸ್ಟಿ ವ್ಯಾಪ್ತಿಗೆ ಒಳಪಡುವ ಪೂರೈಕೆದಾರರು ಎಂದು ಪರಿಗಣಿಸಬೇಕು ಎಂದು ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ