
ಅಹಮದಾಬಾದ್(ಸೆ.22): ಗುಜರಾತ್‌ನ ಮುಂದ್ರಾ ಬಂದರಿನಲ್ಲಿ 21 ಸಾವಿರ ಕೋಟಿ ರು. ಮೌಲ್ಯದ ಹೆರಾಯಿನ್ ಇದ್ದ ಕಂಟೇನರ್‌ಗಳನ್ನು ಜಪ್ತಿ ಮಾಡಿದ ಪ್ರಕರಣದ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ- ಐಎಸ್‌ಐನ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಪೂರೈಕೆ ಮಾಡುವ ಉದ್ದೇಶ ಇತ್ತು ಎಂಬ ಆತಂಕಕಾರಿ ಸಂಗತಿ ಬಯಲಾಗಿದೆ.
ಇರಾನ್ನಿಂದ ಬಂದ ಹಡಗಿನಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 3 ಟನ್ ತೂಕದ ಹೆರಾಯಿನ್ ಇದ್ದ ಎರಡು ಕಂಟೇನರ್‌ಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಕಳೆದ ವಾರ ಜಪ್ತಿ ಮಾಡಿತ್ತು. ಇವನ್ನು ಮೊದಲು ಅಷ್ಘಾನಿಸ್ತಾನದಲ್ಲಿ ಲೋಡ್ ಮಾಡಿ ಇರಾನ್ಗೆ ಕಳಿಸಲಾಗಿತ್ತು ಅಲ್ಲಿಂದ ಇವು ಭಾರತಕ್ಕೆ ಸಾಗಣೆ ಆಗಿವೆ. ಇವುಗಳ ಮಾರುಕಟ್ಟೆಮೌಲ್ಯ ಸುಮಾರು 21 ಸಾವಿರ ಕೋಟಿ ರು. ಇದ್ದಿರಬಹುದು ಎಂದು ಅಂದಾಜಿಸಲಾಗಿದೆ.
ಭಾರತವೇ ಟಾರ್ಗೆಟ್:
ಈ ಹಿಂದಿನ ಅಷ್ಘಾನಿಸ್ತಾನ ಸರ್ಕಾರ ಹೆರಾಯಿನ್ ಅನ್ನು ನಿಷೇಧಿಸಿತ್ತು. ಆದರೆ, ತಾಲಿಬಾನ್ ಸರ್ಕಾರ ಬಂದ ಬಳಿಕ ಮಾದಕವಸ್ತುಗಳ ಮೇಲಿನ ನಿಷೇಧವನ್ನು ರದ್ದುಪಡಿಸಿದೆ. ಹೀಗಾಗಿ ಅಷ್ಘಾನಿಸ್ತಾನದಿಂದ ರಾಜಾರೋಷವಾಗಿ ಹೆರಾಯಿನ್ ಅನ್ನು ಸಾಗಾಟ ಮಾಡಲಾಗುತ್ತಿದೆ. ಅದರಲ್ಲೂ ಭಾರತದಲ್ಲಿ ಪಾಕಿಸ್ತಾನ ಗುಪ್ತಚರ ಸಂಸ್ಥೆ ‘ಐಎಸ್‌ಐ’ ಪ್ರಚೋದಿತ ಉಗ್ರಗಾಮಿ ಚಟುವಟಿಕೆಗಳಿಗೆ ಹಣ ಪೂರೈಕೆ ಮಾಡುವ ಉದ್ದೇಶದಂದ ಹೆರಾಯಿನ್ ಅನ್ನು ಗುಜರಾತ್ ಬಂದರಿಗೆ ಸಾಗಣೆ ಮಾಡಲಾಗಿದೆ ಎಂಬ ಬಗ್ಗೆ ಗುಪ್ತಚರ ಸಂಸ್ಥೆಗಳು ಬಲವಾದ ಶಂಕೆ ವ್ಯಕ್ತಪಡಿಸಿವೆ.
ಪಾಕಿಸ್ತಾನ ಮತ್ತು ತಾಲಿಬಾನ್‌ನ ಭಾರತ ವಿರೋಧಿ ಗುಂಪುಗಳು ಸೇರಿಕೊಂಡು ಅಷ್ಘಾನಿಸ್ತಾನದ ಹೆರಾಯಿನ್ ಅನ್ನು ಉಗ್ರರ ಚಟುವಟಿಕೆಗಳಿಗೆ ಹಣ ಹೊಂದಿಸಲು ಭಾರತಕ್ಕೆ ಸಾಗಾಟ ಮಾಡಲು ಯತ್ನಿಸುತ್ತಿವೆ ಎಂದು ಗುಪ್ತಚರ ಸಂಸ್ಥೆಗಳು ಬಲವಾದ ಅನುಮಾನ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಗುಪ್ತಚರ ಸಂಸ್ಥೆಗಳು ಮಾದಕವಸ್ತು ಸಾಗಾಟ ಜಾಲದ ಕಿಂಗ್‌ಪಿನ್ ಅನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಯತ್ನ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ಪತ್ತೆ ಆಗಿದ್ದು ಹೇಗೆ?:
ಆಂಧ್ರ ಪ್ರದೇಶ ಮೂಲದ ಕಂಪನಿಯೊಂದು ಆಷ್ಘಾನಿಸ್ತಾನದಿಂದ ಆಮದು ಮಾಡಿಕೊಂಡಿದ್ದ ಅರೆ ಸಂಸ್ಕರಿಸಿದ ಟಾಲ್‌್ಕ ಕಲ್ಲುಗಳ ಕಂಟೇನರ್ ಮಧ್ಯೆ ಹೆರಾಯಿನ್ ತುಂಬಿದ್ದ ಕಂಟೇನರ್‌ಗಳನ್ನು ಇಟ್ಟು ಇರಾನ್‌ನ ಅಬ್ಬಾಸ್ ಬಂದರಿನ ಮೂಲಕ ಸೆ. 13-14ರಂದು ಗುಜರಾತ್‌ಗೆ ರಾವಾನಿಸಲಾಗಿತ್ತು. ತಪಾಸಣೆಯ ವೇಳೆ ಅವುಗಳಲ್ಲಿ ಹೆರಾಯಿನ್ ಪತ್ತೆ ಆಗಿತ್ತು.
ಈ ಸಂಬಂಧ ಚೆನ್ನೈ ಮೂಲಕ ದಂಪತಿ ಹಾಗೂ ಹಲವು ಆಫ್ಘನ್ ನಾಗರಿಕರನ್ನು ದೆಹಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಂಧಿಸಲಾಗಿದೆ. ಡ್ರಗ್ಸ್ ಸಾಗಣೆಯ ಹಿಂದೆ ತಾಲಿಬಾನ್-ಐಎಸ್‌ಐ ನಂಟಿನ ಬಗ್ಗೆ ಬಂಧಿತರನ್ನು ತೀವ್ರವಾಗಿ ವಿಚಾರಣೆಗೆ ಗುರಿಪಡಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ವಶಪಡಿಸಿಕೊಳ್ಳಲಾದ ಹೆರಾಯಿನ್ ಪೊಟ್ಟಣಗಳನ್ನು ಗಾಂಧಿ ನಗರ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ ಲ್ಯಾಬೋರೇಟರಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಅತ್ಯುತ್ತಮ ಗುಣಮಟ್ಟದ ಹೆರಾಯಿನ್ ಅನ್ನು ಅಷ್ಘಾನಿಸ್ತಾನದಲ್ಲಿ ಉತ್ಪಾದಿಸಿದ್ದು ಎಂದು ಗೊತ್ತಾಗಿದೆ. 1 ಕೇಜಿ ಹೆರಾಯಿನ್‌ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 7 ಕೋಟಿ ರು. ಬೆಲೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ