ವಿಶ್ವದ ಅತಿ ಉದ್ದದ ಐಷಾರಾಮಿ ನದಿಯಾನ ಗಂಗಾ ವಿಲಾಸ..! ಕ್ರೂಸ್‌ ಹಡಗು ಯಾನದ ವೈಶಿಷ್ಟ್ಯ ಹೀಗಿದೆ..

By Kannadaprabha NewsFirst Published Jan 13, 2023, 9:48 AM IST
Highlights

ವಿಶ್ವದ ಅತಿ ಉದ್ದದ ನದಿ ಕ್ರೂಸ್‌ ಯಾನ ಶುರುವಾಗುತ್ತಿದ್ದು, ವಾರಾಣಸಿಯಲ್ಲಿ ಜನವರಿ 13ರಂದು ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ವಾರಾಣಸಿಯಲ್ಲಿ ಪ್ರವಾಸಿಗರ ವಾಸ್ತವ್ಯಕ್ಕೆ ‘ಟೆಂಟ್‌ ಸಿಟಿ’ಗೂ ಚಾಲನೆ ಸಿಗಲಿದೆ. ‘ಗಂಗಾ ವಿಲಾಸ್‌ ಕ್ರೂಸ್‌’ 3200 ಕಿ.ಮೀ. ದೂರ ಸಾಗಲಿದ್ದು, ವಾರಾಣಸಿಯಿಂದ ಆರಂಭ, ಬಾಂಗ್ಲಾ ಮೂಲಕ ಅಸ್ಸಾಂನಲ್ಲಿ ಅಂತ್ಯವಾಗಲಿದೆ. 

ನವದೆಹಲಿ/ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರು ‘ವಿಶ್ವದ ಅತಿ ಉದ್ದದ ನದಿ ಕ್ರೂಸ್‌ ಹಡಗು’ ಎನ್ನಿಸಿಕೊಂಡ ‘ಗಂಗಾ ವಿಲಾಸ್‌’ ಅನ್ನು ಜನವರಿ 13ರಂದು ವಾರಾಣಸಿಯಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ. ಇದೇ ವೇಳೆ ವಾರಾಣಸಿ ಗಂಗಾ ತಟದಲ್ಲಿನ ‘ಟೆಂಟ್‌ ಸಿಟಿ’ಯನ್ನೂ ಉದ್ಘಾಟಿಸಲಿದ್ದಾರೆ. ಇದೇ ವೇಳೆ 1000 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾರ್ಯಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಗಂಗಾ ವಿಲಾಸ್‌ ಕ್ರೂಸ್‌ ಹಡಗು ವಾರಾಣಸಿಯ ಗಂಗಾ ನದಿಯಲ್ಲಿ ಪ್ರಯಾಣ ಆರಂಭಿಸಿ ಬಾಂಗ್ಲಾದೇಶ ಮಾರ್ಗವಾಗಿ ಅಸ್ಸಾಂನ ದಿಬ್ರುಗಢದಲ್ಲಿ ಪ್ರಯಾಣ ಮುಗಿಸಲಿದೆ. 3200 ಕಿ.ಮೀ. ದೂರ ಸಾಗಲಿರುವ ಈ ಹಡಗು 51 ದಿನಗಳ ಕಾಲ ಗಂಗೆ, ಬ್ರಹ್ಮಪುತ್ರೆ, ಹೂಗ್ಲಿ ಸೇರಿ 27 ನದಿಗಳಲ್ಲಿ ಸಂಚರಿಸಲಿದ್ದು, ನದಿ ಅಕ್ಕಪಕ್ಕದ 50 ಪ್ರವಾಸಿ ತಾಣಗಳಲ್ಲಿ ನಿಲ್ಲಲಿದೆ. 36 ಪ್ರವಾಸಿಗರನ್ನು ಕರೆದೊಯ್ಯಲಿದೆ. ಮೊದಲ ಯಾನವು ಜ.13ರಂದು ಆರಂಭವಾಗಿ ಮಾ.1ಕ್ಕೆ ಅಂತ್ಯವಾಗಲಿದೆ.

ವಿಶ್ವದ ಅತಿ ಉದ್ದದ ನದಿ ಕ್ರೂಸ್‌ ಯಾನ ಶುರು

- ವಾರಾಣಸಿಯಲ್ಲಿ ಜ.13ರಂದು ಪ್ರಧಾನಿ ಮೋದಿ ಚಾಲನೆ

- ವಾರಾಣಸಿಯಲ್ಲಿ ಪ್ರವಾಸಿಗರ ವಾಸ್ತವ್ಯಕ್ಕೆ ‘ಟೆಂಟ್‌ ಸಿಟಿ’ಗೂ ಚಾಲನೆ

- 3200 ಕಿ.ಮೀ. ದೂರ ಸಾಗಲಿರುವ ‘ಗಂಗಾ ವಿಲಾಸ್‌ ಕ್ರೂಸ್‌’

- ವಾರಾಣಸಿಯಿಂದ ಆರಂಭ, ಬಾಂಗ್ಲಾ ಮೂಲಕ ಅಸ್ಸಾಂನಲ್ಲಿ ಅಂತ್ಯ

- ಗಂಗಾ, ಬ್ರಹ್ಮಪುತ್ರ ನದಿ ಸೇರಿ 27 ನದಿಗಳಲ್ಲಿ ಸಾಗಲಿರುವ ಹಡಗು

- ಇದು ವಿಶ್ವದ ಅತಿ ಉದ್ದದ ನದಿ ಕ್ರೂಸ್‌ ಹಡಗು ಯಾನ

- ವಿಶ್ವಪಾರಂಪರಿಕ ಸ್ಥಳ, ರಾಷ್ಟ್ರೀಯ ಉದ್ಯಾನವನಗಳಲ್ಲಿ ಪಯಣ ಭಾಗ್ಯ

ಇದನ್ನು ಓದಿ: ವಿಶ್ವದ ಅತೀ ಉದ್ದದ ನದಿ ಹಡಗು ಯಾನಕ್ಕೆ ಜ.13ಕ್ಕೆ ಪ್ರಧಾನಿ ಚಾಲನೆ

51 ದಿನಕ್ಕೆ 12.5 ಲಕ್ಷ ರೂ. ಟಿಕೆಟ್‌ ದರ..!

ಮೊದಲ ಯಾನದಲ್ಲಿ ಇರುವ 36 ಪ್ರವಾಸಿಗರಲ್ಲಿ 32 ಪ್ರವಾಸಿಗರು ಸ್ವಿಜರ್ಲೆಂಡ್‌ನವರು. ಪ್ರತಿ ಪ್ರವಾಸಿಗರಿಗೆ ದಿನಕ್ಕೆ 25 ಸಾವಿರ ರೂ.ನಂತೆ 51 ದಿನಕ್ಕೆ 12.5 ಲಕ್ಷ ರೂ. ಶುಲ್ಕ ನಿಗದಿಪಡಿಸಲಾಗಿದೆ.

ಕ್ರೂಸ್‌ ಹಡಗು ಪ್ರವಾಸೋದ್ಯಮ ಏಕೆ..?

ಉತ್ತರ ಭಾರತದಲ್ಲಿ ಗಂಗಾದಂಥ ನದಿಗಳು ಸಾವಿರಾರು ಕಿ.ಮೀ. ಸಾಗುತ್ತವೆ. ಇವು ಸರ್ವಋತುಗಳಲ್ಲಿ ಹರಿಯುವ ನದಿಗಳಾಗಿವೆ. ನದಿಗಳ ಅಕ್ಕಪಕ್ಕದಲ್ಲಿ ನೂರಾರು ಧರ್ಮಕ್ಷೇತ್ರಗಳು ಹಾಗೂ ಪ್ರವಾಸಿ ತಾಣಗಳಿವೆ. ಹೀಗಾಗಿ ವಿಶಿಷ್ಟ ಹಡಗಿನಲ್ಲಿ ಸಾಗುತ್ತ ಈ ತಾಣಗಳನ್ನು ಪ್ರವಾಸಿಗರು ನೋಡಬಹುದಾಗಿದೆ. ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ಆದಾಯ ಇದರಿಂದ ಹರಿದುಬರಲಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ಲಭಿಸಲಿದೆ.

ಇದನ್ನೂ ಓದಿ: ನಾಳೆ ವಿಶ್ವದ ಅತಿ ಉದ್ದದ ನದಿ ವಿಹಾರ ಎಂವಿ ಗಂಗಾ ವಿಲಾಸ್‌ಗೆ ಪ್ರಧಾನಿ ಮೋದಿ ಚಾಲನೆ: ಐಷಾರಾಮಿ ಕ್ರೂಸ್‌ ಒಳನೋಟ ಹೀಗಿದೆ..

ಗಂಗಾ ವಿಲಾಸ್‌ ಕ್ರೂಸ್‌ ಹಡಗು
51 ದಿನಗಳಲ್ಲಿ 3200 ಕಿ.ಮೀ ಪ್ರಯಾಣ ಮಾಡಲಿರುವ ‘ಗಂಗಾವಿಲಾಸ್‌’ ಹಡಗು ಭಾರತ ಮತ್ತು ಬಾಂಗ್ಲಾದೇಶದ 27 ನದಿ ವ್ಯವಸ್ಥೆಗಳ ಮೂಲಕ ಹಾದುಹೋಗಲಿದೆ. ಈ ಹಡಗು ಪ್ರವಾಸಿಗರಿಗೆ ಮಾರ್ಗ ಮಧ್ಯದಲ್ಲಿ ಕಾಜಿರಂಗಾ, ಸುಂದರ ಬನ ಸೇರಿ 50 ಪ್ರಮುಖ ಸ್ಥಳಗಳಿಗೆ ಭೇಟಿ ನೀಡುವ ಅವಕಾಶವನ್ನು ನೀಡುತ್ತದೆ. ಬಿಹಾರದ ಪಟನಾ, ಜಾರ್ಖಂಡ್‌ನ ಸಾಹಿಬ್‌ ಗಂಜ್‌, ಪಶ್ಚಿಮ ಬಂಗಾಳದ ಕೋಲ್ಕತಾ, ಬಾಂಗ್ಲಾದೇಶದ ಢಾಕಾ ಹಾಗೂ ಅಸ್ಸಾಂನ ಗುವಾಹಟಿಯನ್ನು ಪ್ರವಾಸಿಗರು ವೀಕ್ಷಿಸಲಿದ್ದಾರೆ.

ಭಾರತದಿಂದ ಬಾಂಗ್ಲಾಗೆ, ಅಲ್ಲಿಂದ ಮತ್ತೆ ಭಾರತಕ್ಕೆ

ವಾರಾಣಸಿಯಿಂದ ಯಾನ ಆರಂಭಿಸುವ ಹಡಗು ಫರಕ್ಕಾ ಹಾಗೂ ಮುರ್ಷಿದ ಮುರ್ಷಿದಾಬಾದ್‌ ಮೂಲಕ ಬಾಂಗ್ಲಾದೇಶ ಪ್ರವೇಶಿಸಿ 15 ದಿನ ಸಂಚರಿಸಲಿದೆ. ಬಳಿಕ ಶಿವಸಾಗರ ಬಳಿ ಮತ್ತೆ ಭಾರತದ ಗಡಿಯನ್ನು ಪ್ರವೇಶಿಸಿ ಅಸ್ಸಾಂನ ದಿಬ್ರುಗಢದಲ್ಲಿ ಯಾನ ಮುಗಿಸಲಿದೆ.

3 ಡೆಕ್‌, 18 ಸೂಟ್‌ಗಳು

ಗಂಗಾ ವಿಲಾಸ್‌ ಕ್ರೂಸ್‌ ಅನ್ನು ವಿಶಿಷ್ಟ ವಿನ್ಯಾಸ ಮತ್ತು ಭವಿಷ್ಯದ ದೃಷ್ಟಿಕೋನದಿಂದ ನಿರ್ಮಿಸಲಾಗಿದೆ. 3 ಡೆಕ್‌ ಹಾಗೂ 18 ಸೂಟ್‌ಗಳನ್ನು ಹೊಂದಿರಲಿದ್ದು, 36 ಪ್ರವಾಸಿಗರು ಇದರಲ್ಲಿ ಸಾಗಬಹುದು.

 ಹಡಗಿನಲ್ಲಿ ಏನಿರಲಿದೆ..?

ಕ್ರೂಸ್‌ ಪ್ರಯಾಣ ಆನಂದಿಸಲು ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ, ಜಿಮ್‌, ಸ್ಪಾ, ವೀಕ್ಷಣಾಲಯ, ವೈಯಕ್ತಿಕ ಬಾಣಸಿಗ ಸೇವೆ ಲಭ್ಯ

ಯಾವ ದಿನ ಎಲ್ಲಿಗೆ..?

ದಿನ 1: ವಾರಾಣಸಿ

ದಿನ 8: ಪಟನಾ

ದಿನ 20: ಕೋಲ್ಕತಾ

ದಿನ 35: ಢಾಕಾ

ದಿನ 51: ದಿಬ್ರುಗಢ

ಮಾರ್ಗಮಧ್ಯೆ ಸಿಗುವ ಪ್ರಸಿದ್ಧ ತಾಣಗಳು

- ಪ್ರವಾಸಿಗರಿಗೆ ವಾರಾಣಸಿ ಪ್ರಸಿದ್ಧ ಗಂಗಾ ಆರತಿ ವೀಕ್ಷಣೆ ಭಾಗ್ಯ

- ಬೌದ್ಧಧರ್ಮದ ಅತ್ಯಂತ ಗೌರವದ ಸ್ಥಳವಾದ ಸಾರಾನಾಥ್‌

- ಬಿಹಾರ್‌ ಸ್ಕೂಲ್‌ ಆಫ್‌ ಯೋಗ ಮತ್ತು ವಿಕ್ರಮಶಿಲಾ ವಿವಿಗೆ ಭೇಟಿ

- ಬಂಗಾಳ ಕೊಲ್ಲಿ ವ್ಯಾಪ್ತಿಯ ಸುಂದರಬನ ಅರಣ್ಯ ವೀಕ್ಷಣಾ ಭಾಗ್ಯ

- ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಯಾಣ

- ಕಾಜಿರಂಗಾದಲ್ಲಿ ಪ್ರಸಿದ್ಧ ರಾಯಲ್‌ ಬೆಂಗಾಲ್‌ ಟೈಗರ್ಸ್‌, ಘೇಂಡಾಮೃಗ ವೀಕ್ಷಣೆ ಸಾಧ್ಯ

- ಬಿಹಾರದ ಪಟನಾ, ಜಾರ್ಖಂಡ್‌ನ ಸಾಹಿಬ್‌ ಗಂಜ್‌, ಪ.ಬಂಗಾಳದ ಕೋಲ್ಕತಾ, ಬಾಂಗ್ಲಾದ ಢಾಕಾ, ಅಸ್ಸಾಂನ ಗುವಾಹಟಿ

ಕ್ರೂಸ್‌ ಹಡಗು ಯಾನದ ವೈಶಿಷ್ಟ್ಯ

62 ಮೀ... ‘ಗಂಗಾ ವಿಲಾಸ್‌’ ಹಡಗಿನ ಉದ್ದ

12 ಮೀ... ಗಂಗಾವಿಲಾಸ್‌ ಹಡಗಿನ ಅಗಲ

3200 ಕಿ.ಮೀ.... ವಾರಾಣಸಿಯಿಂದ ಬಾಂಗ್ಲಾ ಮಾರ್ಗವಾಗಿ ದಿಬ್ರುಗಢಕ್ಕೆ ಸಾಗಲಿರುವ ದೂರ

1100 ಕಿ.ಮೀ.. ಬಾಂಗ್ಲಾದೇಶ ವ್ಯಾಪ್ತಿಯಲ್ಲಿ ಹಡಗು ಸಂಚಾರ

2 ರಾಷ್ಟ್ರಗಳು.. ಭಾರತ ಹಾಗೂ ಬಾಂಗ್ಲಾದೇಶದಲ್ಲಿ ಸಂಚರಿಸಲಿರುವ ಹಡಗು

51 ದಿನ... ವಿಹಾರದ ಒಟ್ಟು ಅವಧಿ

15 ದಿನ... ಬಾಗ್ಲಾದೇಶದಲ್ಲಿ ಹಡಗು ಯಾನದ ಅವಧಿ

50 ತಾಣಗಳು... ಪ್ರಯಾಣದ ಅವಧಿಯಲ್ಲಿ 50 ತಾಣಗಳ

25 ಸಾವಿರ ರೂ. …. ದಿನದ ಟಿಕೆಟ್‌ ದರ

12.75 ಲಕ್ಷ ರೂ. …. ಒಟ್ಟು 51 ದಿನದ ಟಿಕೆಟ್‌ ದರ

36 ಮಂದಿ…. ಹಡಗಿನಲ್ಲಿ ಪ್ರವಾಸಿಗರ ಒಟ್ಟು ಸಾಮರ್ಥ್ಯ

ಏನಿದು ಟೆಂಟ್‌ ಸಿಟಿ..?

ವಾರಾಣಸಿಯಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ಗಂಗಾ ನದಿಯಲ್ಲಿನ ಪ್ರಸ್ತುತ ಘಾಟ್‌ಗಳ ಆಚೆ ಕಡೆ ದಂಡೆಯಲ್ಲಿ ‘ಟೆಂಟ್‌ ಸಿಟಿ’ ಅಭಿವೃದ್ಧಿಪಡಿಸಲಾಗಿದೆ. ಇದು ಟೆಂಟ್‌ ಮೂಲಕ ವಸತಿ ಸೌಕರ್ಯಗಳನ್ನು ಒದಗಿಸುತ್ತದೆ. ಕಾಶಿ ವಿಶ್ವನಾಥ ಧಾಮ ಉದ್ಘಾಟನೆ ಬಳಿಕ ವಾರಾಣಸಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಈಗಿರುವ ಹೋಟೆಲ್‌ಗಳು ಹಾಗೂ ವಸತಿ ವ್ಯವಸ್ಥೆ ಸಾಲದು. ಹೀಗಾಗಿ ಹೆಚ್ಚಿನ ಅಗತ್ಯ ಪೂರೈಸಲು ಟೆಂಟ್‌ ಸಿಟಿ ನಿರ್ಮಿಸಲಾಗಿದ್ದು, ಇಲ್ಲಿ ವಸತಿ ವ್ಯವಸ್ಥೆಯಿದೆ. ಪ್ರವಾಸಿಗರು ಸುತ್ತಮುತ್ತಲಿನ ವಿವಿಧ ಘಾಟ್‌ಗಳಿಂದ ದೋಣಿಗಳ ಮೂಲಕ ಟೆಂಟ್‌ ಸಿಟಿಯನ್ನು ತಲುಪುತ್ತಾರೆ. ಟೆಂಟ್‌ ಸಿಟಿಯು ಪ್ರತಿ ವರ್ಷ ಅಕ್ಟೋಬರ್‌ನಿಂದ ಜೂನ್‌ವರೆಗೆ ಮಾತ್ರ ಕಾರ್ಯನಿರ್ವಹಿಸಲಿದೆ. ಮಳೆಗಾಲದಲ್ಲಿ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗುವುದರಿಂದ 2 ತಿಂಗಳ ಕಾಲ ಟೆಂಟ್‌ ಸಿಟಿಯನ್ನು ಬಂದ್‌ ಮಾಡಲಾಗುತ್ತದೆ ಹಾಗೂ ಹಾಕಿದ್ದ ಟೆಂಟ್‌ ತೆಗೆಯಲಾಗುತ್ತದೆ.

click me!