
ನವದೆಹಲಿ(ಜೂ.11): ಮಹತ್ವದ ಬೆಳವಣಿಗೆಯೊಂದರಲ್ಲಿ, ಪಿಎನ್‌ಬಿ ವಂಚಕರಾದ ನೀರವ್ ಮೋದಿ ಮತ್ತು ಮೇಹುಲ್ ಚೋಕ್ಸಿಗೆ ಸೇರಿದ ವಿದೇಶದಲ್ಲಿದ್ದ 1350 ಕೋಟಿ ರು.ಮೌಲ್ಯದ ವಜ್ರಾಭರಣಗಳನ್ನು ತನ್ನ ವಶಕ್ಕೆ ಪಡೆಯುವಲ್ಲಿ ಜಾರಿ ನಿರ್ದೇಶನಾಲಯ ಯಶಸ್ವಿಯಾಗಿದೆ.
2018ರ ಜುಲೈ ತಿಂಗಳಲ್ಲಿ ವಜ್ರೋದ್ಯಮಿಗಳಾದ ನೀರವ್ ಮೋದಿ ಮತ್ತು ಮೇಹುಲ್ ಚೋಕ್ಸಿ, 2350 ಕೆಜಿಯಷ್ಟುತೂಕದ ಪಾಲಿಷ್ ಮಾಡಿದ ವಜ್ರ, ಬೆಳ್ಳಿ ಆಭರಣ ಮತ್ತು ಹವಳಗಳನ್ನು ದುಬೈನಿಂದ ರಹಸ್ಯವಾಗಿ ಹಾಂಕಾಂಗ್‌ಗೆ ರವಾನಿಸಿದ್ದರು. ಇವು ಅಂದಿನಿಂದಲೂ ಹಾಂಕಾಂಗ್‌ನ ಲಾಜಿಸ್ಟಿಕ್ ಕಂಪನಿಯೊಂದರಲ್ಲೇ ಇತ್ತು. ಇಬ್ಬರ ವಿರುದ್ಧ ಭಾರತದಲ್ಲಿ ತನಿಖೆ ಆರಂಭವಾದ ಬೆನ್ನಲ್ಲೇ ಅವರಿಬ್ಬರೂ ದುಬೈನ ತಮ್ಮ ಮಳಿಗೆಗಳಿಂದ ಇವುಗಳನ್ನು ಸಾಗಿಸಿದ್ದರು.
ಭಾರತದ ಜೈಲಲ್ಲಿ ಇಲಿ ಇವೆ, ಗಡೀಪಾರು ಮಾಡಬೇಡಿ: ನೀರವ್ ಮೋದಿ ಮನವಿ
ಈ ಬಗ್ಗೆ ಖಚಿತ ಮಾಹಿತಿ ಹೊಂದಿದ್ದ ಇಡಿ ಅಧಿಕಾರಿಗಳು ಸತತ 2 ವರ್ಷದಿಂದ ಅವುಗಳ ಮೇಲೆ ನಿಗಾ ಇಟ್ಟಿದ್ದೂ, ಅಲ್ಲದೆ ಹಾಂಕಾಂಗ್ ಅಧಿಕಾರಿಗಳ ಜೊತೆಗೆ ನಿರಂತರವಾಗಿ ಮಾತುಕತೆ ನಡೆಸುವ ಮೂಲಕ ಅವುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನೀರವ್ ಮೋದಿ ಮತ್ತು ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕಿಂಗೆ 13000 ಕೋಟಿ ರು.ಗೂ ಹೆಚ್ಚಿನ ವಂಚನೆ ಎಸಗಿ ವಿದೇಶಕ್ಕೆ ಪರಾರಿಯಾಗಿದ್ದಾರೆ. ಇಬ್ಬರ ವಿರುದ್ಧವೂ ಸಿಬಿಐ, ಇಡಿ ಸೇರಿದಂತೆ ಹಲವು ತನಿಖಾ ಸಂಸ್ಥೆಗಳ ಅಕ್ರಮ ಹಣ ವರ್ಗಾವಣೆ, ವಂಚನೆ ಸೇರಿದಂತೆ ನಾನಾ ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸುತ್ತಿವೆ. ಅದರ ಭಾಗವಾಗಿ ಈ ವಜ್ರ, ಬೆಳ್ಳಿ ಮತ್ತು ಹವಳವನ್ನು ವಶಕ್ಕೆ ಪಡೆದುಕೊಂಡಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ