ಮತ್ತೆ ಕನ್ನಡಿಗರ ಒಕ್ಕಲೆಬ್ಬಿಸಿದ ಗೋವಾ ಸರ್ಕಾರ!

By Kannadaprabha NewsFirst Published Apr 15, 2024, 5:01 AM IST
Highlights

ಗೋವಾ ಸರ್ಕಾರ ಇಲ್ಲಿನ ವಲಸೆ ಕನ್ನಡಿಗರ ಒಕ್ಕಲೆಬ್ಬಿಸುವ ಕಾರ್ಯವನ್ನು ಮತ್ತೆ ಮುಂದುವರಿಸಿದ್ದು, ಉತ್ತರ ಗೋವಾದ ಸಾಂಗೋಲ್ಡಾ ಪ್ರದೇಶದಲ್ಲಿರುವ ಕನ್ನಡಿಗರ 15 ಮನೆಗಳನ್ನು ಜೆಸಿಬಿ ಬಳಸಿ ನೆಲಸಮಗೊಳಿಸಿದೆ.

ಮಲ್ಲಿಕಾರ್ಜುನ ಸಿದ್ದಣ್ಣವರ

ಪಣಜಿ (ಏ.15): ಗೋವಾ ಸರ್ಕಾರ ಇಲ್ಲಿನ ವಲಸೆ ಕನ್ನಡಿಗರ ಒಕ್ಕಲೆಬ್ಬಿಸುವ ಕಾರ್ಯವನ್ನು ಮತ್ತೆ ಮುಂದುವರಿಸಿದ್ದು, ಉತ್ತರ ಗೋವಾದ ಸಾಂಗೋಲ್ಡಾ ಪ್ರದೇಶದಲ್ಲಿರುವ ಕನ್ನಡಿಗರ 15 ಮನೆಗಳನ್ನು ಜೆಸಿಬಿ ಬಳಸಿ ನೆಲಸಮಗೊಳಿಸಿದೆ.

‘ನಾಲ್ಕು ದಶಕಗಳಿಂದ ಇಲ್ಲಿ ವಾಸವಾಗಿದ್ದೇವೆ. ಈಗ ಇದ್ದಕ್ಕಿದ್ದಂತೆ ಎದ್ದು ಹೋಗಿ ಎಂದರೆ ನಾವು ಎಲ್ಲಿಗೆ ಹೋಗಬೇಕು’ ಎಂದು ಪ್ರತಿರೋಧ ಒಡ್ಡಿದವರ ಮೇಲೆ ಪೊಲೀಸರು ಲಾಠಿ ಬೀಸಿ ಮನೆಯಿಂದ ಹೊರಗೆ ಓಡಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ ಧ್ವಂಸವಾದ ಮನೆಗಳ ಎದುರು ರೋಧಿಸುತ್ತಿದ್ದಾರೆ. ದವಸ-ಧಾನ್ಯ, ಬಟ್ಟೆ-ಹಾಸಿಗೆಗಳೂ ಮನೆಯ ಅವಶೇಷಗಳ ಅಡಿ ಸಿಲುಕಿವೆ. ಯಾರೋ ಕೊಟ್ಟ ತಿಂಡಿ, ಊಟ ಸೇವಿಸುತ್ತ ದಿಕ್ಕುಗಾಣದೇ ಸಮಯ ದೂಡುತ್ತಿದ್ದಾರೆ.

ಮೀಸಲಾತಿ ಶಾಶ್ವತ, ಅದನ್ನು ರದ್ದು ಮಾಡಲ್ಲ: ಅಮಿತ್‌ ಶಾ ಸ್ಪಷ್ಟನೆ

ಈ ಕನ್ನಡಿಗರ ಮನೆಗಳನ್ನು ಧ್ವಂಸ ಮಾಡಿದ ವಿಷಯ ತಿಳಿದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತ್ರಸ್ತರಿಗೆ ರಕ್ಷಣೆ ನೀಡುವಂತೆ ಮಾಡಿಕೊಂಡ ಮನವಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ ಸ್ಪಂದಿಸಿದ್ದಾರೆ. ಸಂತ್ರಸ್ತರಿಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಬೀದಿಪಾಲಾಗಿರುವ ಸಂತ್ರಸ್ತರಿಗೆ ಈಗ ತಾತ್ಕಾಲಿಕ ನೆರವನ್ನೂ ನೀಡದ ಗೋವಾ ಸರ್ಕಾರ, ಮುಂದೆ ಪುನರ್ವಸತಿ ಕಲ್ಪಿಸುವುದು ಅನುಮಾನ.

6ನೇ ಬಾರಿ ದುಷ್ಕೃತ್ಯ:

ಗೋವಾ ನಿವಾಸಿ ಕನ್ನಡಿಗರನ್ನು ಇಲ್ಲಿನ ಸರ್ಕಾರ ನಿರ್ದಯವಾಗಿ ಒಕ್ಕಲೆಬ್ಬಿಸುತ್ತಿರುವುದು ಇದು ಆರನೇ ಬಾರಿ. ಹೀಗೆ ಬೀದಿಗೆ ತಳ್ಳಿದವರಿಗೆ ಈವರೆಗೆ ಯಾವುದೇ ಪುನರ್ವಸತಿ ಕಲ್ಪಿಸಿಲ್ಲ. ಮೊದಲು ಪುನರ್ವಸತಿ ಕಲ್ಪಿಸಿ, ಬಳಿಕ ಅತಿಕ್ರಮಣ ತೆರವುಗೊಳಿಸಿ ಎಂದು ನ್ಯಾಯಾಲಯ ನಿರ್ದೇಶನ ನೀಡಿದರೂ ಅದಕ್ಕೆ ಕಿವಿಗೊಟ್ಟಿಲ್ಲ.

2005ರಲ್ಲಿ ವಾಸ್ಕೋದ ಬೈನಾದಲ್ಲಿದ್ದ 1,162 ಕನ್ನಡಿಗ ಕುಟುಂಬ, ಅಲ್ಲಿಯೇ 2014ರಲ್ಲಿ 70 ಕುಟುಂಬ, 2015ರಲ್ಲಿ 157 ಕುಟುಂಬ, 2017ರಲ್ಲಿ ಮಂಗೂರ್‌ ಹಿಲ್ಸ್‌ ನಲ್ಲಿ ವಾಸಿಸುತ್ತಿದ್ದ 211 ಕುಟುಂಬ, 2019ರಲ್ಲಿ ಝರಿ ಪ್ರದೇಶದಲ್ಲಿದ್ದ 62 ಕುಟುಂಬಗಳನ್ನು ಒಕ್ಕಲೆಬ್ಬಿಸಿದ್ದ ಸರ್ಕಾರ, ಈಗ ಸಾಂಗೋಲ್ಡಾದಲ್ಲಿರುವ 15 ಕನ್ನಡಿಗರ ಮನೆಗಳನ್ನು ಧ್ವಂಸ ಮಾಡಿದೆ.

ಬೆಳಗಾವಿ ಜಿಲ್ಲೆ ಸಂಕೇಶ್ವರ ಬಳಿಕ ಕ್ಯಾಸ್ತಿಯ ಚಂದ್ರಕಾಂತ ಕಾಂಬಳೆ, ಶಮಸುದ್ದೀನ ನದಾಫ್, ಮೊಹ್ಮದ ಗೌಸ್‌, ರಮೇಶ್‌ ನಾಯ್ಕ, ರಮೇಶ್‌ ರಾಠೋಡ, ಗಣೇಶ ಮಾಳಗಿಮನಿ ಸೇರಿದಂತೆ ಒಟ್ಟು 15 ಕನ್ನಡಿಗ ಕುಟುಂಬಗಳು, 5 ತಮಿಳು, 2 ಮಲೆಯಾಳಿ ಭಾಷಿಗ ಸೇರಿದಂತೆ ಒಟ್ಟು 23 ಕುಟುಂಬಗಳನ್ನು ಕಳೆದ ಶುಕ್ರವಾರ ಇಲ್ಲಿ ಒಕ್ಕಲೆಬ್ಬಿಸಲಾಗಿದೆ.

ನಾಲ್ಕು ದಶಕಗಳ ವಾಸ:

ಉದ್ಯೋಗ ಅರಸಿ ಕರ್ನಾಟಕದಿಂದ ಇಲ್ಲಿಗೆ ಬಂದಿರುವ ಈ ಕುಟುಂಬಗಳು ಕಳೆದ ನಾಲ್ಕು ದಶಕಗಳಿಂದ ಇಲ್ಲಿ ವಾಸವಾಗಿವೆ. 200ಕ್ಕೂ ಹೆಚ್ಚು ಜನ ಇದ್ದಾರೆ. ಇವರಲ್ಲಿನ ಬಹಳಷ್ಟು ಮಂದಿ ಇಲ್ಲಿಯೇ ಹುಟ್ಟಿದವರು. ಕಟ್ಟಡ, ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಕೂಲಿಯಾಳಾಗಿ ದುಡಿಮೆ, ಬಟ್ಟೆ ವ್ಯಾಪಾರ ಇತ್ಯಾದಿ ಕೆಲಸ ಮಾಡುತ್ತ ಬದುಕು ಸಾಗಿಸುತ್ತಿದ್ದರು. ಇವರ ಪುಟ್ಟ ಮನೆಗಳಿಗೆ ಸ್ಥಳೀಯ ಆಡಳಿತ ವಿದ್ಯುತ್‌, ನಲ್ಲಿ ನೀರು, ವೈಯಕ್ತಿಕ ಶೌಚಾಲಯ, ರಸ್ತೆ ಇತ್ಯಾದಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದೆ.

2022ರಲ್ಲಿ ಇಲ್ಲಿನ ‘ಗೋವಾ ಕೋಸ್ಟಲ್‌ ಝೋನ್‌ ಅಥಾರಿಟಿ’ (ಜಿಸಿಝಡ್‌ಎಂಎ), ಇಲ್ಲಿನ 23 ಕುಟುಂಬಗಳಿಗೆ ನೋಟೀಸ್‌ ನೀಡಿ, ‘ನೀವು ವಾಸಿಸುವ ಜಾಗ ನಮಗೆ ಸೇರಿದ್ದು, ಇಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಿದೆ. ತಕ್ಷಣ ಜಾಗ ತೆರವುಗೊಳಿಸಿ’ ಎಂದು ಸೂಚಿಸಿತ್ತು.

ಈ ನೋಟಿಸ್‌ ಹಿಡಿದು ನಿವಾಸಿಗಳು ಸ್ಥಳೀಯ ಬಿಜೆಪಿ ಶಾಸಕ ಕೇದಾರ ನಾಯ್ಕ ಅವರ ಬಳಿ ಹೋಗಿದ್ದರು. ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅಲ್ಲಿಯೇ ಉಳಿಸುವ ಅಥವಾ ಪರ್ಯಾಯ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರು. ಆದರೆ, ಆರು ತಿಂಗಳು ಕಳೆದರೂ ಯಾವುದೇ ಉತ್ತರ ಬರಲಿಲ್ಲ. ಅಷ್ಟೊತ್ತಿಗೆ ಪ್ರಾಧಿಕಾರ ಅಂತಿಮ ನೋಟಿಸ್‌ ನೀಡಿ, ತಕ್ಷಣ ಜಾಗ ಖಾಲಿ ಮಾಡುವಂತೆ ಸೂಚಿಸಿತು.

ಕಾಂಗ್ರೆಸ್ಸಿಗರು ತುಕ್ಡೆ ಗ್ಯಾಂಗ್ ಸುಲ್ತಾನರು: ಮೋದಿ ಕಿಡಿ

ಆಗ ನಿವಾಸಿಗಳೆಲ್ಲ ಸೇರಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದ ಎದುರು ನ್ಯಾಯಬೇಡಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಕೋಸ್ಟಲ್‌ ಝೋನ್‌ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು. ಆದರೆ, ಸುಮಾರು ನಾಲ್ಕು ದಶಕಗಳಿಂದ ಅಲ್ಲಿ ವಾಸವಾಗಿದ್ದಾರೆ, ಅವರ ನಿವಾಸಗಳಿಗೆ ಸ್ಥಳೀಯ ಸರ್ಕಾರ ಮೂಲಸೌಕರ್ಯಗಳನ್ನು ಕಲ್ಪಿಸಿದೆ. ಹಾಗಾಗಿ ಅವರಿಗೆಲ್ಲ ಪರ್ಯಾಯ ವ್ಯವಸ್ಥೆ ಅಥವಾ ಪುನರ್ವಸತಿ ಕಲ್ಪಿಸಿ ಅಲ್ಲಿನ ಮನೆಗಳನ್ನು ತೆರವುಗೊಳಿಸಿ ಎಂದು ನಿರ್ದೇಶನ ನೀಡಿದೆ. ಅದಾವುದಕ್ಕೂ ಕ್ಯಾರೇ ಎನ್ನದ ಗೋವಾ ಸರ್ಕಾರ, ಕಳೆದ ಶುಕ್ರವಾರ ರಾತ್ರಿ ಪೊಲೀಸರನ್ನು ಮುಂದಿಟ್ಟುಕೊಂಡು ನಾಲ್ಕಾರು ಜೆಸಿಬಿಗಳ ಮೂಲಕ 23 ಮನೆಗಳನ್ನು ಧ್ವಂಸ ಮಾಡಿದೆ.

ನಾಲ್ಕು ದಶಕಗಳಿಂದ ನಾವು ಇಲ್ಲಿ ವಾಸವಾಗಿದ್ದೇವೆ. ನಮ್ಮ ಮಕ್ಕಳು, ಮೊಮ್ಮಕ್ಕಳು ಇಲ್ಲಿಯೇ ಹುಟ್ಟಿ ಇಲ್ಲಿಯವರೇ ಆಗಿದ್ದಾರೆ. ತಾಯ್ನೆಲ ಕರ್ನಾಟಕದಲ್ಲಿ ನಮಗೆ ಯಾವುದೇ ಆಸ್ತಿ ಇಲ್ಲ. ಇಲ್ಲಿನ ದುಡಿಮೆಯನ್ನೇ ನಂಬಿ ಬದುಕುತ್ತಿದ್ದೇವೆ. ನ್ಯಾಯಾಲಯದ ನಿರ್ದೇಶನ ಮೀರಿ ಈಗ ಏಕಾಏಕಿ ಮನೆಗಳನ್ನೆಲ್ಲ ಒಡೆದು, ನಮ್ಮನ್ನು ಬೀದಿಪಾಲು ಮಾಡಿದ್ದಾರೆ. ನಾವು ಹೇಗೆ ಬದುಕಬೇಕು?

- ಚಂದ್ರಕಾಂತ ಕಾಂಬಳೆ, ಸಂತ್ರಸ್ತ ಕನ್ನಡಿಗ.

ನಾಲ್ಕಾರು ದಶಕಗಳಿಂದ ವಾಸವಾಗಿ ಇಲ್ಲಿನ ಮತದಾರರಾಗಿ, ಗೋವಾ ಅಭಿವೃದ್ಧಿಗೆ ಸತತ ಶ್ರಮಿಸುತ್ತಿರುವ ಕನ್ನಡಿಗರನ್ನು ಹೀಗೆ ಏಕಾಏಕಿ ಒಕ್ಕಲೆಬ್ಬಿಸಿದ್ದು ಖಂಡನೀಯ. ಗೋವಾ ಮೇಲಿಂದ ಮೇಲೆ ಹೀಗೆ ಕನ್ನಡಿಗರ ಮೇಲೆ ದೌರ್ಜನ್ಯ ಎಸಗುತ್ತಿದೆ. ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ಗಮನಕ್ಕೆ ತರುವ ಮೂಲಕ ಸಂತ್ರಸ್ತರ ಬೆನ್ನಿಗೆ ನಿಲ್ಲಬೇಕು.

-ಶಿವಾನಂದ ಬಿಂಗಿ, ಕನ್ನಡಿಗರ ಮುಖಂಡ

click me!