ಲೋಕಸಭಾ ಚುನಾವಣೆಗೆ ಮೊದಲು ಕಾಂಗ್ರೆಸ್ ಸಂಕಷ್ಟದ ಮೇಲೆ ಸಂಕಷ್ಟ ಎದುರಿಸುತ್ತಿದೆ. ಇದೀಗ ಪಂಜಾಬ್ ಕಾಂಗ್ರೆಸ್‌ನಲ್ಲಿ ಬಿರುಗಾಳಿ ಎದ್ದಿದೆ. ನವಜೋತ್ ಸಿಂಗ್ ಸಿಧು ಮತ್ತೆ ಬಿಜೆಪಿ ಸೇರಿಕೊಳ್ಳುವ ಲಕ್ಷಣಗಳು ಕಾಣುತ್ತಿದೆ.
ಚಂಡಿಘಡ(ಜ.29) ಲೋಕಸಭಾ ಚುನಾವಣೆಗೆ ಕೆಲ ತಿಂಗಳು ಮಾತ್ರ ಬಾಕಿ. ತಯಾರಿಗಳು ಭರ್ಜರಿಯಾಗಿ ನಡೆಯುತ್ತಿರುವಾಗಲೇ ಇಂಡಿಯಾ ಮೈತ್ರಿ ಒಕ್ಕೂಟಕ್ಕೆ ತೀವ್ರ ಹಿನ್ನಡೆ ಎದುರಾಗುತ್ತಿದೆ. ಬಿಹಾರದಲ್ಲಿ ನಿತೀಶ್ ಮೈತ್ರಿ ಮುರಿದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಪಂಜಾಬ್‌ನಲ್ಲಿ ಕಾಂಗ್ರೆಸ್ ಪಾಳಯದಲ್ಲಿ ತಳಮಳ ಶುರುವಾಗಿದೆ.ಜೈಲಿನಿಂದ ಮರಳಿದ ಬಳಿಕ ಕಾಂಗ್ರೆಸ್‌ನಿಂದ ದೂರ ಸರಿದಿರುವ ನಾಯಕ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಮತ್ತೆ ಬಿಜೆಪಿ ಸೇರಿಕೊಳ್ಳುವ ಸಾಧ್ಯತೆ ಗೋಚರಿಸಿದೆ. ಇಂದು ಅಮೃತಸರದಲ್ಲಿ ನಡೆದ ಕಾಂಗ್ರೆಸ್ ಸಭೆಗೂ ಸಿಧು ಗೈರಾಗಿದ್ದಾರೆ.
ಕಾಂಗ್ರೆಸ್ ಸಮಾವೇಶ, ರ್ಯಾಲಿಗಳಿಂದ ದೂರವಿರುವ ಸಿಧು, ಇತ್ತೀಚೆಗೆ ತಮ್ಮ ಬೆಂಬಲಿಗರೊಂದಿಗೆ ಸಮಾವೇಶ, ರ್ಯಾಲಿ ನಡೆಸಿ ಗಮನಸೆಳೆದಿದ್ದರು. ಇದರ ಬೆನ್ನಲ್ಲೇ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ನವಜೋತ್ ಸಿಂಗ್ ಸಿಧು, ಬಿಜೆಪಿ ಹಾಗೂ ಬಿಜೆಪಿ ನಾಯಕರ ಬಗ್ಗೆ ಮೃದು ಧೋರಣೆ ತಳೆದಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಸದಾ ಹರಿಹಾಯುತ್ತಿದ್ದ ಸಿಧು, ಈ ಬಾರಿ ಪರವಾಗಿ ಮಾತನಾಡಿದ್ದಾರೆ. ಈ ಎಲ್ಲಾ ಬೆಳವಣಿಗೆ ಸಿಧು ಬಿಜೆಪಿ ಸೇರಿಕೊಳ್ಳಲಿದ್ದಾರೆ ಅನ್ನೋ ಮಾತುಗಳಿಗೆ ಪುಷ್ಠಿ ನೀಡಿದೆ.
ಉಚಿತ ಯೋಜನೆಯಿಂದ ಸಾಲದ ಸುಳಿಯಲ್ಲಿ ಪಂಜಾಬ್, ದಾಖಲೆ ಬಹಿರಂಗಪಡಿಸಿದ ಸಿಧು!
ನವಜೋತ್ ಸಿಂಗ್ ಸಿಧು ಆಪ್ತ ಕಮಲಜೀತ್ ಸಿಂಗ್ ಕದವಾಲ್ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿಕೊಂಡಿದ್ದಾರೆ. ಕಳೆದ ವರ್ಷ ಸುನಿಲ್ ಜಕಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಾಂಗ್ರೆಸ್ ತೊರೆದ ಬಳಿಕ ಪಂಜಾಬ್‌ನಲ್ಲಿ ಕಾಂಗ್ರೆಸ್ ಅಸ್ಥಿತ್ವ ಕಳೆದುಕೊಂಡಿದೆ. ಇತ್ತ ಆಮ್ ಆದ್ಮಿ ಪಾರ್ಟಿ ಪಕ್ಷ ಬಲವಾಗಿ ಬೇರೂರಿದೆ. ರೈತರ ಪ್ರತಿಭಟನೆಗೆ ಬೆಂಬಲ ನೀಡುವ ಮೂಲಕ ಪಂಜಾಬ್‌ನಲ್ಲಿ ಅಧಿಕಾರ ಹಿಡಿದ ಆಪ್, ಲೋಕಸಭೆಯಲ್ಲಿ ಏಕಾಂಗಿ ಹೋರಾಟದ ಸೂಚೆನೆ ನೀಡಿದೆ.
ಸಿಧು ಆಪ್ ಪಕ್ಷಕ್ಕೆ ಸೇರಿಕೊಳ್ಳಲಿದ್ದಾರೆ ಅನ್ನೋ ಗುಮಾನಿ ಕಳೆದ ವಿಧಾನಸಭಾ ಚುನಾವಣೆ ವೇಳೆ ಹರಿದಾಡಿತ್ತು. ಸದ್ಯ ಆಪ್‌ನಲ್ಲಿ ಸಿಎಂ ಸೇರಿದಂತೆ ಪ್ರಮುಖ ಸ್ಥಾನಗಳು ಬದಲಾವಣೆಯಾಗುವ ಸಾಧ್ಯತೆಗಳಿಲ್ಲ. ಇತ್ತ ಪಂಜಾಬ್ ಬಿಜೆಪಿಯಲ್ಲಿ ಪ್ರಮುಖ ನಾಯಕರ ಕೊರತೆ ಕಾಡುತ್ತಿದೆ. ಸಿಂಗ್ ಸಮುದಾಯದ ಪ್ರಬಲ ಅಭ್ಯರ್ಥಿಗಳ ಹುಡುಕಾಟದಲ್ಲಿರುವ ಬಿಜೆಪಿಗೆ ಸಿಧು ಸೇರಿಕೊಳ್ಳುವ ಸಾಧ್ಯತೆಗಳು ಕಾಣಿಸುತ್ತಿದೆ.
ಪ್ರತಿದಿನ 80 ಕೋಟಿ ಸಾಲ ಪಡೆದು ಪಂಜಾಬ್‌ನಲ್ಲಿ ಆಪ್ ಸರ್ಕಾರ ನಡೆಸುತ್ತಿದೆ: ನವಜೋತ್ ಸಿಂಗ್ ಸಿಧು ಆರೋಪ!