* ತಾರಕ್ಕೇರಿದ ಹಿಜಾಬ್-ಕೇಸರಿಶಾಲು ವಿವಾದ
* ಕುಂದಾಪುರ ಕಾಲೇಜಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಗೇಟ್ ಬಂದ್ , ಕಾಶ್ಮೀರ ಮಾಜಿ ಸಿಎಂ ಕಿಡಿ
* ಘಟನೆ ಬಗ್ಗೆ ಕಿಡಿಕಾರಿದ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ
* ರಾಷ್ಟ್ರೀಯ ಮಟ್ಟದ ಸುದ್ದಿಯಾದ ವಿವಾದ
ಉಡುಪಿ/ಕುಂದಾಪುರ(ಫೆ. 04) ಉಡುಪಿ (Udupi) ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಿಂಗಳಿಂದ ನಡೆಯುತ್ತಿರುವ ಹಿಜಾಬ್ (Hijab) ಮತ್ತು ಕೇಸರಿ ಶಾಲು (Saffron Scarf) ವಿವಾದ ಇದೀಗ ಮತ್ತಷ್ಟುತಾರಕಕ್ಕೇರಿದೆ. ಕುಂದಾಪುರದ (Kunadapur) ಕಾಲೇಜಿನಲ್ಲಿ ಹಿಜಾಬ್ ಧರಿಸಿ ಆಗಮಿಸಿದ್ದ 22 ಮುಸ್ಲಿಂ (Muslim) ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿ ಪ್ರಾಂಶುಪಾಲರು ಕಾಲೇಜಿನ ಗೇಟನ್ನು ಬಂದ್ ಮಾಡಿರುವ ಘಟನೆ ಕೂಡ ನಡೆದಿದೆ. ಇದು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿದ್ದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಕಿಡಿಕಾರಿದ್ದಾರೆ.
ಕಾಲೇಜು ಗೇಟ್ ಬಂದ್: ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದಕ್ಕೆ ಪ್ರತಿಯಾಗಿ ಹಿಂದು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಾಗ ಗೊಂದಲದ ವಾತಾವರಣ ಉಂಟಾಗಿತ್ತು. ತಕ್ಷಣವೇ ಕಾಲೇಜಿಗೆ ದೌಡಾಯಿಸಿದ್ದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಅವರು ಶಿಕ್ಷಣ ಸಚಿವರಿಗೆ ಕರೆ ಮಾಡಿ, ಅವರ ಸೂಚನೆಯಂತೆ ಹಿಜಾಬ್ ಧರಿಸದೆ ಕೇವಲ ಸಮವಸ್ತ್ರ ಧರಿಸಿದವರಿಗೆ ಮಾತ್ರ ಕಾಲೇಜು ಪ್ರವೇಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದರು. ಆದರೂ ಗುರುವಾರ 22 ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಕಾಲೇಜು ಪ್ರವೇಶಿಸಲು ಯತ್ನಿಸಿದರು. ಈ ವೇಳೆ ಅವರನ್ನು ಗೇಟಿನ ಬಳಿಯೇ ಕಾಲೇಜು ಪ್ರಾಂಶುಪಾಲರು, ಸಿಬ್ಬಂದಿ ತಡೆದರು. ಈ ವಿದ್ಯಾರ್ಥಿನಿಯರು ಮಧ್ಯಾಹ್ನವರೆಗೂ ಕಾಲೇಜಿನ ಗೇಟಿನ ಹೊರಗೆ ನಿಂತು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿ, ಮನೆಗೆ ತೆರಳಿದ್ದಾರೆ.
ನಾವು ಅನೇಕ ತಿಂಗಳಿಂದ ಹಿಜಾಬ್ ಧರಿಸಿಕೊಂಡೇ ಕಾಲೇಜಿಗೆ ಬರುತ್ತಿದ್ದೇವೆ. ಈಗ ಏಕಾಏಕಿ ನಿರ್ಬಂಧ ಹೇರಿರುವುದು, ಶೈಕ್ಷಣಿಕ ವರ್ಷ ಮುಗಿಯಲು ತಿಂಗಳಿರುವಾಗ ತರಗತಿಗೆ ಪ್ರವೇಶ ನೀಡದಿರುವುದು ಸರಿಯಲ್ಲ, ನಮ್ಮ ಭವಿಷ್ಯದ ಬಗ್ಗೆ ಗಮನ ಹರಿಸಿ, ನಮ್ಮ ಧಾರ್ಮಿಕ ಹಕ್ಕಿನಂತೆ ಹಿಜಾಬ್ ಧರಿಸಿ ತರಗತಿಗೆ ಪ್ರವೇಶ ನೀಡಿ ಎಂದು ಆಗ್ರಹಿಸಿ, ಕಾಲೇಜಿನ ಗೇಟಿನ ಹೊರಗೆ ನಿಂತುಕೊಂಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ಅವರು, ಸರ್ಕಾರಿ ನೌಕರನಾಗಿ ನಾನು ಸರ್ಕಾರದ ಆದೇಶ ಪಾಲಿಸಬೇಕಾಗಿದೆ. ಕಾಲೇಜಿನ ಸಮವಸ್ತ್ರ ಹೊರತು ಪಡಿಸಿ ಬೇರೆ ಯಾವುದೇ ವಸ್ತ್ರ ಧರಿಸಲು ಅವಕಾಶ ನೀಡಬಾರದು ಎಂದು ಸರ್ಕಾರ ತಿಳಿಸಿದೆ. ಅದಕ್ಕೆ ತಾವು ಬದ್ಧವಾಗಿರುವುದಾಗಿ ಸ್ವಷ್ಟಪಡಿಸಿದರು. ಕಾಲೇಜಿನ ಬಳಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತು ಹಾಕಲಾಗಿತ್ತು.
Hijab Controversy ಹಿಜಾಬ್ ಹಾಕದೇ ಬರಲಾಗುವುದಿಲ್ಲ ಅಂದ್ರೆ ಕಾಲೇಜಿಗೆ ಬರಬೇಡಿ ಎಂದ ಬಿಜೆಪಿ ಶಾಸಕ
ಇತರ ಕಾಲೇಜಲ್ಲೂ ಪ್ರತಿಕ್ರಿಯೆ: ಉಡುಪಿ ಮತ್ತುಕುಂದಾಪುರಗಳ ಸರ್ಕಾರಿ ಪೂರ್ವ ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದಕ್ಕೆ ಕುಂದಾಪುರದ ಪ್ರತಿಷ್ಠಿತ ಕಾಲೇಜಿನಲ್ಲಿಯೂ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿನ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜು ಪ್ರವೇಶಕ್ಕೆ ಮುಂದಾದಾಗ, ಪ್ರಾಂಶುಪಾಲರು ಅವರನ್ನು ಪ್ರವೇಶ ದ್ವಾರದಲ್ಲಿ ತಡೆದು ಮನವರಿಕೆ ಮಾಡಿದರು. ನಂತರ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿಯೇ ತರಗತಿಗೆ ಬಂದು, ಗೊಂದಲ ತಿಳಿಯಾಯಿತು. ಇನ್ನು ಉಡುಪಿ ಪಿಯು ಕಾಲೇಜಿನ ವಿದ್ಯಮಾನಕ್ಕೆ ಸಂಬಂಧಿಸಿ ಮಂಗಳವಾರವಷ್ಟೇ ಭದ್ರಾವತಿ ನ್ಯೂಟೌನ್ ಸರ್ ಎಂ.ವಿ.ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಿದ್ದರು. ಕಳೆದ ತಿಂಗಳು ಕೊಪ್ಪದ ಸರ್ಕಾರಿ ಪದವಿ ಕಾಲೇಜಿನಲ್ಲೂ ಇದೇ ರೀತಿಯ ವಿವಾದವಾಗಿತ್ತು.
ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ: ವಿದ್ಯಾರ್ಥಿಗಳು ಕಾಲೇಜಿನಲ್ಲಿ ತಮಗೆ ಬೇಕಾದಂತೆ ವರ್ತಿಸುವುದಕ್ಕೆ ಅವಕಾಶ ಇಲ್ಲ. ವಿದ್ಯಾರ್ಥಿಗಳು ಹಿಜಾಬ್ ಧರಿಸುವ ವಿಷಯದಲ್ಲಿಯೂ ಒಂದೊಂದು ಸರ್ಕಾರಿ ಕಾಲೇಜಿನಲ್ಲಿ ಒಂದೊಂದು ನಿಯಮಗಳನ್ನು ಮಾಡುವುದಕ್ಕೆ ಅವಕಾಶ ಇಲ್ಲ. ಈ ವಿಷಯದಲ್ಲಿ ಸರ್ಕಾರ ಸದ್ಯವೇ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.
ಇತರ ವಿದ್ಯಾರ್ಥಿಗಳಿಂದ ಉಡುಪಿ ಎಡಿಸಿಗೆ ಮನವಿ: ಒಂದೆಡೆ ನಗರದ ಸರ್ಕಾರಿ ಬಾಲಕಿಯರ ಪಪೂ ಕಾಲೇಜಿನ 6 ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದಕ್ಕೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದು ವಿವಾದ ಕಾರಣವಾಗಿದ್ದರೆ, ಅದೇ ಕಾಲೇಜಿನ ಇತರೆ ವಿದ್ಯಾರ್ಥಿಗಳು ಈ ವಿವಾದದಿಂದ ರೋಸಿ ಹೋಗಿ, ತಮ್ಮ ಭವಿಷ್ಯವನ್ನು ಉಳಿಸುವಂತೆ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ. ಪರೀಕ್ಷೆಗಳು ಹತ್ತಿರ ಬರುತ್ತಿರುವುದರಿಂದ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಕೇವಲ 6 ವಿದ್ಯಾರ್ಥಿಗಳ ಕಾರಣಕ್ಕೆ ಇತರ 600 ವಿದ್ಯಾರ್ಥಿಗಳ ಭವಿಷ್ಯ ಹಾಳಾಗ್ತಿದೆ. ವಿವಾದಕ್ಕೆ ಕಾರಣವಾದ ವಿದ್ಯಾರ್ಥಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಂಡು ವಿವಾದವನ್ನು ಬಗೆಹರಿಸಿ ಎಂದು ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.