
ರೂಪಾಂತರಿ ಕೊರೋನಾ ಒಮಿಕ್ರಾನ್(omicron variant) ಭೀತಿ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗುತ್ತಿದೆ. ನ್ಯೂಯಾರ್ಕ್ ನಗರದಲ್ಲಿ ಕೊರೋನಾ ರೂಪಾಂತರಿಯ ಹೆಚ್ಚಳ ಹಿನ್ನೆಲೆ, ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೋಚುಲ್(Kathy Hochul) ತುರ್ತು ಪರಿಸ್ಥಿತಿ ಘೋಷಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ಹೋಚುಲ್, ನಾವು ಈ ಚಳಿಗಾಲದ ಸಂದರ್ಭದಲ್ಲಿ ಕೋವಿಡ್ ಹೆಚ್ಚಳವಾಗುವ ಎಚ್ಚರಿಕೆಯ ಚಿಹ್ನೆಗಳನ್ನು ನೋಡುತ್ತಿದ್ದೇವೆ. ನ್ಯೂಯಾರ್ಕ್ ನಗರದಲ್ಲಿ ಕೋವಿಡ್ ರೂಪಾಂತರಿ ಒಮಿಕ್ರಾನ್ ಇರುವ ಪ್ರಕರಣ ಇದುವರೆಗೆ ಬೆಳಕಿಗೆ ಬಂದಿಲ್ಲ. ಆದರೆ ಇದು ಬರುವ ಸಾಧ್ಯತೆ ಇದೆ. ಹೀಗಾಗಿ ಅನಾಹುತಕ್ಕೂ ಮುನ್ನ ಆಸ್ಪತ್ರೆಯ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಇವತ್ತು ನಾನು ಮಹತ್ವದ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದೇನೆ ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಕಾರ್ಯದಿಂದ ನಾವು ಸಾಂಕ್ರಾಮಿಕ ಪಿಡುಗು ಕಾಡುತ್ತಿರುವ ಈ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಪೂರೈಕೆಯನ್ನು ತ್ವರಿತವಾಗಿ ಮಾಡಲು ಸಾಧ್ಯವಾಗುತ್ತದೆ. ನಾವು ತುಂಬಾ ಜಾಗರೂಕವಾಗಿದ್ದು, ಸಕ್ರಿಯವಾಗಿ ಈ ವೈರಸ್‌ಗಳ ಮಾದರಿಯನ್ನು ಗಮನಿಸುತ್ತಿದ್ದೇವೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಸರ್ಕಾರದೊಂದಿಗೆ ಬೆಳವಣಿಗೆಗಳ ಬಗ್ಗೆ ತಿಳಿಯಲು ನಿಕಟ ಸಂಪರ್ಕದಲ್ಲಿದ್ದೇವೆ. ಎಂದು ಹೋಚುಲ್ ಹೇಳಿದ್ದಾರೆ. ಮೂಲಗಳ ಪ್ರಕಾರ ನ್ಯೂಯಾರ್ಕ್‌ನಲ್ಲಿ ಶುಕ್ರವಾರ 6,295 ಕೋವಿಡ್ ಪ್ರಕರಣ ದಾಖಲಾಗಿದ್ದು, 28 ಜನ ಸಾವಿಗೀಡಾಗಿದ್ದಾರೆ. ಆದರೆ ರೂಪಾಂತರಿ ಕೊರೋನಾ ಒಮಿಕ್ರಾನ್ ಇರುವ ಪ್ರಕರಣ ಇದುವರೆಗೆ ಪತ್ತೆಯಾಗಿಲ್ಲ
Corona In Karnataka: ಆನೇಕಲ್‌ನ ಮತ್ತೊಂದು ಕಾಲೇಜಿನಲ್ಲಿ ಕೊರೋನಾ ಸ್ಫೋಟ
ವಿಶ್ವ ಆರೋಗ್ಯ ಸಂಸ್ಥೆ (World Health Organization) ಶುಕ್ರವಾರ ಇತ್ತೀಚೆಗೆ ಪತ್ತೆಯಾದ ರೂಪಾಂತರಿ ಕೊರೋನಾಗೆ ಒಮಿಕ್ರಾನ್ ಎಂದು ಹೆಸರಿಟ್ಟಿತ್ತು. ಈ ಒಮಿಕ್ರಾನ್ ಕೊರೋನಾ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ(South Africa)ದಲ್ಲಿ ನವಂಬರ್ 24ರಂದು ಪತ್ತೆಯಾಗಿತ್ತು. ಇದೊಂದು ರೂಪಾಂತರಿ ಎಂದು ಖಚಿತವಾಗಿದ್ದು, ಈ ರೂಪಾಂತರಿ ದೊಡ್ಡ ಸಂಖ್ಯೆಯಲ್ಲಿ ರೂಪಾಂತರವನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ದೇಶಗಳು ಜಾಗರೂಕವಾಗಿರುವಂತೆ ತಿಳಿಸಿದೆ. ಈ ರೂಪಾಂತರಿಯಿಂದ ಮರು ಸೋಂಕು ಆಗುವುದು ಜಾಸ್ತಿ. ದಕ್ಷಿಣ ಆಫ್ರಿಕಾದ ಎಲ್ಲಾ ಪ್ರಾಂತ್ಯಗಳಲ್ಲಿ ಇದು ಈಗಾಗಲೇ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಬಿಡುಗಡೆ ಮಾಡಿರುವ ತನ್ನ ವರದಿಯಲ್ಲಿ ತಿಳಿಸಿದೆ.
ಅತ್ಯಂತ ವೇಗವಾಗಿ ಹಬ್ಬುವ, ಲಸಿಕೆಗೂ ಬಗ್ಗದ, ಡೆಲ್ಟಾಗಿಂತಲೂ (Delta) ಅಪಾಯಕಾರಿ ಎಂದು ಬಣ್ಣಿತವಾದ ಕೋವಿಡ್‌ನ ಈ ಹೊಸ ರೂಪಾಂತರಿ ಇದೀಗ ಜಾಗತಿಕ ಮಟ್ಟದಲ್ಲಿ ಭಾರೀ ತಲ್ಲಣ ಸೃಷ್ಟಿಸಿದೆ. ಇನ್ನೂ ಡೆಲ್ಟಾವೈರಸ್‌ನ ಆಘಾತದಿಂದಲೇ ಚೇತರಿಸಿಕೊಳ್ಳದ ಆಫ್ರಿಕಾ ಮತ್ತು ಯುರೋಪ್ ದೇಶಗಳಲ್ಲೇ ಈ ಹೊಸ ತಳಿ ಕಾಣಿಸಿಕೊಂಡಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
Omicron variant : ಲಸಿಕೆಗೂ ಬಗ್ಗಲ್ಲ, ಡೆಲ್ಟಾಗಿಂತಲೂ ಅಪಾಯಕಾರಿ; ಹೊಸ ರೂಪಾಂತರಿ ತಳಿಯಿಂದ ತಲ್ಲಣ
ವಿಶ್ವದ ಹಲವಾರು ದೇಶಗಳು ಸೋಂಕು ಪತ್ತೆಯಾದ ದೇಶಗಳಿಗೆ ತೆರಳುವ ಮತ್ತು ಆ ದೇಶಗಳಿಂದ ಆಗಮಿಸುವ ವಿಮಾನಗಳ ಸಂಚಾರ ನಿಷೇಧಿಸುವ ನಿರ್ಧಾರ ಕೈಗೊಂಡಿವೆ. ಜೊತೆಗೆ ಆ ದೇಶಗಳಿಂದ ಜನರ ಆಗಮನಕ್ಕೂ ನಿಷೇಧ ಹೇರಿವೆ. ಕೆಲ ದೇಶಗಳು ಆಫ್ರಿಕಾ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಿವೆಯಾದರೂ 10 ದಿನಗಳ ಕ್ವಾರಂಟೈನ್ ಸೇರಿದಂತೆ ತಾವು ವಿಧಿಸುವ ನಿಯಮಾವಳಿಗಳನ್ನು ಪಾಲಿಸುವಂತೆ ಕಠಿಣ ಸೂಚನೆ ನೀಡಿವೆ. ಈ ನಡುವೆ ಹೊಸ ರೂಪಾಂತರಿ ಕುರಿತು ಮುಂದಿನ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತುರ್ತು ಸಭೆ ನಡೆಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ