ದೇಶದಲ್ಲಿ 40 ದಿನಗಳ ನಂತರ ಕೋವಿಡ್ ಪ್ರಕರಣಗಳು 50 ಸಾವಿರಕ್ಕಿಂತ ಕೆಳಗಿಳಿದಿವೆ. ಭಾನುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 44,877 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.
ನವದೆಹಲಿ (ಫೆ.14): ದೇಶದಲ್ಲಿ 40 ದಿನಗಳ ನಂತರ ಕೋವಿಡ್ ಪ್ರಕರಣಗಳು (Covid Cases) 50 ಸಾವಿರಕ್ಕಿಂತ ಕೆಳಗಿಳಿದಿವೆ. ಭಾನುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 44,877 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದು ಜನವರಿ 4ರ ನಂತರದ ಅತಿ ಕನಿಷ್ಠ ಪ್ರಕರಣ. ಜ.4ರಂದು 37,379 ಕೋವಿಡ್ ಕೇಸುಗಳು ಪತ್ತೆಯಾಗಿದ್ದವು. ಆ ಬಳಿಕ ಇಷ್ಟು ಕಡಿಮೆ ಪ್ರಕರಣ ದಾಖಲಾಗಿರಲಿಲ್ಲ.
ದಿನವಹಿ 50 ಸಾವಿರಕ್ಕಿಂತ ಹೆಚ್ಚು ಪ್ರಕರಣ ದಾಖಲಾಗುತ್ತಿದ್ದವು. ಸತತ 7 ದಿನಗಳಿಂದ ಕೋವಿಡ್ ಕೇಸುಗಳು 1 ಲಕ್ಷಕ್ಕಿಂತ ಕಡಿಮೆ ದಾಖಲಾಗುತ್ತಿದೆ. ಹೀಗಾಗಿ ಇದನ್ನು ಕೋವಿಡ್ 3ನೇ ಅಲೆಯ ಇಳಿಕೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ನಡುವೆ, ಇದೇ 24 ತಾಸಿನ ಅವಧಿಯಲ್ಲಿ 684 ಸೋಂಕಿತರು ಸಾವಿಗೀಡಾಗಿದ್ದಾರೆ. 73,398 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳು 5.37 ಲಕ್ಷಕ್ಕೆ ಇಳಿಕೆಯಾಗಿವೆ.
ಇನ್ನು ದೈನಂದಿನ ಪಾಸಿಟಿವಿಟಿ ದರ (Positivity Rate) ಶೇ.3.17 ಮತ್ತು ವಾರದ ಪಾಸಿಟಿವಿಟಿ ದರ ಶೇ.4.46ರಷ್ಟುದಾಖಲಾಗಿದೆ. ಹೊಸ ಪ್ರಕರಣಗಳೊಂದಿಗೆ ಒಟ್ಟು ಪ್ರಕರಣಗಳು 4.26 ಕೋಟಿಗೆ, ಒಟ್ಟು ಸಾವು 5.37 ಲಕ್ಷಕ್ಕೆ ಏರಿಕೆಯಾಗಿವೆ. ದೇಶದಲ್ಲಿ ಈವರೆಗೆ 172.81 ಕೋಟಿ ಡೋಸ್ ಕೋವಿಡ್ ಲಸಿಕೆ (Covid Vaccine) ವಿತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Covid Crisis: 1.27 ಲಕ್ಷ ಕೋವಿಡ್ ಕೇಸು ದಾಖಲು: 1 ತಿಂಗಳ ಕನಿಷ್ಠ
ಕೋವಿಡ್ ಕೇಸು ಇಳಿಕೆ: ಈವರೆಗೆ ದೈನಂದಿನ ಹೆಚ್ಚು ಪ್ರಕರಣಗಳನ್ನು ದಾಖಲಿಸುತ್ತಿದ್ದ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶದ 34 ರಾಜ್ಯಗಳಲ್ಲಿ ಕೊರೋನಾ ವೈರಸ್ಸಿನ ತೀವ್ರತೆ ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಅಲ್ಲದೆ ದೈನಂದಿನ ಪಾಸಿಟಿವಿಟಿ ದರವೂ ಕುಸಿತ ಕಂಡಿದೆ. ಆದರೆ ಕೇರಳ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದೇಶದ ಒಟ್ಟಾರೆ ಜಿಲ್ಲೆಗಳ ಪೈಕಿ 268 ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಇದೆ. ಪರಿಣಾಮಕಾರಿ ಲಸಿಕೆ ಅಭಿಯಾನದಿಂದಾಗಿ ಕೋವಿಡ್ಗೆ ಬಲಿಯಾಗುವವರ ಸಂಖ್ಯೆ ನಿಯಂತ್ರಣಕ್ಕೆ ಬಂದಿದೆ.
ಸಿಂಗಲ್ ಡೋಸ್ ಸ್ಪುಟ್ನಿಕ್ ಲೈಟ್ ಬಳಕೆಗೆ ಕೇಂದ್ರ ಅಸ್ತು: ಭಾರತದಲ್ಲಿ ಕೋವಿಡ್ 3ನೇ ಅಲೆ ಇಳಿಮುಖವಾಗುತ್ತಿದೆ. ಈ ನಡುವೆ ರಷ್ಯಾದ ಸ್ಪುಟ್ನಿಕ್ ಲೈಟ್ ಸಿಂಗಲ್ ಡೋಸ್ (Pputnik Light Single Dose Vaccine) ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಭಾನುವಾರ ಅನುಮೋದನೆ ನೀಡಿದೆ. ಭಾರತೀಯ ಔಷಧ ನಿಯಂತ್ರಣದ ಪ್ರಾಧಿಕಾರ (ಡಿಸಿಜಿಐ)ದ ಅನುಮೋದನೆ ಮೂಲಕ ಭಾರತದಲ್ಲಿ ಕೊರೋನಾ ವಿರುದ್ಧದ 9ನೇ ಲಸಿಕೆ ಬಳಕೆಗೆ ಹಸಿರು ನಿಶಾನೆ ಲಭಿಸಿದಂತಾಗಿದೆ. ಇದು ಭಾರತದ ಲಸಿಕಾ ಅಭಿಯಾನಕ್ಕೆ ಮತ್ತಷ್ಟುಬಲ ನೀಡಲಿದೆ. ಸ್ಪುಟ್ನಿಕ್ ಲೈಟ್ ಕೊರೋನಾ ವಿರುದ್ಧ ಶೇ.65.4ರಷ್ಟುಪರಿಣಾಮಕಾರಿ ಎನ್ನಲಾಗಿದೆ.
Covid Crisis: ಕೊರೋನಾಗೆ 4 ದಿನದ ನವಜಾತ ಶಿಶು ಬಲಿ
ಒಮಿಕ್ರೋನ್ ನಂ.1 ಪಟ್ಟಕ್ಕೆ: ವಿಶ್ವದಾದ್ಯಂತ ಅನಾಹುತ ಸೃಷ್ಟಿಸಿರುವ ಒಮಿಕ್ರೋನ್ ರೂಪಾಂತರಿ ವೈರಸ್ ಇದೀಗ ಭಾರತದಲ್ಲೂ ಅತಿ ಹೆಚ್ಚು ಹಬ್ಬಿರುವ ವೈರಸ್ ಆಗಿ ಹೊರಹೊಮ್ಮಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ಇದೇ ವೇಳೆ ದೇಶದ ಹಲವು ರಾಜ್ಯಗಳಲ್ಲಿ ಕೇಸುಗಳ ಬೆಳವಣಿಗೆ ಪ್ರಮಾಣ ಸ್ಥಗಿತಗೊಂಡಿದೆ. ಆದರೆ ಈ ಬೆಳವಣಿಗೆಯನ್ನು ನಾವು ಇನ್ನಷ್ಟುದಿನ ಗಮನಿಸಬೇಕು. ಈ ಹಂತದಲ್ಲಿ ನಾವು ಮೈಮರೆಯುವಂತಿಲ್ಲ ಎಂದು ಎಚ್ಚರಿಸಿದೆ.