ಖಿನ್ನತೆ, ಚಿಂತೆ ಸಾಮಾನ್ಯ: ನಿರ್ಭಯಾ ಹಂತಕ ವಿನಯ್‌ ನಾಟಕಕ್ಕೆ ಸೋಲು!

By Kannadaprabha NewsFirst Published Feb 23, 2020, 8:47 AM IST
Highlights

ವಿನಯ್‌ ನಾಟಕಕ್ಕೆ ಸೋಲು| ನಿರ್ಭಯಾ ಪ್ರಕರಣದ ದೋಷಿ ಸಲ್ಲಿಸಿದ್ದ ಅರ್ಜಿ ವಜಾ| ಗಲ್ಲುಶಿಕ್ಷೆಗೆ ಒಳಗಾದವರಿಗೆ ಖಿನ್ನತೆ, ಚಿಂತೆ ಸಾಮಾನ್ಯ| ಆತನಿಗೆ ಉತ್ತಮ ಚಿಕಿತ್ಸೆ, ಮನೋವೈದ್ಯರು ಸಲಹೆ ನೀಡಿದ್ದು ಸಾಬೀತು| ಹೆಚ್ಚಿನ ಚಿಕಿತ್ಸೆ ಕೋರಿದ್ದ ವಿನಯ್‌ ಶರ್ಮಾ ಅರ್ಜಿ ವಜಾ| ನೇಣು ಜಾರಿ ವಿಳಂಬ ಮಾಡುವ ದೋಷಿಯ ಇನ್ನೊಂದು ತಂತ್ರ ವಿಫಲ

ನವದೆಹಲಿ[ಫೆ.23]: ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರು ದೋಷಿಗಳಲ್ಲಿ ಒಬ್ಬನಾದ ವಿನಯ್‌ ಶರ್ಮಾ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆತನಿಗೆ ಚಿಕಿತ್ಸೆ ಕೊಡಿಸಬೇಕು ಎಂದು ಕೋರಲಾಗಿದ್ದ ಅರ್ಜಿಯನ್ನು ದಿಲ್ಲಿ ನ್ಯಾಯಾಲಯ ವಜಾ ಮಾಡಿದೆ. ಈ ಮೂಲಕ ಮನೋರೋಗದ ನೆಪ ಹೇಳಿ ಗಲ್ಲು ಶಿಕ್ಷೆ ಮುಂದೂಡಿಸುವ ಆತನ ತಂತ್ರ ವಿಫಲಗೊಂಡಿದೆ.

‘ವಿನಯ್‌ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆತನ ಕೈ ಹಾಗೂ ತಲೆಗೆ ತೀವ್ರ ಪೆಟ್ಟಾಗಿದೆ. ಹೀಗಾಗಿ ತನ್ನ ತಾಯಿಯನ್ನೂ ಆತನಿಗೆ ಗುರುತಿಸಲು ಆಗಲಿಲ್ಲ. ಜೈಲಧಿಕಾರಿಗಳು ಈ ವಿಷಯ ಮುಚ್ಚಿಟ್ಟಿದ್ದಾರೆ. ವಿನಯ್‌ಗೆ ಉನ್ನತ ಮಟ್ಟದ ಚಿಕಿತ್ಸೆ ಕೊಡಿಸಬೇಕು’ ಎಂದು ಆತನ ಪರ ವಕೀಲ ಎ.ಪಿ. ಸಿಂಗ್‌ ಅವರು ಪಟಿಯಾಲಾ ಹೌಸ್‌ನ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಆದರೆ ಈ ಕೋರಿಕೆಯನ್ನು ತಿರಸ್ಕರಿಸಿದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಧರ್ಮೇಂದ್ರ ರಾಣಾ, ‘ನೇಣು ಶಿಕ್ಷೆಗೆ ಗುರಿಯಾದ ಅಪರಾಧಿಗಳು ಚಿಂತಿತರಾಗುವುದು ಹಾಗೂ ಖಿನ್ನತೆಗೆ ಒಳಗಾಗುವುದು ಸಾಮಾನ್ಯ. ಆದರೆ ಈ ಪ್ರಕರಣದಲ್ಲಿ ದೋಷಿಗೆ ಚಿಕಿತ್ಸೆ ನೀಡಲಾಗಿದೆ ಹಾಗೂ ಮಾನಸಿಕ ತಜ್ಞರಿಂದ ಆತನಿಗೆ ಸಹಾಯ ಕಲ್ಪಿಸಲಾಗಿದೆ ಎಂಬುದು ರುಜುವಾತಾಗಿದೆ’ ಎಂದು ಹೇಳಿದರು.

ವಿನಯ್‌ ಕಟ್ಟುಕತೆ- ತಿಹಾರ್‌ ಜೈಲು:

ಇದಕ್ಕೂ ಮುನ್ನ ವಾದ ಮಂಡಿಸಿದ ತಿಹಾರ್‌ ಜೈಲಧಿಕಾರಿಗಳ ಪರ ವಕೀಲ ಇರ್ಫಾನ್‌ ಅಹ್ಮದ್‌, ‘ದೋಷಿಯು ಕಟ್ಟುಕತೆ ಹೆಣೆಯುತ್ತಿದ್ದಾನೆ. ವಿನಯ್‌ ಶರ್ಮಾ ತಾನಿದ್ದ ಜೈಲಿನ ಸೆಲ್‌ನಲ್ಲಿ ಗೋಡೆಗೆ ಹಣೆ ಚಚ್ಚಿಕೊಂಡು ಗಾಯ ಮಾಡಿಕೊಂಡಿದ್ದಾನೆ. ತನ್ನ ತಾಯಿಯನ್ನೂ ಆತ ಗುರುತಿಸಿದ್ದಾನೆ. ಆದರೆ ಈಗ ಸುಳ್ಳು ಹೇಳಿಕೆ ನೀಡುತ್ತಿದ್ದಾನೆ’ ಎಂದರು.

‘ವಿನಯ್‌ಗೆ ಆಗಿದ್ದು ಬಾಹ್ಯ ಗಾಯ. ಆತನಿಗೆ ಚಿಕಿತ್ಸೆ ನೀಡಲಾಗಿದೆ. ಆತನಿಗೆ ಮಾನಸಿಕ ಕಾಯಿಲೆ ಇಲ್ಲ ಎಂದು ವೈದ್ಯಕೀಯ ದಾಖಲೆಗಳೇ ಹೇಳುತ್ತವೆ. ಜೈಲಿನ ವೈದ್ಯರು ಆತನ ನಿರಂತರ ತಪಾಸಣೆ ಮಾಡುತ್ತಿದ್ದಾರೆ’ ಎಂದು ವಾದಿಸಿ, ವೈದ್ಯಕೀಯ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿದರು.

ವಿನಯ್‌ನ ಮಾನಸಿಕ ತಪಾಸಣೆ ಮಾಡಿದ ಮಾನಸಿಕ ವೈದ್ಯರೂ ಕೋರ್ಟ್‌ಗೆ ಹಾಜರಾಗಿ, ‘ಎಲ್ಲ ನಾಲ್ವರೂ ದೋಷಿಗಳು ಮಾನಸಿಕವಾಗಿ ಆರೋಗ್ಯದಿಂದಿದ್ದಾರೆ. ತಾಯಿ-ವಕೀಲರನ್ನು ಭೇಟಿ ಮಾಡಿ ಅವರನ್ನು ವಿನಯ್‌ ಗುರುತಿಸಿದ್ದಾನೆ’ ಎಂದು ಹೇಳಿದರು.

click me!