ಭೀಮಾ ಕೋರೆಗಾಂವ್ ಹಿಂಸೆ ಆರೋಪಿಗೆ ಪಾಕ್ ಐಎಸ್‌ಐ ನಂಟು!

By Kannadaprabha NewsFirst Published Oct 14, 2020, 8:34 AM IST
Highlights

ಭೀಮಾ ಕೋರೆಗಾಂವ್‌ ಹೋರಾಟಗಾರಗೂ ಐಎಸ್‌ಐಗೂ ಲಿಂಕ್‌| ನವಲಖಗೂ ಭಾರತದಲ್ಲಿ ಸರ್ಕಾರದ ವಿರುದ್ಧ ಹೋರಾಡುವ ಜವಾಬ್ದಾರಿ| ನವಲಖರನ್ನು ‘ನೇಮಕ’ ಮಾಡಿಕೊಂಡಿದ್ದ ಪಾಕ್‌ ಬೇಹುಗಾರಿಕೆ ಐಎಸ್‌ಐ| ಅಮೆರಿಕದಲ್ಲಿ ಐಎಸ್‌ಐ ಏಜೆಂಟ್‌ ಜತೆ ಇವರ ಸಂಪರ್ಕ| ಈ ಸಂಪರ್ಕದ ಮೂಲಕ ಪಾಕ್‌ ಜನರಲ್‌ ಜತೆ ನವಲಖ ನಂಟು| ಕೋರ್ಟ್‌ಗೆ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ ಎನ್‌ಐಎ ಉಲ್ಲೇಖ

ಮುಂಬೈ(ಅ.14): 2018ರ ಭೀಮಾ ಕೋರೆಗಾಂವ್‌ ಹಿಂಸಾಚಾರ ಪ್ರಕರಣಕ್ಕೆ ಮಹತ್ವದ ತಿರುವು ಲಭಿಸಿದೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ಎಡಪಂಥೀಯ ಕಾರ್ಯಕರ್ತ ಗೌತಮ್‌ ನವಲಖಗೂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐಎಸ್‌ಐ’ಗೂ ಸಂಬಂಧವಿತ್ತು ಎಂಬ ಸ್ಪೋಟಕ ವಿಷಯವನ್ನು ಕೋರ್ಟ್‌ಗೆ ಸಲ್ಲಿಸಿರುವ ಆರೋಪಪಪಟ್ಟಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಹಿರಂಗಪಡಿಸಿದೆ.

ಭಾರತದಲ್ಲಿ ‘ಬುದ್ಧಿಜೀವಿ’ಗಳನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟಬೇಕು ಎಂಬ ಹೊಣೆಯನ್ನು ನವಲಖ ಅವರಿಗೆ ಐಎಸ್‌ಐ ಹೊರಿಸಿತ್ತು ಎಂದು ಕಳೆದ ವಾರ ಕೋರ್ಟ್‌ಗೆ ಸಲ್ಲಿಸಲಾದ ಪೂರಕ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

2010 ಹಾಗೂ 11ರಲ್ಲಿ ನವಲಖ ಅವರು ಅಮೆರಿಕಕ್ಕೆ 3 ಬಾರಿ ಭೇಟಿ ನೀಡಿದ್ದರು. ಆಗ ಅವರು ಪಾಕಿಸ್ತಾನದ ಗುಲಾಂ ನಬಿ ಫಾಯ್‌ ಎಂಬ ಐಎಸ್‌ಐ ಏಜೆಂಟ್‌ ಜತೆ ಸಂಪರ್ಕಕ್ಕೆ ಬಂದಿದ್ದರು. ಬಳಿಕ ಫಾಯ್‌ ಅವರು ಐಎಸ್‌ಐ ಜನರಲ್‌ ಒಬ್ಬರಿಗೆ ಪರಿಚಯ ಮಾಡಿಕೊಟ್ಟಿದ್ದರು. ಆಗ ಜನರಲ್‌ ಅವರು, ನವಲಖ ಅವರಿಗೆ ಭಾರತದಲ್ಲಿ ಸರ್ಕಾರದ ವಿರುದ್ಧ ಬುದ್ಧಿಜೀವಿಗಳನ್ನು ಎತ್ತಿಕಟ್ಟುವ ಕೆಲಸಕ್ಕೆ ನಿಯೋಜಿಸಿದ್ದರು ಎಂದು ಆರೋಪಪಟ್ಟಿಯಲ್ಲಿದೆ ಎಂದು ಎನ್‌ಐಎ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದಲ್ಲದೆ ಫಾಯ್‌ನನ್ನು 2011ರಲ್ಲಿ ಅಮೆರಿಕ ತನಿಖಾ ಸಂಸ್ಥೆ ಎಫ್‌ಬಿಐ, ಐಎಸ್‌ಐ ನಂಟಿನ ಕಾರಣ ಬಂಧಿಸಿತ್ತು. ಆಗ ಫಾಯ್‌ಗೆ ಕ್ಷಮಾದಾನ ನೀಡಿ ನವಲಖ ಪತ್ರ ಬರೆದಿದ್ದರು ಆರೋಪಪಟ್ಟಿಹೇಳಿದೆ.

click me!