ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರ ಮಧ್ಯೆ ಹೊಡೆದಾಟವೊಂದು ನಡೆದಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನವದೆಹಲಿ: ಇತ್ತೀಚೆಗೆ ಮೆಟ್ರೋ ರೈಲು ಪ್ರಯಾಣಕ್ಕಿಂತ ಬೇರೆಯದೇ ಕಾರಣಕ್ಕೆ ಹೆಚ್ಚು ಸುದ್ದಿಯಾಗುತ್ತಿವೆ. ಅದರಲ್ಲೂ ದೆಹಲಿ ಮೆಟ್ರೋದಲ್ಲಿ ನಡೆಯದ ಘಟನೆಗಳಿಲ್ಲ, ಪ್ರೇಮಿಗಳ ಚುಂಬನ, ಸೋಶಿಯಲ್ ಮೀಡಿಯಾ ಸ್ಟಾರ್‌ಗಳ ಸ್ಟಂಟ್, ಸೀಟಿಗಾಗಿ ಮಹಿಳೆಯರ ಹೊಡೆದಾಟ ಹೀಗೆ ದೆಹಲಿ ಮೆಟ್ರೋ ಸದಾ ಸುದ್ದಿಯ ಕೇಂದ್ರ ಬಿಂದುವಾಗಿರುತ್ತದೆ. ಅದೇ ರೀತಿ ಈಗ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರ ಮಧ್ಯೆ ಹೊಡೆದಾಟವೊಂದು ನಡೆದಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವೀಡಿಯೋವನ್ನು ಗರ್ ಕೇ ಕಲೇಶ್ ಎಂಬ ಟ್ವಿಟ್ಟರ್ ಖಾತೆಯಿಂದ ಅಪ್‌ಲೋಡ್ ಮಾಡಲಾಗಿದ್ದು, ಯುವಕನೋರ್ವ ಹಿರಿಯರು ಎಂಬುದನ್ನು ನೋಡದೇ ವೃದ್ಧ ಪ್ರಯಾಣಿಕನ ಮೇಲೆ ಕೈ ಮಾಡಿದ್ದು, ಇದನ್ನು ನೋಡಿದ ಪ್ರಯಾಣಿಕರು ಮೊದಲಿಗೆ ಜಗಳ ಬಿಡಿಸಲು ಯತ್ನಿಸಿದ್ದಾರೆ. ಆದರೆ ಆತ ಸುಮ್ಮನಿರದ ಹಿನ್ನೆಲೆಯಲ್ಲಿ ವೃದ್ಧನ ಮೇಲೆ ಕೈ ಮಾಡಿದ ಆತನ ಮೇಲೆ ಎಲ್ಲರೂ ಸೇರಿ ತದುಕಿದ್ದಾರೆ. ಇದರ ವೀಡಿಯೋ ಈಗ ವೈರಲ್ ಆಗಿದೆ.
ವೀಡಿಯೋದ ಆರಂಭದಲ್ಲಿ ಟೋಫಿ ಧರಿಸಿದ ಯುವಕ ಹಿರಿಯರ ಮೇಲೆ ಹಲ್ಲೆ ಮಾಡಿದ್ದಾನೆ. ಇದಾದ ಬಳಿಕ ಆತನನ್ನು ಇತರ ಪ್ರಯಾಣಿಕರು ಬಿಡಿಸಲು ಯತ್ನಿಸಿದ್ದಾರೆ. ಆದರೆ ಆತ ಉಗ್ರ ಸ್ವರೂಪ ತಾಳಿದ್ದು, ಹಲ್ಲೆ ಮುಂದುವರಿಸಿದ್ದಾನೆ. ಇದರಿಂದ ಜೊತೆಯಲ್ಲಿದ್ದವರೆಲ್ಲಾ ಸಿಟ್ಟಿಗೆದ್ದಿದ್ದು, ಯುವಕನನ್ನು ಹಿಡಿದು ಸರಿಯಾಗಿ ಬಾರಿಸಿದ್ದಾರೆ.
ವೀಡಿಯೋ ನೋಡಿದ ಕೆಲವರು ದೆಹಲಿ ಮೆಟ್ರೋದಲ್ಲಿ ಈ ಅವಾಂತರಗಳು ಸಾಮಾನ್ಯ ಎನಿಸಿ ಬಿಟ್ಟಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಮೆಟ್ರೋ ಈಗ ದೇಶಾದ್ಯಂತ ಫೇಮಸ್ ಆಗಿದ್ದು, ಬಹುತೇಕ ಅಧಿಕಾರಿಗಳು ಕೂಡ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಆದರೆ ಈ ರೀತಿಯ ಘಟನೆಗಳು ನಡೆದರೆ ಮತ್ತೆ ಅಧಿಕಾರಿಗಳು ಖಾಸಗಿ ವಾಹನದಲ್ಲಿ ಹೋಗಲು ಶುರು ಮಾಡುತ್ತಾರೆ. ಇದರಿಂದ ಮತ್ತೆ ಟ್ರಾಫಿಕ್ ಹೆಚ್ಚಾಗಲಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹೀಗಾಗಿ ಇಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.
Kalesh inside Delhi metro over Push and shove (Uncle dusre bande ke Legs pe Chhad gaye) pic.twitter.com/WlbDW0oK3N
— Ghar Ke Kalesh (@gharkekalesh)