'ನಿರ್ಭಯಾ ಕೇಸ್ ದೋಷಿಗಳಿಗೆ ಗಲ್ಲು ವಿಧಿಸಲು ಗಡಿಬಿಡಿ ಏಕೆ?'

By Kannadaprabha News  |  First Published Feb 3, 2020, 11:22 AM IST

ನಿರ್ಭಯಾ ಕೇಸ್‌: ತೀರ್ಪು ಕಾಯ್ದಿಟ್ಟ ಹೈಕೋರ್ಟ್‌| ಡೆತ್‌ ವಾರಂಟ್‌ ತಡೆಹಿಡಿದ ಸ್ಥಳೀಯ ಕೋರ್ಟ್‌ ಆದೇಶ ಪ್ರಶ್ನಿಸಿ ಕೇಂದ್ರದ ಅರ್ಜಿ| ದೋಷಿಗಳ ಮುಂದೆ ಕಾನೂನು ಮಾರ್ಗಗಳಿವೆ, ಗಲ್ಲಿಗೆ ಗಡಿಬಿಡಿಯೇಕೆ?: ದೋಷಿಗಳ ವಕೀಲೆ| ದೋಷಿಗಳಿಂದ ಉದ್ದೇಶಪೂರ್ವಕ ವಿಳಂಬ, ಪ್ರತ್ಯೇಕವಾಗಿ ಗಲ್ಲಿಗೇರಿಸಿ: ಸರ್ಕಾರಿ ವಕೀಲರು


ನವದೆಹಲಿ[ಫೆ.03]: ನಿರ್ಭಯಾ ಗ್ಯಾಂಗ್‌ರೇಪ್‌ ಪ್ರಕರಣದ ದೋಷಿಗಳ ಡೆತ್‌ವಾರಂಟ್‌ ತಡೆ ಹಿಡಿದಿರುವ ದಿಲ್ಲಿ ಸ್ಥಳೀಯ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ದಿಲ್ಲಿ ಹೈಕೋರ್ಟ್‌ ಭಾನುವಾರ ಕಾಯ್ದಿರಿಸಿದೆ. ರಜಾ ದಿನವಾಗಿದ್ದರೂ ಭಾನುವಾರ ವಿಶೇಷ ಕಲಾಪ ನಡೆಸಿದ ನ್ಯಾ| ಸುರೇಶ್‌ ಕೈತ್‌, ‘ವಾದ-ಪ್ರತಿವಾದಗಳನ್ನು ಆಲಿಸಿದ್ದೇವೆ. ತೀರ್ಪು ಕಾಯ್ದಿರಿಸಿದ್ದೇನೆ’ ಎಂದು ಹೇಳಿ ಕಲಾಪಕ್ಕೆ ಮಂಗಳ ಹಾಡಿದರು. ತೀರ್ಪು ಪ್ರಕಟ ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಇದಕ್ಕೂ ಮುನ್ನ ಕೇಂದ್ರ ಸರ್ಕಾರದ ಪರ ವಕೀಲರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹಾಗೂ ಅತ್ಯಾಚಾರಿಗಳ ಪರ ವಕೀಲೆ ರೆಬೆಕ್ಕಾ ಜಾನ್‌ ಅವರ ಸುದೀರ್ಘ ವಾದವನ್ನು ನ್ಯಾ| ಕೈತ್‌ ಆಲಿಸಿದರು.

Latest Videos

undefined

ವಿನಯ್‌ ಕ್ಷಮಾದಾನ ಅರ್ಜಿ ವಜಾ, ಆಟ ಮುಂದುವರೆಸಿದ ಮತ್ತೊಬ್ಬ ದೋಷಿ!

ರೆಬೆಕಾ ಜಾನ್‌ ವಾದ ಮಂಡಿಸಿ, ‘ಈ ಮುಂಚೆ ಯಾವತ್ತೂ ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿರಲಿಲ್ಲ. ಆದರೆ ಇದೀಗ ದಿಢೀರನೇ ಸರ್ಕಾರಕ್ಕೆ ಎಚ್ಚರವಾಗಿದೆ’ ಎಂದು ಕಿಡಿಕಾರಿದರು.

ಅಲ್ಲದೆ, ‘ಪ್ರಕರಣದ ನಾಲ್ವರೂ ಆರೋಪಿಗಳಿಗೆ ನ್ಯಾಯಾಲಯ ಒಟ್ಟಿಗೇ ಶಿಕ್ಷೆ ವಿಧಿಸಿದೆ. ಹಾಗಿದ್ದರೆ ಶಿಕ್ಷೆ ಕೂಡ ಒಟ್ಟಿಗೇ ಜಾರಿಯಾಗಬೇಕು’ ಎನ್ನುವ ಮೂಲಕ ದೋಷಿಗಳ ಗಲ್ಲು ಪ್ರತ್ಯೇಕವಾಗಿ ಜರುಗಲಿ ಎಂದು ಮೆಹ್ತಾ ಮಂಡಿಸಿದ ವಾದವನ್ನು ವಿರೋಧಿಸಿದರು.

‘ಕೇಂದ್ರ ಸರ್ಕಾರವಾಗಲಿ ಅಥವಾ ದಿಲ್ಲಿ ಸರ್ಕಾರವಾಗಲಿ ಡೆತ್‌ ವಾರಂಟ್‌ಗೆ ಕೋರಿ ಯಾವತ್ತೂ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರಲಿಲ್ಲ. ಅಲ್ಲದೆ, ದೋಷಿಗಳು ಕಾನೂನು ಹೋರಾಟ ಮಾಡುವ ಮಾರ್ಗಗಳು ಇನ್ನೂ ಮುಕ್ತವಾಗಿವೆ. ಈ ಎಲ್ಲ ಮಾರ್ಗಗಳೂ ಬಂದ್‌ ಆಗುವವರೆಗೆ ಸರ್ಕಾರ ಕಾಯಬೇಕು. ಗಲ್ಲಿಗೇರಿಸಲು ಅಷ್ಟೊಂದು ಆತುರ ಏಕೆ?’ ಎಂದು ಪ್ರಶ್ನಿಸಿದರು.

ಇದಕ್ಕೆ ತಮ್ಮ ವಾದದಲ್ಲಿ ಉತ್ತರಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ದೋಷಿಗಳು ಬೇಕುಬೇಕೆಂದು, ಲೆಕ್ಕಾಚಾರದಿಂದ ಹಾಗೂ ಎಲ್ಲ ಯೋಜನೆಗಳನ್ನು ಹಾಕಿಕೊಂಡು ನೇಣು ಶಿಕ್ಷೆಯನ್ನು ಮುಂದೂಡಿಸುತ್ತಿದ್ದಾರೆ. ಕಾನೂನನ್ನೇ ಹತಾಶಗೊಳಿಸಲು ಯತ್ನಿಸುತ್ತಿದ್ದಾರೆ. ದೇಶದ ತಾಳ್ಮೆ ಪರೀಕ್ಷಿಸುತ್ತಿದ್ದಾರೆ. ನ್ಯಾಯಾಂಗದ ಜತೆ ಆಟವಾಡುತ್ತಿದ್ದಾರೆ’ ಎಂದರು.

‘ದೋಷಿ ಪವನ್‌ ಗುಪ್ತಾ ಇನ್ನೂ ಕ್ಯುರೇಟಿವ್‌ ಅರ್ಜಿಯನ್ನೂ ಸಲ್ಲಿಸಿಲ್ಲ. ಕ್ಷಮಾದಾನ ಅರ್ಜಿಯನ್ನೂ ಸಲ್ಲಿಸಿಲ್ಲ. ಇದು ಉದ್ದೇಶಪೂರ್ವಕ ನಡೆ. ಗಲ್ಲು ಶಿಕ್ಷೆಯನ್ನು ವಿಳಂಬ ಮಾಡುವ ತಂತ್ರವಿದು’ ಎಂದು ಅವರು ಆರೋಪಿಸಿದರು.

ಸದ್ಯಕ್ಕಿಲ್ಲ ನ್ಯಾಯ: ಪಾಪಿಗಳ ಗಲ್ಲುಶಿಕ್ಷೆ ಮುಂದೂಡಿದ ದೆಹಲಿ ಕೋರ್ಟ್!

ಹೀಗಾಗಿ, ‘ಇವರಿಗೆ ಕಾನೂನಿನ ಅಡಿ ಇನ್ನು ಸಮಯಾವಕಾಶ ನೀಡಲು ಆಗದು. ದೋಷಿಗಳನ್ನು ಪ್ರತ್ಯೇಕವಾಗಿ ನೇಣಿಗೇರಿಸಲು ಆದೇಶಿಸಬೇಕು’ ಎಂದೂ ನ್ಯಾಯಾಲಯವನ್ನು ಕೋರಿದರು.

ಅಲ್ಲದೆ, ‘ಕೇಂದ್ರ ಸರ್ಕಾರ ಈ ವಿಷಯದಲ್ಲಿ ಈವರೆಗೆ ಸುಮ್ಮನೇ ಕುಳಿತಿತ್ತು ಎಂದು ಮಾಡಲಾಗಿರುವ ಆರೋಪವು ದುರಹಂಕಾರದಿಂದ ಕೂಡಿದೆ’ ಎಂದು ಕಿಡಿಕಾರಿದರು.

ಫೆಬ್ರವರಿ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!