1 ವಾರದಲ್ಲಿ ಹಗ್ಗ ತಯಾರಿಕೆಗೆ ಬಿಹಾರದ ಬಕ್ಸರ್ ಜೈಲಿಗೆ ಬಂದೀಕಾನೆ ಇಲಾಖೆ ಸೂಚನೆ| ಇದರ ಬೆನ್ನಲ್ಲೇ ಇವು ನಿರ್ಭಯಾ ರೇಪಿಸ್ಟ್‌ಗಳ ಗಲ್ಲಿನ ಹಗ್ಗಗಳಿವು ಎಂಬ ಗುಸುಗುಸು| ಹಗ್ಗ ತಯಾರಿಕೆಯಲ್ಲಿ ಖ್ಯಾತಿ ಪಡೆದಿರುವ ಬಕ್ಸರ್ ಜೈಲು| ಅಫ್ಜಲ್ ಗುರು ನೇಣಿಗೆ ಇಲ್ಲಿನ ಜೈಲನ್ನೇ ಬಳಸಲಾಗಿತ್ತು
ಪಟನಾ[ಡಿ.10]: ದಿಲ್ಲಿಯ 2012ರ ನಿರ್ಭಯಾ ಗ್ಯಾಂಗ್‌ರೇಪ್ ಪ್ರಕರಣದ ನಾಲ್ವರು ದೋಷಿಗಳಿಗೆ ನೇಣು ಫಿಕ್ಸ್ ಆಗಿದೆ. ಹೀಗಾಗಿ ನೇಣು ಹಗ್ಗವನ್ನು ತಯಾರಿಸಲು ಪ್ರಸಿದ್ಧಿ ಪಡೆದಿರುವ ಬಿಹಾರದ ಬಕ್ಸರ್ ಜೈಲಿಗೆ ಬಂದ ಒಂದು ಸೂಚನೆ. ‘ಈ ವಾರಾಂತ್ಯದೊಳಗೆ 10 ಹಗ್ಗಗಳನ್ನು ಸಿದ್ಧಪಡಿಸಿ ಕೊಡಿ’ ಎಂದು ಬಕ್ಸರ್ ಜೈಲಿಗೆ ಸರ್ಕಾರದಿಂದ ಸೂಚನೆಯೊಂದು ಬಂದಿದೆ. ಇದಾದ ಬಳಿಕ ಇವು ನಿರ್ಭಯಾ ಗ್ಯಾಂಗ್‌ರೇಪ್ ದೋಷಿಗಳಿಗೆಂದೇ ತಯಾರಿಸಲಾಗುತ್ತಿರುವ ಹಗ್ಗಗಳು ಎಂಬ ಗುಲ್ಲು ಹರಡಿದೆ. 2012ರ ಡಿಸೆಂಬರ್ 16ರಂದು ನಿರ್ಭಯಾ ಅತ್ಯಾಚಾರ ಸಂಭವಿಸಿತ್ತು.
ನಿರ್ಭಯಾ ದೋಷಿಗಳ ಗಲ್ಲುಶಿಕ್ಷೆಗೆ ದಿನಗಣನೆ, ಡಿ.16 ರಂದು ನೇಣು ಫಿಕ್ಸ್ ..!
ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಬಕ್ಸರ್ ಜೈಲು ಅಧೀಕ್ಷಕ ವಿಜಯಕುಮಾರ್ ಅರೋರಾ, ‘ಬಂದಿಖಾನೆ ನಿರ್ದೇಶನಾಲಯದಿಂದ ನಮಗೆ ಡಿಸೆಂಬರ್ 14ರೊಳಗೆ 10 ಹಗ್ಗಗಳನ್ನು ಸಿದ್ಧಪಡಿಸಿ ಕೊಡಿ ಎಂಬ ಸೂಚನೆ ಬಂದಿದೆ. ಯಾವುದಕ್ಕೆ ಈ ಹಗ್ಗಗಳನ್ನು ಬಳಸಲಾಗುತ್ತದೆ ಎಂಬುದು ನಮಗೆ ಗೊತ್ತಿಲ್ಲ. ಆದರೆ ಬಕ್ಸರ್ ಜೈಲು ನೇಣುಹಗ್ಗ ತಯಾರಿಕೆಯಲ್ಲಿ ಪರಿಣತಿ ಪಡೆದಿದ್ದು, ಇದರ ಹಿಂದೆ ದೊಡ್ಡ ಸಂಪ್ರದಾಯವೇ ಇದೆ’ ಎಂದರು.
‘ಸಂಸತ್ ದಾಳಿಕೋರ ಅಫ್ಜಲ್ ಗುರುವನ್ನು ನೇಣಿಗೇರಿಸಲು ಇಲ್ಲಿಂದ ತಯಾರಿಸಿದ ಹಗ್ಗವನ್ನೇ ಬಳಸಲಾಗಿತ್ತು. ಪಟಿಯಾಲಾ ಜೈಲಿನಿಂದ 2016-17ರಲ್ಲೂ ನಮಗೆ ಹಗ್ಗ ತಯಾರಿಕೆಗೆ ಆದೇಶ ಬಂದಿತ್ತು’ ಎಂದರು.
ಹಗ್ಗ ತಯಾರಿ ಹೇಗೆ?:
‘1 ಹಗ್ಗವನ್ನು ತಯಾರಿಸಲು 3 ದಿನ ಬೇಕು. ಹಗ್ಗ ತಯಾರಿಕೆಯಲ್ಲಿ ಯಂತ್ರಗಳ ಬಳಕೆ ಕಮ್ಮಿ. ಮಾನವ ಬಳಕೆಯೇ ಹೆಚ್ಚು. ಒಂದು ಹಗ್ಗ ತಯಾರಿಸಲು 6 ಮಂದಿಯನ್ನು ಬಳಸಲಾಗುತ್ತದೆ’ ಎಂದು ಅವರು ಹೇಳಿದರು. ‘ಕಳೆದ ಸಲ ಹಗ್ಗವನ್ನು ನಾವು ಕಳಿಸಿದಾಗ 1 ಹಗ್ಗಕ್ಕೆ 1,725 ರು. ದರ ನಿಗದಿಪಡಿಸಿದ್ದೆವು. ಈಗ ಸಣಬು ಮತ್ತು ಕಬ್ಬಿಣದ ದರ ಏರಿರುವ ಕಾರಣ ಹಗ್ಗದ ದರ ವ್ಯತ್ಯಾಸ ಆಗಬಹುದು. ನೇಣು ಹಾಕಿದಾಗ ವ್ಯಕ್ತಿಯ ಕುತ್ತಿಗೆಗೆ ಹಗ್ಗವು ಚೆನ್ನಾಗಿ ಬಿಗಿದು ಗಂಟು ಬಿಚ್ಚದಿರಲಿ ಎಂಬ ಕಾರಣಕ್ಕೆ ಅದರಲ್ಲಿ ಕಬ್ಬಿಣ ಮಿಶ್ರಣ ಮಾಡಲಾಗುತ್ತದೆ’ ಎಂದು ಅರೋರಾ ವಿವರಿಸಿದರು. ಆದರೆ ಹಗ್ಗವನ್ನು ತಯಾರಿಸಿದ ಕೂಡಲೇ ಬಳಸಬೇಕು. ಬಹುಕಾಲ ಹಾಗೆಯೇ ಇಟ್ಟರೆ ಹಾಳಾಗಿ ಬಿಡುತ್ತವೆ ಎಂದರು.
‘ಹಗ್ಗ ತಯಾರಿಸಲು ದಷ್ಟಪುಷ್ಟವ್ಯಕ್ತಿಗಳೇ ಬೇಕು. ಹೀಗಾಗಿ 1 ವಾರದಲ್ಲಿ 10 ಹಗ್ಗ ತಯಾರಿಸುವುದು ಸವಾಲಿನ ಕೆಲಸ’ ಎಂದು ಅವರು ತಿಳಿಸಿದರು.
ನಿರ್ಭಯಾ ದೋಷಿಗಳಿಗೆ ಶಿಕ್ಷೆ ಸನ್ನಿಹಿತ: ತಿಹಾರ್‌ನಲ್ಲಿ ಗಲ್ಲು ಹಾಕುವವರೇ ಇಲ್ಲ!