ಮುಂಬೈ(ನ.26): ಮುಂಬೈ ಮೇಲೆ ಉಗ್ರರ ದಾಳಿ ವೇಳೆ ಜೀವಂತವಾಗಿ ಸೆರೆ ಸಿಕ್ಕಿದ್ದ ಉಗ್ರ ಅಜ್ಮಲ್ ಕಸಬ್(Ajmal Kasab)ನ ಮೊಬೈಲ್‌ನ್ನು ಮುಂಬೈಯ ಮಾಜಿ ಪೊಲೀಸ್ ಕಮೀಷನರ್ ಆಗಿದ್ದ ಪರಂ ಬೀರ್ ಸಿಂಗ್(Param Bir Singh) ನಾಶಗೊಳಿಸಿದ್ದರು ಎಂದು ಈಗ ನಿವೃತ್ತಿ ಹೊಂದಿರುವ ಸಹಾಯಕ ಪೊಲೀಸ್ ಕಮೀಷನರ್ ಸಂಶೀರ್ ಖಾನ್ ಪಠಾಣ್ (Samsher Khan Pathan)ಆರೋಪಿಸಿದ್ದಾರೆ.
ಮಹಾನಗರಿ ಮುಂಬೈ(Mumbai)ಮೇಲೆ ಭಯೋತ್ಪಾದಕರ ದಾಳಿ ನಡೆದು ಇಂದಿಗೆ ಬರೋಬರಿ 13 ವರ್ಷಗಳೇ ಕಳೆದಿದೆ. ಆ ದುರಂತದಲ್ಲಿ ಹುತಾತ್ಮರಾದವರ, ಪ್ರಾಣ ತೆತ್ತವರ ಕುಟುಂಬಗಳು ಇಂದಿಗೂ ಕರಾಳ ನೆನಪಿನಿಂದ ಹೊರ ಬಂದಿಲ್ಲ. ಈ ಮಧ್ಯೆ ಆಗಿನ ಘಟನೆ ಬಗ್ಗೆ ಕೆಲವೊಂದು ಕರಾಳ ಆರೋಪಗಳು ಮತ್ತೆ ಮತ್ತೆ ಕೇಳಿ ಬರುತ್ತಿವೆ.
ತಮ್ಮ ಹೇಳಿಕೆ ಬಗ್ಗೆ ನಿವೃತ್ತ ಅಧಿಕಾರಿ ಪಠಾಣ್, ಮುಂಬೈ ಪೊಲೀಸ್ ಕಮೀಷನರ್‌ಗೆ ಕಳೆದ ಜುಲೈನಲ್ಲಿ ಲಿಖಿತ ದೂರು ನೀಡಿದ್ದರು. ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಪರಂ ಬೀರ್ ಸಿಂಗ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಪಠಾಣ್ ಅವರು ದೂರು ನೀಡಿ ನಾಲ್ಕು ತಿಂಗಳು ಕಳೆದಿದ್ದರೂ ಈಗ ಸಾಮಾಜಿಕ ಜಾಲತಾಣ(social media)ಗಳಲ್ಲಿ ಇದು ವೈರಲ್ ಆಗಿದೆ.
ಡಿಬಿ ಮಾರ್ಗ್(DB Marg) ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಎನ್. ಆರ್. ಮಾಲಿ( N R Mali) ಅವರು ನನಗೆ ಹೇಳಿದ್ದಾರೆ. ಅವರು, ಉಗ್ರ ಕಸಬ್‌ನಿಂದ ಮೊಬೈಲ್ ಫೋನ್‌ನ್ನು ಜಪ್ತಿ ಮಾಡಿದ್ದಾರೆ ಹಾಗೂ ಮೊಬೈಲ್‌ನ್ನು ಕಾಂಬ್ಳೆ ಹೆಸರಿನ ಕಾನ್‌ಸ್ಟೇಬಲ್‌ಗೆ ಹಸ್ತಾಂತರಿಸಿದ್ದಾರೆ ಎಂದು ಪಠಾಣ್ ತಾವು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆಗ ಭಯೋತ್ಪಾದನಾ ನಿಗ್ರಹ ದಳದ ಡಿಐಜಿ ಆಗಿದ್ದ ಪರಂ ಬೀರ್ ಸಿಂಗ್, ಕಾನ್‌ಸ್ಟೇಬಲ್ ಕೈಯಿಂದ ಕಸಬ್‌ನ ಮೊಬೈಲ್‌ನ್ನು ಪಡೆದಿದ್ದರು. ಸಿಂಗ್ ಈ ಫೋನನ್ನು 26/11 ದಾಳಿಯ ತನಿಖೆ ನಡೆಸುತ್ತಿದ್ದ ಅಧಿಕಾರಿ ರಮೇಶ್ ಮಹಾಲೆ(Ramesh Mahale) ಅವರಿಗೆ ನೀಡಬೇಕಿತ್ತು. ಆದರೆ ಅವರು ಘಟನೆಗೆ ಸಮಗ್ರ ಸಾಕ್ಷಿಯೊದಗಿಸುತ್ತಿದ್ದ ಸಾಧನವನ್ನು ನಾಶ ಮಾಡಿದ್ದಾರೆ ಎಂದು ಪಠಾಣ್ ದೂರಿದ್ದಾರೆ.
26/11 Attack: ಮುಂಬೈ ದಾಳಿಗೆ 13 ವರ್ಷ: ಎಂದೂ ಮರೆಯಲಾಗದ ಭೀಕರ ದಾಳಿ!
ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿಲು ಸಿಂಗ್ ಸಿಕ್ಕಿಲ್ಲ. ಮುಂಬೈನ ಹಲವು ಕಡೆ ಅಂದು ಉಗ್ರರ ದಾಳಿ ನಡೆದಿತ್ತು. ಮುಂಬೈ ದಾಳಿ ವೇಳೆ ಕಸಬ್‌ನನ್ನು ಜೀವಂತವಾಗಿ ಸೆರೆ ಹಿಡಿಯಲಾಗಿತ್ತು. ನಂತರ ವಿಚಾರಣೆ ನಡೆದು ಅಪರಾಧ ಸಾಬೀತಾದ ಹಿನ್ನೆಲೆ ಸುಪ್ರೀಂಕೋರ್ಟ್(Supreme Court) ಆತನಿಗೆ ಗಲ್ಲು ಶಿಕ್ಷೆ ಘೋಷಣೆ ಮಾಡಿತ್ತು. ನಂತರ 2012ರ ನವೆಂಬರ್‌ನಲ್ಲಿ ಆತನನ್ನು ಗಲ್ಲಿಗೇರಿಸಲಾಯಿತು.
ಇತ್ತೀಚೆಗೆ ಪರಂ ಬೀರ್ ಸಿಂಗ್ ವಿರುದ್ಧ ಗೋರೆಗಾಂವ್ ಪೊಲೀಸ್ ಠಾಣೆ(Goregaon police station)ಯಲ್ಲಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದ್ದು, ಈ ವಿಚಾರವಾಗಿ ಹೇಳಿಕೆ ದಾಖಲಿಸಲು ಮುಂಬೈ ಅಪರಾಧ ವಿಭಾಗ(Mumbai crime branch)ದ ಮುಂದೆ ಹಾಜರಾಗುವುದಕ್ಕೂ ಮೊದಲು ಇವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದ ಸುದ್ದಿ ಎಲ್ಲೆಡೆ ವೈರಲ್ ಆಗಿದೆ. ಕಳೆದ ಮಾರ್ಚ್‌ನಲ್ಲಿ ಮುಂಬೈ ಪೊಲೀಸ್ ಮುಖ್ಯಸ್ಥ(Mumbai police chief) ಹುದ್ದೆಯಿಂದ ಪರಂ ಬೀರ್ ಸಿಂಗ್ ಅವರನ್ನು ವಜಾಗೊಳಿಸಲಾಗಿತ್ತು. ನಂತರ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಗ್ರಾಲೆ ಅವರು ಮುಂಬೈ ಪೊಲೀಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
Drugs Case: ಕಸಬ್, ಚೊಟಾ ರಾಜನ್ ಇದ್ದ ಜೈಲಿನಲ್ಲಿ ಆರ್ಯನ್ ಖಾನ್
2008 ನ.21ರಂದು ಪಾಕಿಸ್ತಾನದ (Pakistan) 10 ಮಂದಿ ಉಗ್ರರು ಬೋಟ್ ಮೂಲಕ ಭಾರತದತ್ತ ಪ್ರಯಾಣಿಸಿದ್ದರು. ಗುರುತು ಮರೆಸಿಕೊಂಡು ಮುಂಬೈಯನ್ನು ಪ್ರವೇಶಿಸಿದ ಉಗ್ರರು ಮೂರು ದಿನಗಳ ಕಾಲ ಹೋಟೆಲ್, ರೈಲ್ವೆ ನಿಲ್ದಾಣ, ಆಸ್ಪತ್ರೆ, ಯಹೂದಿ ಸಮುದಾಯ ಕೇಂದ್ರ ಸೇರಿದಂತೆ 10ಕ್ಕೂ ಹೆಚ್ಚು ಕಡೆಗಳಲ್ಲಿ ಬಾಂಬ್ ಸ್ಫೋಟ (Bomb Blast) ಮತ್ತು ಗುಂಡಿನ ದಾಳಿ ನಡೆಸಿ 166 ಜನರ ಸಾವಿಗೆ ಕಾರಣರಾದರು. 300ಕ್ಕೂ ಹೆಚ್ಚು ಜನರು ಗಾಯಗೊಂಡರು. ದೇಶದ ವಾಣಿಜ್ಯೋದ್ಯಮದ ಹೆಮ್ಮೆಯಾಗಿ ತಲೆಯೆತ್ತಿ ನಿಂತಿದ್ದ ತಾಜ್, ಒಬೇರಾಯ್ ನಂತಹ ಹೋಟೆಲ್‌ಗಳು ಉಗ್ರರ ಗುಂಡಿನ ದಾಳಿ ಮತ್ತು ಬಾಂಬ್ ಬ್ಲಾಸ್ಟ್‌ಗೆ ಹೊತ್ತಿ ಉರಿದವು. ಜನರು ಉಗ್ರರ ಕಪಿಮುಷ್ಠಿಯಲ್ಲಿ ನರಳಿ ಅಕ್ಷರಶಃ ನರಕ ದರ್ಶನ ಕಂಡರು.