ರಾಹುಲ್ ಪಾದಯಾತ್ರೆ ವೇಳೆ ಮೋದಿ, ಜೈ ಶ್ರೀರಾಮ್ ಘೋಷಣೆ: ಸಿಟ್ಟಿಗೆದ್ದು ಬಸ್‌ನಿಂದ ಇಳಿದು ಆಕ್ರೋಶ

By Kannadaprabha News  |  First Published Jan 22, 2024, 7:22 AM IST

ಭಾರತ್ ಜೊಡೋ ನ್ಯಾಯ ಯಾತ್ರೆಯ ವೇಳೆ ಕೆಲವು ಬಿಜೆಪಿ ಕಾರ್ಯಕರ್ತರು ಜೈಶ್ರೀರಾಮ್ ಮತ್ತು ನರೇಂದ್ರ ಮೋದಿಗೆ ಜೈಕಾರ ಕೂಗಿದ ಘಟನೆ ಭಾನುವಾರ ನಡೆದಿದೆ. 


ನಾಗಾಂವ್ (ಅಸ್ಸಾಂ): ಭಾರತ್ ಜೊಡೋ ನ್ಯಾಯ ಯಾತ್ರೆಯ ವೇಳೆ ಕೆಲವು ಬಿಜೆಪಿ ಕಾರ್ಯಕರ್ತರು ಜೈಶ್ರೀರಾಮ್ ಮತ್ತು ನರೇಂದ್ರ ಮೋದಿಗೆ ಜೈಕಾರ ಕೂಗಿದ ಘಟನೆ ಭಾನುವಾರ ನಡೆದಿದೆ. ಇದರಿಂದ ಸಿಟ್ಟಿಗೆದ್ದ ರಾಹುಲ್ ಬಸ್ ನಿಲ್ಲಿಸಲು ಹೇಳಿ ತಾವೇ ಆವೇಶದಿಂದ ಕೆಳಗಿಳಿದು ಘೋಷಣೆ ಕೂಗಿದವರತ್ತ ನುಗ್ಗಿ ಹೋಗಿದ್ದಾರೆ. ಈ ವೇಳೆ ಪೊಲೀಸರು ಘೋಷಣೆ ಕೂಗಿದವರು ಮತ್ತು ರಾಹುಲ್ ನಡುವೆ ತಡೆಗೋಡೆಯಂತೆ ನಿಂತು ಪರಿಸ್ಥಿತಿ ಕೈ ಮೀರದಂತೆ ನೋಡಿಕೊಂಡಿದ್ದಾರೆ. ಬಳಿಕ ಸ್ವಲ್ಪ ಶಾಂತರಾದ  ರಾಹುಲ್‌ ಬಿಜೆಪಿ ಕಾರ್ಯಕರ್ತರತ್ತ ಫ್ಲಯಿಂಗ್ ಕಿಸ್ ಕೊಟ್ಟು ಮುಂದೆ ಸಾಗಿದ್ದಾರೆ.

ನಂತರ ಸಾರ್ವಜನಿಕ ಭಾಷಣದಲ್ಲಿ ಮಾತನಾಡುತ್ತಾ, 'ನಾನು ಬಸ್‌ನಿಂದ ಕೆಳಗಿಳಿದುದನ್ನು ನೋಡಿ ದೊಣ್ಣೆ ಹಿಡಿದುಕೊಂಡು ಘೋಷಣೆ ಕೂಗುತ್ತಿದ್ದ ಬಿಜೆಪಿ ಕಾರ್ಯಕರ್ತರು ಹೆದರಿ ಪರಾರಿಯಾದರು. ಈ ಘಟನೆಯಿಂದ ನಾವು ಯಾರಿಗೂ ಹೆದರುವುದಿಲ್ಲ' ಎಂದು ಅಬ್ಬರಿಸಿದರು. ಬಳಿಕ ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿದ ರಾಹುಲ್, 'ನಾವು ಎಲ್ಲೆಡೆಯೂ ಪ್ರೀತಿ, ಸಹನೆಯ ಅಂಗಡಿ(ಪ್ರೇಮ್ ಕಿ ದುಕಾನ್) ತೆರೆದು ಶಾಂತಿ ಸೌಹಾರ್ದತೆಯನ್ನು ಪಸರಿಸುತ್ತೇವೆ' ಎಂದು ತಿಳಿಸಿದರು.

Tap to resize

Latest Videos

ಮಾರ್ಗ ಬದಲು ಹಿನ್ನೆಲೆ: ರಾಹುಲ್‌ ಯಾತ್ರೆ ವಿರುದ್ಧ ಅಸ್ಸಾಂನಲ್ಲಿ ಪ್ರಕರಣ
ಜೊರ್ಹಾತ್‌ (ಅಸ್ಸಾಂ): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ನ್ಯಾಯ ಯಾತ್ರೆಯು ಅಸ್ಸಾಂನಲ್ಲಿ ತನಗೆ ಅನುಮತಿ ನೀಡಿದ ಮಾರ್ಗದ ಬದಲಾಗಿ ಬೇರೊಂದು ಕಡೆ ಸಾಗಿದ ಆರೋಪದಡಿ ಯಾತ್ರೆಯ ಮುಖ್ಯ ಸಂಘಟಕ ಕೆಬಿ ಬೈಜು ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅಸ್ಸಾಂನ ಜೋರ್ಹತ್‌ನಲ್ಲಿ ಸಾಗುತ್ತಿದ್ದ ಯಾತ್ರೆಯು ಜಿಲ್ಲಾಡಳಿತ ತಮಗೆ ಅನುಮತಿ ನೀಡಿದ್ದ ಕೆಬಿ ರಸ್ತೆ ಬದಲಾಗಿ ದಿಢೀರನೆ ತನ್ನ ಮಾರ್ಗ ಬದಲಿಸಿದ್ದು, ಅಸ್ತವ್ಯಸ್ತ ಪರಿಸ್ಥಿತಿಗೆ ಕಾರಣವಾಯಿತು. ಇದು ಸುರಕ್ಷತಾ ನಿಯಮ ಉಲ್ಲಂಘಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಮ ಮಂದಿರ ಪ್ರಾಣಪ್ರತಿಷ್ಠೆ ರಜೆ ಪ್ರಶ್ನಿಸಿದವರಿಗೆ ಮುಖಭಂಗ, ಅರ್ಜಿ ತಿರಸ್ಕರಿಸಿದ ಹೈಕೋರ್ಟ್!

click me!