
ನವದೆಹಲಿ[ಜ.29]: ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ದಿಲ್ಲಿಯ ನಿರ್ಭಯಾ ಗ್ಯಾಂಗ್‌ರೇಪ್ ಪ್ರಕರಣದ ದೋಷಿ ಮುಕೇಶ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಆದರೆ ಈ ಅರ್ಜಿ ವಜಾಗೊಂಡ ಬೆನ್ನಲ್ಲೇ ಪ್ರಕರಣದ ಮತ್ತೊಬ್ಬ ದೋಷಿ ಅಕ್ಷಯ್ ಸಿಂಗ್ ಗಲ್ಲು ಶಿಕ್ಷೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಹೊಸ ಅರ್ಜಿ ಸಲ್ಲಿಸಿದ್ದಾನೆ. ಹೀಗಾಗಿ ಅಪರಾಧಿಗಳಿಗೆ ನಿಗದಿತ ದಿನಾಂಕ, ಫೆ. 1ರಂದು ಗಲ್ಲು ಶಿಕ್ಷೆಯಾಗುವುದು ಅನುಮಾನವಾಗಿದೆ.
"
ಅರ್ಜಿ ವಿಚಾರಣೆ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್ ’ಲಕಿರುಕುಳದ ಆರೋಪ ಸಾಬೀತುಪಡಿಸುವ ಯಾವುದೇ ಸಾಕ್ಷಿಗಳಿಲ್ಲ. ಇನ್ನು ಎಲ್ಲಾ ದಾಖಲೆಗಳನ್ನು ರಾಷ್ಟ್ರಪತಿ ಎದುರು ಪ್ರಸ್ತುತಪಡಿಸಲಾಗಿದೆ. ಗೃಹ ಸಚಿಚಾಲಯ ಕೂಡಾ ಎಲ್ಲಾ ದಾಖಲೆಗಳನ್ನು ಕಳುಹಿಸಿಕೊಟ್ಟಿದೆ, ತಾವು ಖುದ್ದು ಇದನ್ನು ಪರಿಶೀಲಿಸಿದ್ದೇವೆ. ಹೀಗಾಗಿ ಅರ್ಜಿ ಪುರಸ್ಕರಿಸಲು ಸಾಧ್ಯವಿಲ್ಲ’ ಎಂದಿದೆ.
ಇನ್ನು ಇದರ ಬೆನ್ನಲ್ಲೇ ಮತ್ತೊಬ್ಬ ಅಪರಾಧಿ ಅಕ್ಷಯ್ ಸಿಂಗ್ ಗಲ್ಲು ಪ್ರಶ್ನಿಸಿ ಮತ್ತೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದಾರೆ.
ಮುಕೇಶ್ ಅರ್ಜಿ ವಿಚಾರಣೆ ವೇಳೆ ಏನೇನಾಯ್ತು?: ರಾಷ್ಟ್ರಪತಿ ಮೇಲೇ ವಕೀಲೆ ಆರೋಪ
ಮುಕೇಶ್ ಪರ ವಾದ ಮಂಡಿಸಿದ ವಕೀಲೆ ಅಂಜನಾ ಪ್ರಕಾಶ್, ‘ಮುಕೇಶ್‌ಗೆ ವಿಚಾರಣಾ ಹಂತದಲ್ಲೇ ಏಕಾಂಗಿ ವಾಸದ ಶಿಕ್ಷೆ ನೀಡಲಾಗಿದೆ. ಆತನ ಮೇಲೆ ಸತತವಾಗಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಈ ಕುರಿತು ನನ್ನ ಬಳಿ ದಾಖಲೆಗಳಿವೆ. ಕ್ಷಮಾದಾನ ಕೋರಿಕೆಯನ್ನು ಮುಕೇಶ್ ಸಲ್ಲಿಸಿದಾಗ ತಿಹಾರ್ ಜೈಲಧಿಕಾರಿಗಳು ಆತನ ಕುರಿತ ಎಲ್ಲ ದಾಖಲೆಗಳನ್ನು ರಾಷ್ಟ್ರಪತಿಗಳಿಗೆ ನೀಡಿಲ್ಲ. ನೀವು (ರಾಷ್ಟ್ರಪತಿ) ಜೀವದ ಜತೆ ಆಟವಾಡುತ್ತಿದ್ದೀರಿ. ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಬೇಕು’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಮೇಲೆಯೇ ಅಂಜನಾ ಆರೋಪ ಹೊರಿಸಿದರು.
ಆಗ ಮಧ್ಯಪ್ರವೇಶಿಸಿದ ನ್ಯಾ| ಭಾನುಮತಿ, ‘ಹಾಗಿದ್ದರೆ ರಾಷ್ಟ್ರಪತಿಗಳು ಪ್ರತಿ ದಾಖಲೆಯನ್ನೂ ಪರಿಶೀಲನೆ ನಡೆಸಬೇಕೇ? ಎಲ್ಲ ದಾಖಲೆಗಳನ್ನು ಅವರಿಗೆ ನೀಡಿಲ್ಲ ಎಂದು ಯಾವ ಆಧಾರದಲ್ಲಿ ಆರೋಪ ಮಾಡುತ್ತಿದ್ದೀರಿ? ನಿರ್ಣಯ ತೆಗೆದುಕೊಳ್ಳುವಾಗ ಅವರು ಏನೂ ಯೋಚಿಸಿಲ್ಲ ಎಂದು ಹೇಗೆ ಹೇಳುತ್ತೀರಿ?’ ಎಂದು ಪ್ರಶ್ನಿಸಿದರು. ಲೈಂಗಿಕ ದೌರ್ಜನ್ಯ ನಡೆದ ದಾಖಲೆಗಳಿವೆ ಎಂಬ ವಾದವನ್ನು ಒಪ್ಪಲು ನಿರಾಕರಿಸಿದರು.
ಆಗ ಸರ್ಕಾರದ ಪರ ವಾದ ಮಂಡಿಸಿದ ತುಷಾರ್ ಮೆಹ್ತಾ, ‘ಜೈಲಿನಲ್ಲಿ ಅನುಭವಿಸಿದ ಯಾತನೆಯು ಕ್ಷಮಾದಾನಕ್ಕೆ ಮಾನದಂಡವಾಗದು. ಮುಕೇಶ್‌ನನ್ನು ಏಕಾಂಗಿಯಾಗಿ ಇರಿಸಿ ಶಿಕ್ಷೆ ನೀಡಿಲ್ಲ. ಆತನನ್ನು ನಿಗದಿತ ಅವಧಿಯಲ್ಲಿ ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿದೆಯಷ್ಟೇ. ಪ್ರತ್ಯೇಕ ಸೆಲ್ ಇದ್ದ ಮಾತ್ರಕ್ಕೆ ಏಕಾಂಗಿ ಶಿಕ್ಷೆ ಎನ್ನಲಾಗದು’ ಎಂದರು.
‘ರಾಷ್ಟ್ರಪತಿಗಳಿಗೆ ಎಲ್ಲ ದಾಖಲೆಗಳನ್ನು ಕ್ಷಮಾದಾನ ಅರ್ಜಿ ಸಲ್ಲಿಕೆಯಾದಾಗ ನೀಡಲಾಗಿತ್ತು’ ಎಂದು ಅವರು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ