* ಬಾಗಲಕೋಟೆ, ಕೊಪ್ಪಳ, ಬಳ್ಳಾರಿ ಮಾರ್ಗದಲ್ಲಿ ರಸ್ತೆ
* ಹಾಲಿ ಹೆದ್ದಾರಿಗಿಂತ 76 ಕಿ.ಮೀ ಅಂತರ ಕಡಿಮೆ: ಗಡ್ಕರಿ
* ಹೆದ್ದಾರಿ ಯೋಜನೆ ವೆಚ್ಚ 40 ಸಾವಿರ ಕೋಟಿ ರು. ವೆಚ್ಚ
* ಪ್ರವಾಹ ಬಂದರೂ ಮುಳುಗದ ರೀತಿ ರಸ್ತೆ ನಿರ್ಮಾಣ
ಕೊಲ್ಲಾಪುರ(ಮಾ.28): ಪುಣೆ ಹಾಗೂ ಬೆಂಗಳೂರು ನಡುವೆ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವುದಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಣೆ ಮಾಡಿದ್ದಾರೆ.
ಹಾಲಿ ಪುಣೆ- ಬೆಂಗಳೂರು ರಸ್ತೆ 775 ಕಿ.ಮೀ. ಉದ್ದವಿದ್ದು, ಮಳೆಗಾಲದಲ್ಲಿ ಮುಳುಗಡೆಯಾಗುತ್ತಿದೆ. ಯಾವುದೇ ಸಂದರ್ಭದಲ್ಲೂ ಮುಳುಗಡೆಯಾಗದ ರೀತಿಯ ವಿನ್ಯಾಸವನ್ನು ಹೊಸ ಹೆದ್ದಾರಿ ಹೊಂದಿರಲಿದೆ ಎಂದು ಸಾಂಗ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಘೋಷಣೆ ಮಾಡಿದ್ದಾರೆ.
ಹೊಸ ಹೆದ್ದಾರಿ 699 ಕಿ.ಮೀ. ಉದ್ದವಿರಲಿದೆ (ಈಗಿರುವ ರಸ್ತೆಗಿಂತ 76 ಕಿ.ಮೀ. ಕಡಿಮೆ). 40 ಸಾವಿರ ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮೂಲಕ ಬೆಂಗಳೂರಿಗೆ ಸಂಪರ್ಕಿಸಲಿದೆ. ಈಗ ಇರುವ ಸತಾರಾ, ಕೊಲ್ಲಾಪುರ, ಬೆಳಗಾವಿ, ಹುಬ್ಬಳ್ಳಿ, ಹಾವೇರಿ ಮಾರ್ಗದ ಹೆದ್ದಾರಿ ಮೇಲಿನ ಒತ್ತಡವನ್ನು ಹೊಸ ರಸ್ತೆ ತಗ್ಗಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.
ನೂತನ ಹೆದ್ದಾರಿಯು ಮಹಾರಾಷ್ಟ್ರದ ಬರಪೀಡಿತ ಹಾಗೂ ಅಭಿವೃದ್ಧಿವಂಚಿತ ಪ್ರದೇಶಗಳಾದ ಸತಾರಾ ಜಿಲ್ಲೆಯ ಖಂಡಾಲಾ, ಫಲಠಣ, ಖಟಾವ್, ಸಾಂಗ್ಲಿ ಜಿಲ್ಲೆಯ ಖಾನಾಪುರ, ತಾಸಗಾಂವ್ ಹಾಗೂ ಕವಠೆ ಮಹಾಂಕಾಲ ಮೂಲಕ ಹಾದುಹೋಗಲಿದೆ ಎಂದು ತಿಳಿಸಿದ್ದಾರೆ.
ಹೊಸ ರಸ್ತೆ ಏಕೆ?
ಈಗ ಇರುವ ರಸ್ತೆ ಮಳೆಗಾಲದಲ್ಲಿ ಮುಳುಗಡೆಯಾಗುತ್ತಿದೆ. ಹೊಸ ರಸ್ತೆಯಲ್ಲಿ ಈ ಸಮಸ್ಯೆ ಇಲ್ಲ. ಅಲ್ಲದೆ 76 ಕಿ.ಮೀ. ಅಂತರವೂ ತಗ್ಗಲಿದೆ. ಈಗಿರುವ ರಸ್ತೆ ಮೇಲಿನ ಒತ್ತಡ ಇಳಿಯಲಿದೆ.
ಯಾವ ಮಾರ್ಗದಲ್ಲಿ ಹೆದ್ದಾರಿ: ಹೊಸ ರಸ್ತೆ ಸತಾರಾ, ಸಾಂಗ್ಲಿ, ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮೂಲಕ ಬೆಂಗಳೂರು ತಲುಪಲಿದೆ.
ಈಗಿನ ಹೆದ್ದಾರಿ ಮಾರ್ಗ: ಪುಣೆ, ಕೊಲ್ಲಾಪುರ, ಬೆಳಗಾವಿ- ಹುಬ್ಬಳ್ಳಿ- ಹಾವೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮೂಲಕ ಬೆಂಗಳೂರು ಸಂಪರ್ಕಿಸುತ್ತದೆ
775 ಕಿ.ಮೀ: ಹಾಲಿ ಹೆದ್ದಾರಿ ಉದ್ದ
699 ಕಿ.ಮೀ: ಹೊಸ ಹೆದ್ದಾರಿ ಉದ್ದ