- ಕೇಂದ್ರ ಸರ್ಕಾರದಿಂದ ಹೊಸ ಅಕ್ರೆಡಿಟೇಶನ್ ನಿಯಮ ಪ್ರಕಟ
- ಇದೇ ಮೊದಲ ಬಾರಿ ಆನ್‌ಲೈನ್ ಮಾಧ್ಯಮಗಳಿಗೂ ಮಾನ್ಯತೆ
- ಸರ್ಕಾರದ ಮಾನ್ಯತೆ ಪಡೆದ ಪತ್ರಕರ್ತ ಎಂದು ಬರೆದುಕೊಳ್ಳುವಂತಿಲ್ಲ
ನವದೆಹಲಿ(ಫೆ.09): ಪತ್ರಕರ್ತರು(Journalist) ದೇಶದ ಭದ್ರತೆ(national security), ಸಾರ್ವಭೌಮತೆ ಹಾಗೂ ಸಮಗ್ರತೆಗೆ ವ್ಯತಿರಿಕ್ತವಾಗಿ ನಡೆದುಕೊಂಡರೆ ಅವರಿಗೆ ಸರ್ಕಾರದಿಂದ ನೀಡಿರುವ ಮಾನ್ಯತೆ ರದ್ದುಪಡಿಸುವುದಾಗಿ ಕೇಂದ್ರ ಸರ್ಕಾರ ಹೊಸ ನಿಯಮಾವಳಿ(New Guidelines) ಪ್ರಕಟಿಸಿದೆ. ಸಾರ್ವಜನಿಕ ಶಿಸ್ತು, ನೈತಿಕತೆ, ಗೌರವ, ವಿದೇಶಗಳೊಂದಿಗಿನ ಸಂಬಂಧಕ್ಕೆ ಅಪಚಾರ ಎಸಗಿದರೂ ಮಾನ್ಯತೆ ರದ್ದಾಗಲಿದೆ. ಜೊತೆಗೆ, ನ್ಯಾಯಾಂಗ ನಿಂದನೆ, ಮಾನನಷ್ಟಅಥವಾ ಅಪರಾಧಕ್ಕೆ ಪ್ರಚೋದನೆ ನೀಡುವಂತಹ ಪ್ರಕರಣಗಳಲ್ಲಿ ತೊಡಗಿಕೊಂಡರೂ ಕೂಡ ಪತ್ರಕರ್ತರ ಮಾನ್ಯತೆ ರದ್ದುಪಡಿಸುವುದಕ್ಕೆ ಅವಕಾಶ ನೀಡಲಾಗಿದೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸೋಮವಾರ ‘ದಿ ಸೆಂಟ್ರಲ್ ಮೀಡಿಯಾ ಅಕ್ರೆಡಿಟೇಶನ್ ಗೈಡ್‌ಲೈನ್ಸ್-2022’(central media accreditation) ಪ್ರಕಟಿಸಿದೆ. ಅದರಲ್ಲಿ ಪತ್ರಕರ್ತರ ಮಾನ್ಯತೆ ರದ್ದುಪಡಿಸುವ ಅಥವಾ ಅಮಾನತಿನಲ್ಲಿಡುವ ಬಗ್ಗೆ ಮಾರ್ಗಸೂಚಿಗಳಿವೆ. ಜೊತೆಗೆ, ಇದೇ ಮೊದಲ ಬಾರಿ ಆನ್‌ಲೈನ್ ಸುದ್ದಿ ಮಾಧ್ಯಮಗಳಿಗೂ ಮಾನ್ಯತೆ ನೀಡಲು ಆರಂಭಿಸಲಾಗಿದೆ. ಆದರೆ, ಬೇರೆ ಬೇರೆ ಸುದ್ದಿ ಮಾಧ್ಯಮಗಳಿಂದ ಸುದ್ದಿ ಸಂಗ್ರಹಿಸಿ ಪ್ರಕಟಿಸುವ ನ್ಯೂಸ್ ಅಗ್ರಿಗೇಟರ್‌ಗಳನ್ನು ಮಾನ್ಯತೆಗೆ ಪರಿಗಣಿಸಿಲ್ಲ.
State Against Journalists: ಪತ್ರಕರ್ತರ ದನಿ ಅಡಗಿಸಲು ಪೊಲೀಸ್ ಬಳಕೆ ಆಗಕೂಡದು: ಸುಪ್ರೀಂ ಕೋರ್ಟ್
ಪತ್ರಕರ್ತರಿಗೆ ಮಾನ್ಯತೆ ರದ್ದು ಶಿಕ್ಷೆ:
ಹೊಸ ನಿಯಗಳಡಿ ಒಬ್ಬ ಪತ್ರಕರ್ತ ಭಾರತದ ಭದ್ರತೆ, ಸಮಗ್ರತೆ ಹಾಗೂ ಸಾರ್ವಭೌಮತೆಗೆ ದುರಾಗ್ರಹಪೂರ್ವಕವಾಗಿ ನಡೆದುಕೊಂಡರೆ, ವಿದೇಶಗಳ ಜೊತೆಗಿನ ಸ್ನೇಹಕ್ಕೆ ಧಕ್ಕೆ ಬರುವಂತೆ, ಸಾರ್ವಜನಿಕ ಶಿಸ್ತು, ನೈತಿಕತೆ ಅಥವಾ ಗೌರವಕ್ಕೆ ಅಪಚಾರ ಎಸಗುವಂತೆ ನಡೆದುಕೊಂಡರೆ ಅಥವಾ ನ್ಯಾಯಾಂಗ ನಿಂದನೆ, ಮಾನನಷ್ಟಹಾಗೂ ಅಪರಾಧಕ್ಕೆ ಪ್ರಚೋದನೆ ನೀಡುವಂತಹ ಪ್ರಕರಣದಲ್ಲಿ ತೊಡಗಿಕೊಂಡರೆ ಆತನಿಗೆ ಸರ್ಕಾರದಿಂದ ನೀಡಿರುವ ಮಾನ್ಯತೆ ರದ್ದುಪಡಿಸಬಹುದಾಗಿದೆ. ಆ ಪತ್ರಕರ್ತ ಅಥವಾ ಆತನ ಸಂಸ್ಥೆ ಸುಳ್ಳು ಮಾಹಿತಿ ನೀಡಿರುವುದು ಸಾಬೀತಾದರೂ ಮಾನ್ಯತೆ ರದ್ದುಪಡಿಸಬಹುದಾಗಿದೆ.
ಇಂತಹ ಸಂದರ್ಭದಲ್ಲಿ ಪತ್ರಕರ್ತ ಅಥವಾ ಆತನ ಸಂಸ್ಥೆಯನ್ನು ಕನಿಷ್ಠ ಎರಡು ವರ್ಷದಿಂದ ಐದು ವರ್ಷದವರೆಗೆ ಹೊಸತಾಗಿ ಮಾನ್ಯತೆಗೆ ಅರ್ಜಿ ಸಲ್ಲಿಸುವುದರಿಂದ ಹೊರಗಿಡಲಾಗುತ್ತದೆ. ಅಥವಾ ಇದನ್ನು ಸೆಂಟ್ರಲ್ ಮೀಡಿಯಾ ಅಕ್ರೆಡಿಟೇಶನ್ ಸಮಿತಿ ನಿರ್ಧರಿಸುತ್ತದೆ.
ಸಾವು ಬದುಕಿನ ಹೋರಾಟದಲ್ಲಿ ಚೀನಾ ಪತ್ರಕರ್ತೆ; ವುಹಾನ್ ಸತ್ಯ ಹೇಳಿ ಅರೆಸ್ಟ್ ಆಗಿದ್ದ ಝಾಂಗ್!
ಇನ್ನು, ಮಾನ್ಯತೆ ಪಡೆದ ಪತ್ರಕರ್ತರು ತಮ್ಮ ವಿಸಿಟಿಂಗ್ ಕಾರ್ಡ್, ಸಾಮಾಜಿಕ ಜಾಲತಾಣದ ಪ್ರೊಫೈಲ್, ಲೆಟರ್‌ಹೆಡ್ ಅಥವಾ ಇನ್ನಾವುದೇ ಪ್ರಕಟಿತ ಕೃತಿಯಲ್ಲಿ ‘ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಪತ್ರಕರ್ತ’ ಎಂದು ಬರೆದುಕೊಳ್ಳುವುದನ್ನು ನಿಷೇಧಿಸಲಾಗಿದೆ.
25 ಸದಸ್ಯರ ಸಮಿತಿ ರಚನೆ:
ಪತ್ರಕರ್ತರ ಮಾನ್ಯತೆ ಬಗ್ಗೆ ನಿರ್ಧಾರ ಕೈಗೊಳ್ಳಲು ವಾರ್ತಾ ಸಚಿವಾಲಯ 25 ಸದಸ್ಯರ ಹೊಸ ಸಮಿತಿ ರಚಿಸಲಿದೆ. ಸೆಂಟ್ರಲ್ ಮೀಡಿಯಾ ಅಕ್ರೆಡಿಟೇಶನ್ ಕಮಿಟಿ (ಸಿಎಂಎಸಿ) ಹೆಸರಿನ ಈ ಸಮಿತಿಯ ಅವಧಿ 2 ವರ್ಷ. ಪಿಐಬಿಯ ಪ್ರಧಾನ ನಿರ್ದೇಶಕರು ಇದರ ಚೇರ್ಮನ್ ಆಗಿರುತ್ತಾರೆ. ಪತ್ರಕರ್ತರ ಮಾನ್ಯತೆ ರದ್ದುಪಡಿಸುವ ಅಥವಾ ಅಮಾನತುಗೊಳಿಸುವ ಅಧಿಕಾರ ಈ ಸಮಿತಿಗಿರುತ್ತದೆ.
ಆನ್‌ಲೈನ್ ಸುದ್ದಿ ಮಾಧ್ಯಮಕ್ಕೆ ಮಾನ್ಯತೆ:
ಇದೇ ಮೊದಲ ಬಾರಿ ಡಿಜಿಟಲ್ ನ್ಯೂಸ್ ವೆಬ್‌ಸೈಟುಗಳು ಕೂಡ ಮಾನ್ಯತೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಂತಹ ನ್ಯೂಸ್ ವೆಬ್‌ಸೈಟ್ ನಡೆಸುವವರು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಯಮ 18ಕ್ಕೆ ಅನುಗುಣವಾಗಿ ಮಾಹಿತಿ ಸಲ್ಲಿಸಬೇಕು. ಅವರ ಡಿಜಿಟಲ್ ಮಾಧ್ಯಮ ಕನಿಷ್ಠ ಒಂದು ವರ್ಷದಿಂದ ಅಸ್ತಿತ್ವದಲ್ಲಿರಬೇಕು, ವೆಬ್‌ಸೈಟಿಗೆ ಕಳೆದ ಆರು ತಿಂಗಳಿನಲ್ಲಿ ಪ್ರತಿ ತಿಂಗಳು ಎಷ್ಟುಮಂದಿ ಭೇಟಿ ನೀಡಿದ್ದಾರೆಂಬುದನ್ನು ಆಡಿಟರ್ ಮೂಲಕ ದೃಢೀಕರಿಸಿ ಸಲ್ಲಿಸಬೇಕು. ವೆಬ್‌ಸೈಟಿಗೆ ನೋಂದಾಯಿತ ಕಚೇರಿ ಇರಬೇಕು ಮತ್ತು ಅದರ ವರದಿಗಾರ ದೆಹಲಿಯಲ್ಲಿರಬೇಕು. ಸುಳ್ಳು ಮಾಹಿತಿ ಸಲ್ಲಿಸುವವರು ಮುಂದಿನ ಮೂರು ವರ್ಷಗಳ ಕಾಲ ಮಾನ್ಯತೆಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ಹೊಸ ನಿಯಮಾವಳಿಯಲ್ಲಿ ಹೇಳಲಾಗಿದೆ.