'ನಾವು ತುಳಸಿ ಬೆಳೀತಿವಿ, ಗಾಂಜಾವನ್ನಲ್ಲ: ಆಹಾರ ಹುಡುಕಿಕೊಂಡು ಬಂದವರು ನೀವು'

By Kannadaprabha NewsFirst Published Oct 27, 2020, 7:37 AM IST
Highlights

ಉದ್ಧವ್‌, ಕಂಗನಾ ಗಾಂಜಾ ವಾಕ್ಸಮರ| ನಾವು ತುಳಸಿ ಬೆಳೀತಿವಿ, ಗಾಂಜಾವನ್ನಲ್ಲ: ಉದ್ಧವ್‌| ಆಹಾರ ಹುಡುಕಿಕೊಂಡು ಬಂದವರು ನೀವು| ನನ್ನದು ದೇವಭೂಮಿ, ಗಾಂಜಾ ನಾಡಲ್ಲ: ಕಂಗನಾ| ಅಧಿಕಾರ ನಿಮ್ಮ ನೆತ್ತಿಗೇರಿ ಕೂತಿದೆ

ಮುಂಬೈ: ನಟ ಸುಶಾಂತ್‌ ನಿಗೂಢ ಸಾವಿನ ಬಳಿಕ ಆರಂಭವಾಗಿದ್ದ ನಟಿ ಕಂಗನಾ ರಾಣಾವತ್‌ ಮತ್ತು ಶಿವಸೇನೆ ನಡುವಿನ ವಾಕ್ಸಮರ ಇದೀಗ ಮತ್ತೊಂದು ಹಂತ ತಲುಪಿದೆ. ಇದೇ ಮೊದಲ ಬಾರಿಗೆ ಹೆಸರು ಹೇಳದೆಯೇ ಕಂಗನಾ ವಿರುದ್ಧ ಶಿವಸೇನೆ ನಾಯಕ ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಹರಿಹಾಯ್ದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕಂಗನಾ, ನೀವು ಸ್ವಜನಪಕ್ಷಪಾತದ ಅತಿದೊಡ್ಡ ಕೊಡುಗೆ. ನನಗೆ ನಿಮ್ಮಂತೆ ತಂದೆಯ ಅಧಿಕಾರ ಮತ್ತು ಹಣದ ಅಹಂಕಾರ ನೆತ್ತಿಗೇರಿಲ್ಲ ಎಂದು ಕಿಡಿಕಾರಿದ್ದಾರೆ.

ನಾವು ತುಳಸಿ ಬೆಳೀತಿವಿ, ಗಾಂಜಾವನ್ನಲ್ಲ: ಉದ್ಧವ್‌

ಭಾನುವಾರ ಮುಂಬೈನಲ್ಲಿ ಪಕ್ಷದ ಪರವಾಗಿ ಆಯೋಜಿಸಿದ್ದ ದಸರಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಉದ್ಧವ್‌, ‘ಕೆಲವರು ಆಹಾರ ಹುಡುಕಿ ಮುಂಬೈಗೆ ಬರುತ್ತಾರೆ. ಬಳಿಕ ಇದೇ ನಗರವನ್ನು ಪಾಕ್‌ ಆಕ್ರಮಿತ ಕಾಶ್ಮೀರ ಎನ್ನುತ್ತಾರೆ. ಮಾದಕ ವಸ್ತು ಸೇವಿಸುವವರು ಎಲ್ಲೆಡೆ ಇರುತ್ತಾರೆ. ಆದರೆ ಇವರು ಚಿತ್ರಿಸುವ ರೀತಿಯೇ ಬೇರೆ. ಅವರಿಗೆ ಗೊತ್ತಿಲ್ಲ, ನಮ್ಮ ಮನೆಯಲ್ಲಿ ತುಳಸಿ ಬೆಳೆಯುತ್ತೇವೆಯೋ ಹೊರತೂ ಗಾಂಜಾವನ್ನಲ್ಲ. ಗಾಂಜಾ ತೋಟ ಇರುವುದು ನಿಮ್ಮ ರಾಜ್ಯದಲ್ಲಿ, ಅದು ಎಲ್ಲಿ ಎಂಬುದು ನಿಮಗೂ ಗೊತ್ತು’ ಎಂದು ಹೆಸರು ಹೇಳದೆಯೇ ಕಂಗನಾ ಮತ್ತು ಹಿ.ಪ್ರದೇಶವನ್ನು ಟೀಕಿಸಿದ್ದಾರೆ. ಜೊತೆಗೆ ಬಿಹಾರದ ಪುತ್ರನಿಗೆ ನ್ಯಾಯದ ಹೆಸರಲ್ಲಿ ಮಹಾರಾಷ್ಟ್ರದ ಪುತ್ರನ ಚಾರಿತ್ರ್ಯ ವಧೆ ಮಾಡಲಾಗುತ್ತಿದೆ ಎಂದು ತಮ್ಮ ಪುತ್ರನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ನನ್ನದು ದೇವಭೂಮಿ, ಗಾಂಜಾ ನಾಡಲ್ಲ: ಕಂಗನಾ

ಉದ್ಧವ್‌ ಟೀಕೆಗೆ ಸೋಮವಾರ ಟ್ವೀಟರ್‌ನಲ್ಲಿ ಉತ್ತರಿಸಿರುವ ಕಂಗನಾ ‘ಮುಖ್ಯಮಂತ್ರಿಗಳೇ ನೀವೊಬ್ಬ ಕ್ಷುಲ್ಲಕ ವ್ಯಕ್ತಿ. ನಿಮ್ಮ ಮಗನ ವಯಸ್ಸಿನ ನನ್ನ ಮೇಲೆ ಈ ರೀತಿ ಮಾತನಾಡಿದ್ದೀರಲ್ಲ; ಓರ್ವ ಮುಖ್ಯಮಂತ್ರಿಯಾಗಿರುವುದಕ್ಕೆ ನಿಮಗೆ ನಾಚಿಕೆಯಾಗಬೇಕು. ನೀವು ಸ್ವಜನಪಕ್ಷ ಪಾತದ ಅತಿದೊಡ್ಡ ಕೊಡುಗೆ. ನಿಮ್ಮ ತಂದೆಯ ಅಧಿಕಾರ, ಹಣಬಲ ನಿಮ್ಮ ನೆತ್ತಿಗೇರಿದಂತೆ ನನಗೆ ಏರಿಲ್ಲ. ಜನಪ್ರತಿನಿಧಿಯಾಗಿದ್ದುಕೊಂಡು ನಿಮ್ಮ ಅಭಿಪ್ರಾಯ ಒಪ್ಪದವರನ್ನು ಅಧಿಕಾರ ಬಳಸಿ ಅವಮಾನ ಮಾಡುವುದು, ಆಸ್ತಿಪಾಸ್ತಿಗೆ ಹಾನಿ ಮಾಡುವುದು, ಟೀಕಿಸುವುದು ಮಾಡುತ್ತಿದ್ದೀರಿ. ನೀವು ಸಿಎಂ ಹುದ್ದೆಯಲ್ಲಿ ಕೂರಲು ಅರ್ಹರಲ್ಲ’ ಎಂದು ಕಿಡಿಕಾರಿದ್ದಾರೆ.

ಇನ್ನು ಪಿಒಕೆ ಹೇಳಿಕೆ ಸಂಬಂಧ ಮಾತನಾಡಿರುವ ಕಂಗನಾ ‘ಕೆಲ ವ್ಯಕ್ತಿಗಳು ಫ್ರೀ ಕಾಶ್ಮೀರ್‌ ಎಂದು ಘೋಷಣೆ ಕೂಗಿದ್ದಕ್ಕಷ್ಟೇ ನಾನು ಮುಂಬೈ ಅನ್ನು ಪಿಒಕೆಗೆ ಹೋಲಿಸಿದ್ದು. ಹಿಮಾಚಲವನ್ನು ದೇವಭೂಮಿ ಎಂದು ಕರೆಯುತ್ತಾರೆಯೇ ಹೊರತೂ ಗಾಂಜಾ ನಾಡು ಎಂದಲ್ಲ. ನಮ್ಮದು ಶಿವ, ಪಾರ್ವತಿಯರು, ಋುಷಿ ಮುನಿಗಳು ವಾಸ ಮಾಡಿದ ನಾಡು’ ಎಂದು ಸಿಎಂಗೆ ತಿರುಗೇಟು ನೀಡಿದ್ದಾರೆ.

click me!