
ನವದೆಹಲಿ(ಅ.27): ಪ್ರಧಾನಿ ನರೇಂದ್ರ ಮೋದಿ 2002ರ ಗೋಧ್ರಾ ಗಲಭೆಯ ತನಿಖೆಗಾಗಿ ನೇಮಕಗೊಂಡಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ)ದೆದುರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ವಿಚಾರಣೆಗೆ ಹಾಜರಾಗಿದ್ದುದು ಎಲ್ಲರಿಗೂ ಗೊತ್ತು. ಆದರೆ, ಆ ವಿಚಾರಣೆಯ ವೇಳೆ ನಿರಂತರ ಒಂಭತ್ತು ತಾಸು ಅವರು ಕನಿಷ್ಠ ಚಹಾ ಕೂಡ ಕುಡಿಯದೆ 100ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿದ್ದರು ಎಂಬ ಕುತೂಹಲಕರ ಸಂಗತಿ ಈಗ ಬೆಳಕಿಗೆ ಬಂದಿದೆ.
ಎಸ್‌ಐಟಿಯ ಮುಖ್ಯಸ್ಥರಾಗಿದ್ದ ನಿವೃತ್ತ ಸಿಬಿಐ ಮುಖ್ಯಸ್ಥ ಆರ್.ಕೆ.ರಾಘವನ್ ಬರೆದಿರುವ ಆತ್ಮಕತೆ ‘ಎ ರೋಡ್ ವೆಲ್ ಟ್ರಾವೆಲ್ಡ್’ನಲ್ಲಿ ಈ ಕುರಿತ ವಿವರಗಳಿವೆ.
‘ವಿಚಾರಣೆಗೆ ಕರೆದಾಗ ತಾವು ಮುಖ್ಯಮಂತ್ರಿಯೆಂಬ ಹಮ್ಮಿಲ್ಲದೆ ಮೋದಿ ತಕ್ಷಣ ಒಪ್ಪಿಕೊಂಡು ನಿಗದಿತ ಸಮಯಕ್ಕೆ ಗಾಂಧಿನಗರದ ಕಚೇರಿಗೆ ಬಂದರು. ನನ್ನ ಸಹೋದ್ಯೋಗಿ ಅಶೋಕ್ ಮಲ್ಹೋತ್ರಾ ಅವರು ಮೋದಿಯವರಿಗೆ 100ಕ್ಕೂ ಹೆಚ್ಚು ಪ್ರಶ್ನೆ ಕೇಳಿದರು. ಒಂದು ಪ್ರಶ್ನೆಯಿಂದಲೂ ನುಣುಚಿಕೊಳ್ಳುವ ಪ್ರಯತ್ನ ಮಾಡದೆ ಮೋದಿ ಎಲ್ಲದಕ್ಕೂ ಉತ್ತರಿಸಿದರು. ನಡುವೆ ಟೀ ಕುಡಿಯಿರಿ ಅಂದರೆ ಕುಡಿಯಲಿಲ್ಲ. ತಾವೇ ಬಾಟಲಿಯಲ್ಲಿ ನೀರು ತಂದುಕೊಂಡಿದ್ದರು. ವಿಚಾರಣೆಯ ವೇಳೆ ಊಟ ಮಾಡಲು ಅಥವಾ ವಿರಾಮ ತೆಗೆದುಕೊಳ್ಳುವುದಕ್ಕೂ ಒಪ್ಪಲಿಲ್ಲ. ಕೊನೆಗೆ ಅಶೋಕ್ ಮಲ್ಹೋತ್ರಾ ತಮಗೆ ವಿರಾಮ ಬೇಕು ಎಂದಾಗ ಮೋದಿ ಒಪ್ಪಿದರು. ಅವರ ಸಾಮರ್ಥ್ಯ ನಮಗೆಲ್ಲರಿಗೂ ಅಚ್ಚರಿ ತರಿಸಿತ್ತು’ ಎಂದು ರಾಘವನ್ ಬರೆದಿದ್ದಾರೆ.
ಗಲಭೆಗೆ ಮೋದಿ ಪ್ರಚೋದನೆ ನೀಡಿದ್ದರು ಎಂದು ಆರೋಪಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಆರೋಪದಲ್ಲಿ ಹುರುಳಿಲ್ಲ. ಗಲಭೆ ನಿಯಂತ್ರಿಸಲು ಮೋದಿ ನಡೆಸಿದ ಸಭೆಯಲ್ಲಿ ಸಂಜೀವ್ ಭಟ್ ಹಾಜರಿದ್ದರು ಎಂದು ಆ ಸಭೆಯಲ್ಲಿ ಹಾಜರಿದ್ದ ಒಬ್ಬನೇ ಒಬ್ಬ ಅಧಿಕಾರಿ ಹೇಳಿಲ್ಲ ಎಂದೂ ರಾಘವನ್ ಬರೆದಿದ್ದಾರೆ.
ಗೋಧ್ರಾ ಗಲಭೆಯ ತನಿಖೆ ನಡೆಸಲು ಸುಪ್ರೀಂಕೋರ್ಟ್ ರಾಘವನ್ ನೇತೃತ್ವದ ಸಮಿತಿ ರಚಿಸಿತ್ತು. ಈ ಸಮಿತಿ 2008ರಿಂದ ತನಿಖೆ ಆರಂಭಿಸಿ 2012ರಲ್ಲಿ ಮೋದಿ ಹಾಗೂ 63 ಮಂದಿಯ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ವರದಿ ಸಲ್ಲಿಸಿತ್ತು. ಅದರಂತೆ ಮೋದಿ ಆರೋಪಮುಕ್ತರಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ