ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಸಮುದ್ರದಲ್ಲಿ ಅತಿದೊಡ್ಡ ಡ್ರಗ್ಸ್ ಅಕ್ರಮ ಸಾಗಣೆ ಜಾಲವನ್ನು ಭಾರತೀಯ ನೌಕಾಪಡೆ ಮತ್ತು ಮಾದಕದ್ರವ್ಯ ನಿಯಂತ್ರಣ ಆಯೋಗ (ಎನ್‌ಸಿಬಿ) ಜಂಟಿ ಕಾರ್ಯಾಚರಣೆ ಮೂಲಕ ಭೇದಿಸಿವೆ.
ನವದೆಹಲಿ/ಪೋರ್‌ಬಂದರ್: ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಸಮುದ್ರದಲ್ಲಿ ಅತಿದೊಡ್ಡ ಡ್ರಗ್ಸ್ ಅಕ್ರಮ ಸಾಗಣೆ ಜಾಲವನ್ನು ಭಾರತೀಯ ನೌಕಾಪಡೆ ಮತ್ತು ಮಾದಕದ್ರವ್ಯ ನಿಯಂತ್ರಣ ಆಯೋಗ (ಎನ್‌ಸಿಬಿ) ಜಂಟಿ ಕಾರ್ಯಾಚರಣೆ ಮೂಲಕ ಭೇದಿಸಿವೆ. ಅರಬ್ಬಿ ಸಮುದ್ರದಲ್ಲಿ ಬೋಟ್‌ವೊಂದರಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 3,300 ಕೆಜಿ ತೂಕದ ಮಾದಕದ್ರವ್ಯಗಳನ್ನು ವಶಪಡಿಸಿಕೊಂಡಿವೆ ಹಾಗೂ ಹಡಗಿನಲ್ಲಿದ್ದ 5 ವಿದೇಶಿಯರನ್ನು ಬಂಧಿಸಿವೆ.
ಪೋರಬಂದರ್ ತೀರದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ವಶಪಡಿಸಿಕೊಂಡ ಮಾದಕ ದ್ರವ್ಯಗಳ ಅಧಿಕೃತ ಮೌಲ್ಯ ಸುಮಾರು ಅಂದಾಜು 1200 ಕೋಟಿ ರು.ನಿಂದ 2000 ಕೋಟಿ ರು. ಇರಬಹುದು ಎಂದು ಎನ್‌ಸಿಬಿ ಮಹಾನಿರ್ದೇಶಕ ಎಸ್.ಎನ್. ಪಾಂಡ್ಯನ್ ಹೇಳಿದ್ದಾರೆ.
undefined
ಈ ಕಾರ್ಯಾಚರಣೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾರಿತ್ರಿಕ ವಿಜಯ ಎಂದು ಬಣ್ಣಿಸಿದ್ದು, ‘ಪ್ರಧಾನಿ +ನರೇಂದ್ರ ಮೋದಿಯವರ ಕನಸಾಗಿರುವ ಡ್ರಗ್ಸ್‌ಮುಕ್ತ ಭಾರತದ ಕನಸನ್ನು ಮಾಡುವಲ್ಲಿ ನಮ್ಮ ರಕ್ಷಣಾ ಪಡೆಗಳು ಬಹುದೊಡ್ಡ ಹೆಜ್ಜೆ ಇಟ್ಟಿವೆ’ ಎಂದು ಟ್ವೀಟ್ ಮಾಡಿದ್ದಾರೆ.
ಕಾರ್ಯಾಚರಣೆ ನಡೆದಿದ್ದು ಹೇಗೆ?
ವಿದೇಶದಿಂದ ಭಾರತಕ್ಕೆ ಅರಬ್ಬಿ ಸಮುದ್ರದ ಮೂಲಕ ದೊಡ್ಡ ಮಾಸ್ಟ್ ಹೊಂದಿರುವ ಬೋಟ್‌ವೊಂದರಲ್ಲಿ ಬೃಹತ್ ಪ್ರಮಾಣದ ಮಾದಕದ್ರವ್ಯಗಳನ್ನು ಅಕ್ರಮವಾಗಿ ತರಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿತ್ತು. ಹಡಗು ಅರಬ್ಬಿ ಸಮುದ್ರದಲ್ಲಿ ಅಂತಾರಾಷ್ಟ್ರೀಯ ಸಮುದ್ರ ಗಡಿರೇಖೆ (ಐಎಂಬಿಎಲ್) ಪ್ರವೇಶಿಸುತ್ತಿದ್ದಂತೆ ನೌಕಾಪಡೆಗಳ ಮೂಲಕ ತನ್ನ ವಾಯುನೌಕೆಯ ಮೂಲಕ ಬಂದರಿಗೆ ಮಾಹಿತಿ ರವಾನಿಸಿತ್ತು.
ಆಗ ಭಾರತದ ತೀರದಿಂದ 60 ನಾಟಿಕಲ್ ಮೈಲಿ ದೂರದಲ್ಲೇ ಬೋಟ್ ಅನ್ನು ಸುತ್ತುವರಿಯಲಾಯಿತು. ಹಾಗು ಡ್ರಗ್ಸ್ ವಶಪಡಿಸಿಕೊಂಡು ಬೋಟ್‌ನಲ್ಲಿದ್ದ ವಸ್ತುಗಳು ಮತ್ತು 5 ವಿದೇಶಿಯರನ್ನು ವಶಪಡಿಸಿಕೊಳ್ಳಲಾಯಿತು.
ಇರಾನ್‌ನ ಚಬಾಹರ್ ಬಂದರಿನಲ್ಲಿ ಈ ಡ್ರಗ್ಸ್ ಅನ್ನು ದೋಣಿಯಲ್ಲಿ ಲೋಡ್ ಮಾಡಲಾಗಿತ್ತು. ಬಂಧಿತ 5 ವಿದೇಶಿಯರು ಪಾಕಿಸ್ತಾನ ಅಥವಾ ಇರಾನ್ ಮೂಲದವರು ಎಂದು ಮೂಲಗಳು ಹೇಳಿವೆ.
ಏನೇನು ವಶ?
ಬೋಟ್‌ನಲ್ಲಿದ್ದ ಬರೋಬ್ಬರಿ 3,300 ಕೆಜಿ ತೂಕದ ವಿವಿಧ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಮುಖವಾಗಿ 3089 ಕೆಜಿ ಚರಸ್ (ಹಶೀಶ್), 158 ಕೆಜಿ ಮೆಥಾಂಫೆಟಾಮೈನ್, 25 ಕೆಜಿ ಮಾರ್ಫೈನ್ ಇವೆ.
ಈ ಹಿಂದಿನ ದಾಖಲೆ 2500 ಕೇಜಿ:
ಈ ಹಿಂದೆ ಸಮುದ್ರದಲ್ಲಿ ನಡೆದಿದ್ದ ಅತಿದೊಡ್ಡ ಕಾರ್ಯಾಚರಣೆ ವೇಳೆ 2500 ಕೇಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. 2023ರ ಮೇ ತಿಂಗಳಲ್ಲಿ ಕೇರಳ ತೀರದಲ್ಲಿ ಜಪ್ತಿ ನಡೆದಿತ್ತು.