ಲೇವಾದೇವಿದಾರರ ಬೆದರಿಕೆ ಅಥವಾ ಸಮಾಜಘಾತುಕ ಶಕ್ತಿಗಳ ಭಯದಿಂದ ಮೌನವಾಗಿ ನಲುಗುತ್ತಿರುವವರಿಗೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಕರಮಲ ತಾಲೂಕಿನ ಪೋತ್ರೆ ನಿಲಜ್ ಗ್ರಾಮದ ಗ್ರಾಮಸಭೆಯು ವಿಶಿಷ್ಟ ಪರಿಹಾರವನ್ನು ಪರಿಚಯಿಸಿದೆ.
ಸೊಲ್ಲಾಪುರ (ಮಾ.16): ಲೇವಾದೇವಿದಾರರ ಬೆದರಿಕೆ ಅಥವಾ ಸಮಾಜಘಾತುಕ ಶಕ್ತಿಗಳ ಭಯದಿಂದ ಮೌನವಾಗಿ ನಲುಗುತ್ತಿರುವವರಿಗೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಕರಮಲ ತಾಲೂಕಿನ ಪೋತ್ರೆ ನಿಲಜ್ ಗ್ರಾಮದ ಗ್ರಾಮಸಭೆಯು ವಿಶಿಷ್ಟ ಪರಿಹಾರವನ್ನು ಪರಿಚಯಿಸಿದೆ. ಸಂಕಷ್ಟದಲ್ಲಿರುವವರು ತಮ್ಮ ತೋರುಬೆರಳನ್ನು ಎತ್ತಿದರೆ ಸಾಕು, ಅದನ್ನು ನೋಡಿದವರು ತಕ್ಷಣ ಅವರ ಸಹಾಯಕ್ಕೆ ಧಾವಿಸಬೇಕು ಎಂಬ ನಿರ್ಣಯವನ್ನು ಮಾ.8ರ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಅಂಗೀಕರಿಸಲಾಗಿದೆ.
ಬೆದರಿಕೆಗೆ ಒಳಗಾದ, ಸಹಾಯದ ಅಗತ್ಯವಿರುವ ವ್ಯಕ್ತಿ ತನ್ನ ತೋರುಬೆರಳನ್ನು ಎತ್ತಬೇಕು. ಇದರಿಂದ ಆ ವ್ಯಕ್ತಿಗೆ ತುರ್ತು ಸಹಾಯದ ಅಗತ್ಯವಿದೆ ಎಂದು ಇತರರಿಗೆ ಸೂಚನೆ ಸಿಗುತ್ತದೆ. ಆಗ ಅವರು ತಕ್ಷಣ ಸಹಾಯಕ್ಕೆ ಧಾವಿಸುತ್ತಾರೆ. ಈ ಕ್ರಮವು ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಅಪಾರ ಸಹಾಯ ಮಾಡುತ್ತದೆ. ಸಮಸ್ಯೆ ಗಂಭೀರವಾಗಿದ್ದರೆ ಪೊಲೀಸರಿಗೆ ಸಂಬಂಧಿಸಿದ ವಿವಿಧ ಸಹಾಯವಾಣಿಗಳನ್ನು ಸಂಪರ್ಕಿಸಲಾಗುತ್ತದೆ ಎಂದು ಗ್ರಾಮಸಭೆ ತಿಳಿಸಿದೆ.
ಯೋಚನೆ ಮೂಡಿದ್ದು ಹೇಗೆ?: ಇದು ಪೋತ್ರೆ ನಿಲಜ್ ಗ್ರಾಮದ ಸರಪಂಚ ಅಂಕುಶ್ ಶಿಂಧೆ ಅವರ ಈ ಪರಿಕಲ್ಪನೆ. ‘ಸಾಮಾಜಿಕ ಕಾರ್ಯಕರ್ತ ಪ್ರಮೋದ್ ಜಿಂಜಾಡೆ ಅವರೊಂದಿಗೆ ಚರ್ಚೆಯ ಸಮಯದಲ್ಲಿ ಈ ಯೋಚನೆ ಮೂಡಿತು. ಅವರು ವಿಧವೆಯರಿಗೆ ಸಂಬಂಧಿಸಿದ ಅನಿಷ್ಠ ಪದ್ಧತಿಗಳ ನಿರ್ಮೂಲನೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಹೊಸ ಯೋಜನೆಯನ್ನು ಜನರಲ್ಲಿ ಪ್ರಚಾರ ಮಾಡಲು ಗ್ರಾಮಸಭೆ ಚಿಂತನೆ ನಡೆಸುತ್ತಿದೆ. ಕಷ್ಟದಲ್ಲಿರುವ ವ್ಯಕ್ತಿ ತಾನಿರುವ ಸ್ಥಳ, ಫೋಟೋ ಮತ್ತು ವಿಡಿಯೊವನ್ನು ಹಂಚಿಕೊಳ್ಳಲು ಸಾಧ್ಯವಾಗುವಂತೆ ವಾಟ್ಸಾಪ್ ಸಂಖ್ಯೆಯನ್ನು ಪರಿಚಯಿಸುವಂತೆ ಗ್ರಾಮಸಭೆಯು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಆಗ ಮಾಹಿತಿಯನ್ನು ಪೊಲೀಸರಿಗೆ ರವಾನಿಸಿ ಅವರನ್ನು ರಕ್ಷಿಸಲು ಸಹಾಯವಾಗುತ್ತದೆ. ತಮ್ಮ ಕಷ್ಟವನ್ನು ಇತರರ ಎದುರು ಹೇಳಲು ಧೈರ್ಯ ಸಾಲದವರಿಗೆ ಈ ಉಪಕ್ರಮ ನೆರವಾಗುತ್ತದೆ’ ಎಂದು ಶಿಂಧೆ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ಜೀವನದ ಕುರಿತು ಇಂದು 3 ಗಂಟೆ ಕುತೂಹಲಕಾರಿ ಪಾಡ್ ಕಾಸ್ಟ್
6,000 ಜನಸಂಖ್ಯೆ ಹೊಂದಿರುವ ಪೋತ್ರೆ ನಿಲಜ್ ಗ್ರಾಮವು ಸಾಮಾಜಿಕ ದುಷ್ಕೃತ್ಯಗಳ ವಿರುದ್ಧ ನಿಲ್ಲುವ ಮೂಲಕ ಪ್ರಗತಿಪರ ಹಾದಿಯನ್ನು ಅನುಸರಿಸಿದೆ. 2022ರಲ್ಲಿ ಕೊಲ್ಹಾಪುರ ಜಿಲ್ಲೆಯ ಹೆರ್ವಾಡ್ ಗ್ರಾಮ ಪಂಚಾಯತಿಯು ವಿಧವೆಯರ ಮಂಗಳಸೂತ್ರ, ಕಾಲಿನ ಉಂಗುರ ಮತ್ತು ಸಿಂಧೂರ ತೆಗೆಯುವ ಪದ್ಧತಿಯನ್ನು ನಿಷೇಧಿಸುವ ಮೂಲಕ ಕ್ರಾಂತಿಕಾರಿ ಹೆಜ್ಜೆಯಿಟ್ಟಿತ್ತು. ಆ ನಿರ್ಣಯವನ್ನು ಅಂಗೀಕರಿಸಿದ ಸೊಲ್ಲಾಪುರ ಜಿಲ್ಲೆಯ ಮೊದಲ ಗ್ರಾಮ ಎಂಬ ಹೆಗ್ಗಳಿಕೆಯೂ ಪೋತ್ರೆ ನಿಲಜ್‌ಗೆ ಸಲ್ಲುತ್ತದೆ.