ಉಗ್ರರಿಗೆ ಎನ್‌ಜಿಒ ಹಣ: ಕಾಶ್ಮೀರ, ಬೆಂಗ್ಳೂರಲ್ಲಿ ದಾಳಿ| ಎನ್‌ಐಎ ಅಧಿಕಾರಿಗಳಿಂದ 11 ಕಡೆ ತಪಾಸಣೆ| ಬೆಂಗಳೂರಿನ ಸ್ವಾತಿ ಸಂಸ್ಥೆಯ ಮೇಲೆ ದಾಳಿ| ವಿದೇಶಿ ದೇಣಿಗೆ ಹಣ ಉಗ್ರರ ಕೆಲಸಕ್ಕೆ ಬಳಕೆ
ಶ್ರೀನಗರ(ಅ.29): ದೇಶ-ವಿದೇಶಗಳಿಂದ ಸಮಾಜಸೇವೆಯ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಸಹಾಯ ಮಾಡುತ್ತಿದ್ದ ಕೆಲ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ಮತ್ತು ಟ್ರಸ್ಟ್‌ಗಳ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದಾಳಿ ನಡೆಸಿದೆ. ಬುಧವಾರ ಏಕಕಾಲದಲ್ಲಿ ಕಾಶ್ಮೀರದ 10 ಸ್ಥಳಗಳು ಮತ್ತು ಬೆಂಗಳೂರಿನ ಒಂದು ಸ್ಥಳದ ಮೇಲೆ ದಾಳಿ ನಡೆದಿದೆ.
ಬೆಂಗಳೂರಿನ ಸ್ವಾತಿ ಶೇಷಾದ್ರಿ ಅಸೋಸಿಯೇಟ್ಸ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರ ಜೊತೆಗೆ ಕಾಶ್ಮೀರದಲ್ಲಿ ವಿವಿಧ ಎನ್‌ಜಿಒಗಳಿಗೆ ಸಂಬಂಧಿಸಿದ ಖುರ್ರಂ ಪರ್ವೇಜ್, ಪರ್ವೇಜ್ ಅಹಮದ್ ಬುಖಾರಿ, ಪರ್ವೇಜ್ ಅಹಮದ್ ಮಟ್ಟಾಹಾಗೂ ನಾಪತ್ತೆಯಾದವರ ಪೋಷಕರ ಸಂಘ (ಎಪಿಡಿಪಿ)ದ ಅಧ್ಯಕ್ಷೆ ಪವೀರ್‍ನಾ ಅಹಂಗರ್ ಮುಂತಾದವರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆದಿದೆ. ಈ ವೇಳೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ವಕ್ತಾರೆ, ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಸೋನಿಯಾ ನಾರಂಗ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಎನ್‌ಜಿಒ ಹಾಗೂ ಟ್ರಸ್ಟ್‌ಗಳ ಮೂಲಕ ಹಣ ಸಂಗ್ರಹಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ನೆರವು ನೀಡುತ್ತಿದ್ದ ಆರೋಪದ ಸಂಬಂಧ ಅ.8ರಂದು ಎನ್‌ಐಎ ಕೇಸು ದಾಖಲಿಸಿಕೊಂಡಿತ್ತು. ಈ ಸಂಸ್ಥೆಗಳು ಸಮಾಜ ಸೇವೆಗೆಂದು ದೇಶ-ವಿದೇಶಗಳಲ್ಲಿರುವ ಅನಾಮಧೇಯ ದಾನಿಗಳಿಂದ ಹಣ ಸಂಗ್ರಹಿಸುತ್ತಿದ್ದವು ಎಂದು ಹೇಳಲಾಗಿದೆ