ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಸ್ಮಾರಕ ನಿರ್ಮಿಸಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣವಾಗಲಿದೆ ಎಂದು ಪ್ರಣಬ್ ಪುತ್ರಿ ಶರ್ಮಿಷ್ಠಾ ಮುಖರ್ಜಿ ತಿಳಿಸಿದ್ದಾರೆ.
ನವದೆಹಲಿ: ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಸ್ಮಾರಕ ಸ್ಥಳ ಕುರಿತು ಕಾಂಗ್ರೆಸ್-ಬಿಜೆಪಿ ನಡುವೆ ಸಂಘರ್ಷ ನಡೆದಿರುವ ವೇಳೆ, ಹಿರಿಯ ಕಾಂಗ್ರೆಸ್ಸಿಗರಾಗಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸ್ಮಾರಕ ನಿರ್ಮಿಸಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಈ ವಿಷಯವನ್ನು ಟ್ವೀಟರ್‌ನಲ್ಲಿ ಪ್ರಕಟಿಸಿರುವ ಪ್ರಣಬ್ ಪುತ್ರಿ ಶರ್ಮಿಷ್ಠಾ ಮುಖರ್ಜಿ ಅವರು, ‘ರಾಜಘಾಟ್‌ನಲ್ಲಿನ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು ಮತ್ತು ಪ್ರಧಾನ ಮಂತ್ರಿಗಳ ನಿಯೋಜಿತ ಸ್ಮಾರಕ ಸಂಕೀರ್ಣವಾದ ‘ರಾಷ್ಟ್ರೀಯ ಸ್ಮೃತಿ ಸ್ಥಳ’ದಲ್ಲಿ ಸ್ಮಾರಕವನ್ನು ನಿರ್ಮಿಸಲಾಗುವುದು’ ಎಂದು ಕೇಂದ್ರ ಸರ್ಕಾರ ಕಳಿಸಿರುವ ಪತ್ರವನ್ನು ಬಹಿರಂಗಪಡಿಸಿದ್ದಾರೆ.ಇದಲ್ಲದೆ, ‘ನಾವು ಸ್ಮಾರಕಕ್ಕೆ ಬೇಡಿಕೆ ಇಟ್ಟಿರಲಿಲ್ಲ.
ಯಾವುದಕ್ಕೂ ಬೇಡಿಕೆ ಇಡಬಾರದು. ತಾನಾಗೇ ಎಲ್ಲವವೂ ದೊರಕಬೇಕು ಎಂದು ಬಾಬಾ ಹೇಳುತ್ತಿದ್ದರು. ಆದರೂ ಮೋದಿ ಸರ್ಕಾರ ಬಾಬಾಗೆ ಸ್ಮಾರಕ ನೀಡಿದೆ. ಅದಕ್ಕೆ ಧನ್ಯವಾದಗಳು’ ಎಂದು ತಿಳಿಸಿದ್ದಾರೆ.ಇತ್ತೀಚೆಗೆ ಶರ್ಮಿಷ್ಠಾ ಅವರು ಮನಮೋಹನ ಸಿಂಗ್ ನಿಧನದ ಬಳಿಕ, ‘ಪ್ರಣಬ್‌ಗೆ ಕಾಂಗ್ರೆಸ್ ಪಕ್ಷ ಶ್ರದ್ಧಾಂಜಲಿಯನ್ನೂ ಸಲ್ಲಿಸಲಿಲ್ಲ. ಸ್ಮಾರಕವನ್ನೂ ನಿರ್ಮಿಸಲಿಲ್ಲ’ ಎಂದು ಆಕ್ರೋಶ ಹೊರಹಾಕಿದ್ದರು.
ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಆಸಾರಾಂ ಬಾಪುಗೆ ಮಧ್ಯಂತರ ಜಾಮೀನು
ನವದೆಹಲಿ: 2013ರ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ವೈದ್ಯಕೀಯ ಕಾರಣಗಳಿಗಾಗಿ ಸುಪ್ರೀಂ ಕೋರ್ಟ್ ಮಾರ್ಚ್ 31 ರವರೆಗೆ ಮಧ್ಯಂತರ ಜಾಮೀನು ನೀಡಿದೆ. ಆಸಾರಾಂ ಬಾಪು ಅವರು ಹೃದ್ರೋಗದ ಜೊತೆಗೆ ವಿವಿಧ ವಯೋಸಹಜ ಆರೋಗ್ಯ ಸ್ಥಿತಿಗಳಿಂದ ಬಳಲುತ್ತಿದ್ದಾರೆ ಎಂಬ ಆತನ ಪರ ವಕೀಲರ ವಾದ ಗಮನಿಸಿದ ದ್ವಿಸದಸ್ಯ ಪೀಠ, ಜಾಮೀನಿಗೆ ಒಪ್ಪಿತು. ಈ ವೇಳೆ, ಸಾಕ್ಷ್ಯ ಹಾಳು ಮಾಡದಂತೆ ಮತ್ತು ಅನುಯಾಯಿಗಳನ್ನು ಭೇಟಿಯಾಗದಂತೆ ಷರತ್ತು ವಿಧಿಸಿತು. ಇದಲ್ಲದೆ ಶಿಕ್ಷೆ ರದ್ದತಿ ಕೋರಿರುವ ಆತನ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಬಯಸಿ ಗುಜರಾತ್ ಸರ್ಕಾರಕ್ಕೆ ನೋಟಿಸ್ ನೀಡಿತು. ಬಾಪು ಜೋಧಪುರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ ಹಾಗೂ ಸದ್ಯ ಜೋಧಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.