ಜುಲೈ ಅಂತ್ಯದೊಳಗೆ ರಾಷ್ಟ್ರ ರಾಜಧಾನಿಗೆ ಮತ್ತೊಂದು ಶಾಕ್!| ದಿಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಬಳಿಕ ಸಿಸೋಡಿಯಾ ಆತಂಕ| ಜುಲೈ ಅಂತ್ಯದ ವೇಳೆಗೆ ದಿಲ್ಲೀಲಿ 5.5 ಲಕ್ಷ ಸೋಂಕಿತರು!|
ನವದೆಹಲಿ(ಜೂ.10): ಜುಲೈ ತಿಂಗಳ ಅಂತ್ಯದ ವೇಳೆ ದೆಹಲಿಯೊಂದರಲ್ಲೇ ಕೊರೋನಾ ಸೋಂಕಿತರ ಪ್ರಮಾಣ 5.5 ಲಕ್ಷಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಮಂಗಳವಾರ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ(ಡಿಡಿಎಂಎ)ದ ಜೊತೆ ಪರಿಸ್ಥಿತಿ ನಿರ್ವಹಣೆ ಕುರಿತು ಚರ್ಚಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಸಿಸೋಡಿಯಾ, ದೆಹಲಿಯಲ್ಲಿ ಈವರೆಗೆ ಸೋಂಕು ಸಾಮುದಾಯಿಕ ಹಂತ ತಲುಪಿಲ್ಲ. ಆದರೆ, ಪ್ರಸಕ್ತ 29000ದಷ್ಟಿರುವ ಸೋಂಕಿತರ ಸಂಖ್ಯೆ ಜೂನ್ 15ರವೇಳೆಗೆ 44000ಕ್ಕೆ, ಜೂನ್ 30ರವೇಳೆಗೆ 1 ಲಕ್ಷಕ್ಕೆ ತಲುಪುವ ಸಾಧ್ಯತೆ ಇದೆ. ಇದೇ ವೇಗದಲ್ಲಿ ಸೋಂಕಿತರು ಏರಿಕೆಯಾಗುತ್ತಾ ಹೋದಲ್ಲಿ ಜು.15ರವೇಳೆಗೆ 2.15 ಲಕ್ಷ ಮತ್ತು ಜು.31ರ ವೇಳೆಗೆ 5.5 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಅಲ್ಲದೇ ಅಂಥ ಸಂದರ್ಭದಲ್ಲಿ ದೆಹಲಿಗರ ಸೋಂಕು ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ 80 ಸಾವಿರಕ್ಕೂ ಹೆಚ್ಚು ಬೆಡ್‌ಗಳ ಅನಿವಾರ್ಯತೆ ಎದುರಾಗಲಿದೆ. ಇದೇ ಕಾರಣಕ್ಕಾಗಿ ದಿಲ್ಲಿಯಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ದೆಹಲಿ ನಿವಾಸಿಗಳಿಗಾಗಿ ಮಾತ್ರವೇ ಮೀಸಲಿಡಲು ಅನುವಾಗುವ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಈ ಆದೇಶವನ್ನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ರದ್ದುಗೊಳಿಸಿದ್ದಾರೆ. ಸರ್ಕಾರದ ಆದೇಶವನ್ನು ರದ್ದುಗೊಳಿಸಿದ ಕ್ರಮ ಮರುಶೀಲನೆಗೆ ಬೈಜಲ್ ಅವರು ನಿರಾಕರಿಸಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ದೆಹಲಿಗರಿಗೆ ವಿಪತ್ತು ಕಾದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.