* ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನವಜೋತ್‌ಸಿಂಗ್ ಸಿಧು
* ನಿಂತಲ್ಲಿ ನಿಲ್ಲದ ಸಿಧು ಇತಿಹಾಸ, ಎಲ್ಲರ ವಿರುದ್ಧವೂ ಸದಾ ಮುನಿಸು
* ಮೊದಲಿನಿಂದಲೂ ಬಂಡಾಯಗಾರ, ನಿಂತಲ್ಲಿ ನಿಲ್ಲದ ವ್ಯಕ್ತಿತ್ವ
ನವದೆಹಲಿ(ಸೆ.29).: ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ(Punjab Congress President) ಸ್ಥಾನಕ್ಕೆ ರಾಜೀನಾಮೆ ನೀಡಿದ ನವಜೋತ್‌ಸಿಂಗ್ ಸಿಧು(Navjot Singh Sidhu) ಮೊದಲಿನಿಂದಲೂ ಬಂಡಾಯಗಾರ, ನಿಂತಲ್ಲಿ ನಿಲ್ಲದ, ಯಾವುದೇ ಕ್ಷಣದಲ್ಲೇ ಯಾವುದೇ ನಿರ್ಧಾರ ಬೇಕಾದರೂ ತೆಗೆದುಕೊಳ್ಳಬಹುದಾದ ವ್ಯಕ್ತಿತ್ವ.
2004ರಲ್ಲಿ ಬಿಜೆಪಿ(BJP) ಸೇರ್ಪಡೆಯೊಂದಿಗೆ ರಾಜಕೀಯ ಕಾಲಿಟ್ಟಸಿಧು, 2004ರಲ್ಲಿ ಲೋಕಸಭೆಗೆ(Loksabha) ಆಯ್ಕೆಯಾದರು. 2014ರವರೆಗೆ ಅವರು ಬಿಜೆಪಿ ಸಂಸದರಾಗಿದ್ದರು. 2014ರಲ್ಲಿ ಬಿಜೆಪಿ ಅವರಿಗೆ ಲೋಕಸಭೆ ಟಿಕೆಟ್ ನಿರಾಕರಿಸಿತು. ಅದಕ್ಕೆ ಪ್ರತಿಯಾಗಿ 2016ರಲ್ಲಿ ಅವರನ್ನು ರಾಜ್ಯಸಭೆಗೆ ಕಳಿಸಿತು. ಆದರೆ ಹೈಕಮಾಂಡ್(Highcommand) ವಿರುದ್ಧ ಮುನಿಸಿಕೊಂಡ ಸಿಧು ರಾಜ್ಯಸಭೆ(Rajya Sabha) ಸದಸ್ಯತ್ವ ಮತ್ತು ಬಿಜೆಪಿಗೆ ರಾಜೀನಾಮೆ ಸಲ್ಲಿಸಿದರು.
undefined
2017ರಲ್ಲಿ ಕಾಂಗ್ರೆಸ್(Congress) ಸೇರಿದ ಸಿಧು ವಿಧಾನಸಭೆಗೆ ಆಯ್ಕೆಯಾದರು. ಜೊತೆಗೆ ಅಮರೀಂದರ್ ಸಂಪುಟದಲ್ಲಿ ಡಿಸಿಎಂ ಪಟ್ಟಕ್ಕಾಗಿ ಪಟ್ಟುಹಿಡಿದರು. ಪಟ್ಟಸಿಗದೇ ಇದ್ದಾಗ ಪದೇ ಪದೇ ಅಮರೀಂದರ್ ವಿರುದ್ಧ ಟೀಕಾಪ್ರಹಾರ ನಡೆಸುತ್ತಲೇ ಬಂದರು. ಸಚಿವ ಹುದ್ದೆಯಲ್ಲಿದ್ದರೂ ಸರ್ಕಾರವನ್ನು ಟೀಕಿಸುವುದು ಬಿಡಲಿಲ್ಲ.
ಈ ನಡುವೆ ರಾಜ್ಯಾಧ್ಯಕ್ಷ ಪಟ್ಟಕ್ಕೆ ಸಿಧು ಸ್ಕೆಚ್ ಹಾಕಿದರು. ಅದಕ್ಕೆ ಹೈಕಮಾಂಡ್ ಒಪ್ಪದಿದ್ದಾಗ ಆಮ್‌ಆದ್ಮಿ ಸೇರಲು ಸಿದ್ಧತೆ ನಡೆಸಿದ್ದರು. ಆದರೆ ಅಲ್ಲೂ ಸಿಎಂ ಪಟ್ಟಸಿಗುವುದು ಖಾತ್ರಿಯಾಗದೇ ಇದ್ದಾಗ ಮತ್ತೆ ಬಿಜೆಪಿ ಸೇರುವ ವದಂತಿಗಳೂ ಹಬ್ಬಿದ್ದವು. ಕೊನೆಗೆ ರಾಜ್ಯದಲ್ಲಿ ಪಕ್ಷ ಉಳಿಸಿಕೊಳ್ಳುವ ಸಲುವಾಗಿ ಸಿಧುಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಲಾಯಿತು.
ಹುದ್ದೆ ವಹಿಸಿಕೊಂಡ ದಿನದಿಂದಲೂ ಸಿಎಂಗೆ ವಿರುದ್ಧವಾಗಿ ಚಟುವಟಿಕೆ ನಡೆಸಿಕೊಂಡೇ ಬಂದು ಎಲ್ಲರ ಕೆಂಗಣ್ಣಿಗೆ ಗುರಿಯಾದರು. ಇದೀಗ ತಮ್ಮ ಆಪ್ತ ಸಿಎಂ ಚನ್ನಿ ಮತ್ತು ಹೈಕಮಾಂಡ್ ನಿರ್ಧಾರ ವಿರೋಧಿಸಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.