
ಮೊಹರಂ ಮೆರವಣಿಗೇಲಿ ಹೋಗುವವರಿಗೆ ಮಾತ್ರೆ ತಿನ್ನಿಸಿ ಕೃತ್ಯಕ್ಕೆ ಯತ್ನ
2025ರಲ್ಲಿ 19 ಸಲ ಇರಾನ್, ಇರಾಕ್‌ಗೆ ಹೋಗಿದ್ದ ಆರೋಪಿ ಫಯಾಜ್ ಸೆರೆ
ಮುಂಬೈ: ಸಾವಿರಾರು ಮುಸ್ಲಿಮರಿಗೆ ಇಲಿ ಸಾಯಿಸಲು ಬಳಸುವ ವಿಷ ನೀಡಿ ಸಾಮೂಹಿಕ ಹತ್ಯೆಗೆ ಯತ್ನಿಸಿದ ಪ್ರಕರಣವೊಂದು ಮುಂಬೈನಲ್ಲಿ ನಡೆದಿದೆ. ಅದೃಷ್ಟವಶಾತ್ ಆರಂಭದಲ್ಲೇ ಪ್ರಕರಣ ಬೆಳಕಿಗೆ ಬಂದು ದೊಡ್ಡ ಅನಾಹುತವೊಂದು ತಪ್ಪಿದೆ. ಪ್ರಕರಣ ಸಂಬಂಧ ಫಯಾಜ್ ಎಂಬಾತನನ್ನು ಬಂಧಿಸಿದ್ದು, ಅತನಿಂದ 14900 ವಿಷ ತುಂಬಿದ ಮಾತ್ರೆ ವಶಪಡಿಸಿಕೊಳ್ಳಲಾಗಿದೆ.
ಶಿಯಾ ಪಂಗಡಕ್ಕೆ ಸೇರಿರುವ ಫಯಾಜ್ ಪ್ರೇಮ್‌ಜಿ(Fayaz Premji) ಎಂಬಾತ ಶನಿವಾರ ನಡೆದ ಮುಹರಂ(Muharram)ನಂದು ಮೆರವಣಿಗೆ ವೇಳೆ ನೋವು ನಿವಾರಕ ಎಂದು ಹೇಳಿ ವಿಷದ ಮಾತ್ರೆ ಹಂಚುತ್ತಿದ್ದ. ಇದನ್ನು ಸೇವಿಸಿ ಒಬ್ಬ ವ್ಯಕ್ತಿ ಅಸ್ವಸ್ಥನಾದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು, ಫಯಾಜ್‌ನನ್ನು ವಶಕ್ಕೆ ಪಡೆಸಿದ್ದಾರೆ. ಆತನ ಮೇಲೆ ವಿಷ ಕೊಟ್ಟು ಕೊಲೆಗೆ ಯತ್ನಿಸಿದ ಪ್ರಕರಣ ದಾಖಲಾಗಿದೆ.
ತನಿಖೆ ವೇಳೆ ಆರೋಪಿಯ ಬಳಿ ಇಲಿಗಳನ್ನು ಕೊಲ್ಲಲು ಬಳಸಲಾಗುವ ಝಿಂಕ್ ಫಾಸ್ಫೈಡ್ 50 ಕೆ.ಜಿ.ಯಷ್ಟು ಪತ್ತೆಯಾಗಿದೆ. ಆತ ಖುದ್ದು ಕುಳಿತು ಪ್ರತಿ ಮಾತ್ರೆಗೆ ಅದನ್ನು 1 ಗ್ರಾಂನಷ್ಟು ತುಂಬುತ್ತಿದ್ದ ಹಾಗೂ ಅಂತಹ 30 ಸಾವಿರ ಮಾತ್ರೆಗಳನ್ನು ಸಿದ್ಧಪಡಿಸುವ ಗುರಿ ಹೊಂದಿದ್ದ ಎಂದು ತಿಳಿದುಬಂದಿದೆ.
ಆರೋಪಿ ಫಯಾಜ್ ಕಳೆದ ವರ್ಷದಲ್ಲೇ 19 ಬಾರಿ ಇರಾನ್ ಮತ್ತು ಇರಾಕ್‌ಗೆ ಹೋಗಿಬಂದಿದ್ದ ಎಂದು ತಿಳಿದುಬಂದಿದೆ. ಆತನ ಸಹೋದರಿ ಮತ್ತು ತಾಯಿ ಇರಾನ್‌ನಲ್ಲಿ ನೆಲೆಸಿರುವರಾದರೂ, ವಿಚ್ಛೇದಿತ ಫಯಾಜ್ ಅಷ್ಟು ಬಾರಿ ಆ ದೇಶಗಳಿಗೆ ಹೋಗಿದ್ದೇಕೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ