ಕೇಂದ್ರ ಬಜೆಟ್ ಲೋಕಸಭೆ ಚುನಾವಣೆ ಪ್ರೇರಿತ ಅಲ್ಲ, ಅಭಿವೃದ್ಧಿಗೆ ಪೂರಕ: ಸಚಿವ ಪ್ರಹ್ಲಾದ್ ಜೋಶಿ

By Sathish Kumar KHFirst Published Feb 1, 2024, 4:49 PM IST
Highlights

ಲೋಕಸಭೆ ಚುನಾವಣೆ  ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್ ಇದಲ್ಲ. ಬದಲಾಗಿ ದೇಶದ ಹಿತ, ಬಡವರ ಹಿತದೃಷ್ಟಿ ಹಾಗೂ ಅಭಿವೃದ್ಧಿಪರ ಬಜೆಟ್ ಆಗಿದೆ.

ಬೆಂಗಳೂರು (ಫೆ.01): ಲೋಕಸಭೆ ಚುನಾವಣೆ  ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್ ಇದಲ್ಲ. ಬದಲಾಗಿ ದೇಶದ ಹಿತ, ಬಡವರ ಹಿತದೃಷ್ಟಿ ಹಾಗೂ ಅಭಿವೃದ್ಧಿಪರ ಬಜೆಟ್ ಆಗಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಖಾತೆ ನಿರ್ವಹಿಸುತ್ತಿರುವ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಬಜೆಟ್ ಮಂಡನೆ ಬಳಿಕ ಮಾತನಾಡಿರುವ ಸಚಿವರು, ದೇಶದ ಹಣಕಾಸಿನ ಭದ್ರತೆ ಜೊತೆಗೆ ಅಭಿವೃದ್ಧಿಪರವಾಗಿ ಇರುವಂಥ ಮಧ್ಯಂತರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಲೋಕಸಭೆ ಚುನಾವಣೆ ಪ್ರೇರಿತವಾಗಿ ಏನು ಬೇಕಾದರೂ ಮಾಡಬಹುದಾಗಿತ್ತು. ಆದರೆ, ಹಾಗೆ ಮಾಡದೆ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ವಸತಿ, ಆರೋಗ್ಯ, ರಸ್ತೆ, ಸಾರಿಗೆ ಹೀಗೆ ಮೂಲ ಸೌಕರ್ಯಕ್ಕೆ ಒತ್ತು ಕೊಟ್ಟು ಮಂಡಿಸಿದಂತಹ ಮುಂಗಡ ಪಾತ್ರವಾಗಿದೆ ಎಂದು ಸಚಿವ ಜೋಶಿ ಸಮರ್ಥಿಸಿಕೊಂಡಿದ್ದಾರೆ.

ದಕ್ಷಿಣ ಭಾರತ ಪ್ರತ್ಯೇಕ ದೇಶ ಬೇಡಿಕೆಯನ್ನು ಪ್ರಸ್ತಾಪಿಸಿದ ಸಂಸದ ಡಿ.ಕೆ. ಸುರೇಶ್

ಈ ವಿಕಸಿತ ಭಾರತ ಬಜೆಟ್‌ನಲ್ಲಿ ಘೋಷಿಸಿದಂತೆ ರೈಲ್ವೆ ಕಾರಿಡಾರ್ ಕಾರ್ಯಕ್ರಮ ಕಲ್ಲಿದ್ದಲು ಸಚಿವಾಲಯದ ಫಸ್ಟ್ ಮೈಲ್ ಕನೆಕ್ಟಿವಿಟಿ ಯೋಜನೆಗಳಿಗೆ ಪೂರಕವಾಗಿದೆ. ವಿತ್ತ ಸಚಿವರು ಕೃಷಿ, ಮೀನುಗಾರಿಕೆ, ಆರೋಗ್ಯ ಕ್ಷೇತ್ರಗಳಿಗೆ ಸಾಕಷ್ಟು ಒತ್ತು ಕೊಟ್ಟಿದ್ದಾರೆ. 11.11 ಲಕ್ಷ ಕೋಟಿ ರೂಪಾಯಿ ಮೂಲಭೂತ ಸೌಕರ್ಯಗಳಿಗೆ ಮೀಸಲಿಟ್ಟಿರುವುದು ಗಮನಾರ್ಹವಾಗಿದೆ. ಕೇಂದ್ರ ಸರ್ಕಾರ 2030ರ ವೇಳೆಗೆ 100 ಮಿಲಿಯನ್ ಟನ್ ಕಲ್ಲಿದ್ದಲು ಅನಿಲೀಕರಣಕ್ಕಾಗಿ ರಾಷ್ಟ್ರೀಯ ಮಿಷನ್ ದಾಖಲೆ ಸಿದ್ಧಪಡಿಸಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ  ಹೇಳಿದ್ದಾರೆ.

ಸುಸ್ಥಿರ ಬಳಕೆಗಾಗಿ ಕಲ್ಲಿದ್ದಲಿನ ವೈವಿಧ್ಯೀಕರಣದತ್ತ ಸಾಗುತ್ತಿದ್ದೇವೆ. ಜಾಗತಿಕವಾಗಿ ಬೆಳೆಯುತ್ತಿರುವ ಪರಿಸರ ಕಾಳಜಿ ಮತ್ತು ಭಾರತ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ವಿಸ್ತರಿಸುವ ಗುರಿಯೊಂದಿಗೆ ಹೆಜ್ಜೆ ಹಾಕಿದ್ದೇವೆ ಎಂದು ಪ್ರತಿಪಾದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರ ದೂರದೃಷ್ಟಿ, ಪ್ರೋತ್ಸಾಹದ ಕಾರಣ ನಾವಿಂದು ಸ್ವಾವಲಂಬಿ ಭಾರತದತ್ತ ಸಾಗಿದ್ದೇವೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಬಿಬಿಎಂಪಿ ಮೆಡಿಕಲ್ ಕಾಲೇಜು: ಬಜೆಟ್‌ನಲ್ಲಿ 500 ಕೋಟಿ ಮೀಸಲು

ಅಭಿನಂದನೆ ತಿಳಿಸಿದ ವಿಪಕ್ಷ ನಾಯಕ ಅಶೋಕ್:  ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣದ ಸಂಕಲ್ಪವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪೂರಕವಾದ ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕದ ಜನತೆಯ ಪರವಾಗಿ ಅಭಿನಂದನೆಗಳು. ಈ ಮಧ್ಯಂತರ ಬಜೆಟ್‌ನಲ್ಲಿ ನಮ್ಮ ದೇಶದ ನಾಲ್ಕು ಸ್ಥಂಭಗಳಾದ ಯುವ ಜನಾಂಗ, ಬಡವರು, ಮಹಿಳೆಯರು ಹಾಗೂ ರೈತರ ಕಲ್ಯಾಣಕ್ಕೆ ಆದ್ಯತೆ ನೀಡಲಾಗಿದ್ದು, ಮುಂದಿನ ಜುಲೈನಲ್ಲಿ ಮಂಡಿಸಲಾಗುವ ಪೂರ್ಣ ಪ್ರಮಾಣದ ಬಜೆಟ್ ನಲ್ಲಿ ವಿಕಸಿತ ಭಾರತ ನಿರ್ಮಾಣದ ಸಮಗ್ರ ನೀಲಿ ನಕ್ಷೆ ಪ್ರಸ್ತುತಪಡಿಸಲು ವೇದಿಕೆ ಸಜ್ಜುಗೊಳಿಸಿದೆ.

click me!