* ಟೋಲ್ ಪ್ಲಾಜಾಗಳಿಂದ 100 ಮೀಟರ್ ದೂರದಲ್ಲಿ ಹಳದಿ ರೇಖೆ
* ಹೊಸ ನಿಯಮ ಪ್ರಕಾರ ವಾಹನಗಳು 10 ಸೆಕೆಂಡುಗಳಿಗಿಂತ ಹೆಚ್ಚು ಕಾಯಬೇಕಾಗಿಲ್ಲ
* ವಾಹನಗಳು ಸರಾಗವಾಗಿ ಸಾಗುವ ನಿಟ್ಟಿನಲ್ಲಿ ಈ ಕ್ರಮ
ನವದೆಹಲಿ(ಮೇ.27): ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಸುಗಮವಾಗಿ ಮತ್ತು ತ್ವರಿತವಾಗಿ ಸಾಗಬೇಕು, ಪ್ರತಿ ವಾಹನವು 10 ಸೆಕೆಂಡ್‌ಗಳಿಗಿಂತ ಹೆಚ್ಚು ಕಾಯಬಾರದು ಎಂದು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಹೊಸ ನಿಯಮಗಳು ಜಾರಿಗೊಳ್ಳಲಿದ್ದು, ಇನ್ಮುಂದೆ 100 ಮೀಟರ್‌ಗಿಂತ ಹೆಚ್ಚು ದೂರ ವಾಹನಗಳ ಕ್ಯೂ ಇದ್ರೆ ಟೋಲ್ ಪ್ಲಾಜಾಗಳಲ್ಲಿ ಟೋಲ್ ಫೀ ಕಟ್ಟಬೇಕಾಗಿಲ್ಲ.
ಟೋಲ್ ಪ್ಲಾಜಾಗಳಿಂದ 100 ಮೀಟರ್ ದೂರದಲ್ಲಿ ಹಳದಿ ರೇಖೆಯನ್ನು ಎಳೆದಿರಲಾಗುತ್ತದೆ. ಆ ರೇಖೆಗಿಂತಲೂ ಹೆಚ್ಚು ವಾಹನಗಳು ಕ್ಯೂನಲ್ಲಿದ್ದರೆ ಆ ವಾಹನಗಳಿಗೆ ಟೋಲ್‌ನಲ್ಲಿ ತೆರಿಗೆ ಪಾವತಿಸಬೇಕಾಗಿಲ್ಲ. ವಾಹನಗಳು ಸರಾಗವಾಗಿ ಸಾಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ನಿಮ್ಮ ವಾಹನ 100 ಮೀಟರ್‌ಗಿಂತ ಹೆಚ್ಚಿನ ದೂರವಿದ್ದರೆ ಟೋಲ್ ಇಲ್ಲ
ಹೊಸ ಮಾರ್ಗಸೂಚಿಗಳು ಟೋಲ್ ಪ್ಲಾಜಾಗಳಲ್ಲಿ ಗರಿಷ್ಠ ಸಮಯದಲ್ಲಿ ಸಹ ಟೋಲ್ ಪ್ಲಾಜಾದಲ್ಲಿ ವಾಹನಗಳು 10 ಸೆಕೆಂಡುಗಳಿಗಿಂತ ಹೆಚ್ಚು ಸಮಯ ಕಾಯಬೇಕಾಗಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹೇಳಿದೆ. ಇದಲ್ಲದೆ 100 ಮೀಟರ್‌ಗಿಂತ ಹೆಚ್ಚು ವಾಹನಗಳನ್ನು ಕ್ಯೂ ಮಾಡಲು ಅನುಮತಿಸದಿರುವ ಮೂಲಕ ಟ್ರಾಫಿಕ್‌ನ ತಡೆರಹಿತ ಹರಿವನ್ನು ಖಚಿತಪಡಿಸುತ್ತದೆ.
ಹೆಚ್ಚಿನ ಟೋಲ್ ಪ್ಲಾಜಾಗಳಲ್ಲಿ, ಕಡ್ಡಾಯವಾಗಿ 100% ಫಾಸ್ಟ್‌ಟ್ಯಾಗ್ (FASTag) ನಂತರ ಕಾಯುವ ಪರಿಸ್ಥಿತಿ ಇಲ್ಲದಿದ್ದರೂ, ಯಾವುದೇ ಕಾರಣಗಳಿಂದಾಗಿ ಟೋಲ್ ಪ್ಲಾಜಾದಲ್ಲಿ 100 ಮೀಟರ್‌ಗಿಂತ ಹೆಚ್ಚಿನ ಉದ್ದದ ವಾಹನಗಳ ಕ್ಯೂ ಇದ್ದರೂ ಸಹ, ಟೋಲ್ ತೆರಿಗೆ ಪಾವತಿಸದೆ ವಾಹನಗಳನ್ನು ಹಾದುಹೋಗಲು ಅನುಮತಿಸಲಾಗುತ್ತದೆ.
ಇತ್ತೀಚೆಗಷ್ಟೇ ದೇಶಾದ್ಯಂತ ಒಂದು ವರ್ಷದೊಳಗೆ ಎಲ್ಲಾ ರಸ್ತೆಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈಗಿರುವ ಟೋಲ್ ಬೂತ್‌ಗಳನ್ನು ತೆಗೆದುಹಾಕಿ, ಜಿಪಿಎಸ್ ಮೂಲಕ ಟೋಲ್ ಸಂಗ್ರಹ ಮಾಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಮೂಲಕ ರಾ. ಹೆದ್ದಾರಿಗಳಲ್ಲಿ ವಾಹನ ಸಂಚಾರ ಮತ್ತಷ್ಟು ಸರಳವಾಗಲಿದೆ.
2016ರಲ್ಲಿ ಮೊದಲ ಬಾರಿಗೆ ಫಾಸ್ಟ್‌ಟ್ಯಾಗ್ ಅನ್ನು ಪರಿಚಯಿಸಲಾಯಿತು. ಆದರೆ ಫೆಬ್ರವರಿ 16, 2021 ರಿಂದ, ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳು ಎಲೆಕ್ಟ್ರಾನಿಕ್ ಟೋಲ್ ಪ್ಲಾಜಾಗಳಲ್ಲಿ ದುಪ್ಪಟ್ಟು ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.