ಹಿರೇನ್‌ ಕೇಸ್‌ ಭೇದಿಸಿದ ಎಟಿಎಸ್‌: ವಾಝೆ ಪ್ರಮುಖ ಆರೋಪಿ!

By Kannadaprabha NewsFirst Published Mar 22, 2021, 7:42 AM IST
Highlights

 ಉದ್ಯಮಿ ಮುಕೇಶ್‌ ಅಂಬಾನಿ ಮನೆ ಮುಂದೆ ಸ್ಫೋಟಕ ಇಡಲಾಗಿದ್ದ ಕಾರಿನ ಮಾಲೀಕ ಮನ್‌ಸುಖ್‌ ಹಿರೇನ್‌ ನಿಗೂಢ ಸಾವು| ಹಿರೇನ್‌ ಕೇಸ್‌ ಭೇದಿಸಿದ ಎಟಿಎಸ್‌: ವಾಝೆ ಪ್ರಮುಖ ಆರೋಪಿ, ತನಿಖೆ| ಪೊಲೀಸ್‌, ಬುಕ್ಕಿ ಬಂಧನ

ಮುಂಬೈ(ಮಾ.22): ಉದ್ಯಮಿ ಮುಕೇಶ್‌ ಅಂಬಾನಿ ಮನೆ ಮುಂದೆ ಸ್ಫೋಟಕ ಇಡಲಾಗಿದ್ದ ಕಾರಿನ ಮಾಲೀಕ ಮನ್‌ಸುಖ್‌ ಹಿರೇನ್‌ ನಿಗೂಢ ಸಾವಿನ ಪ್ರಕರಣ ಭೇದಿಸಿರುವುದಾಗಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಭಾನುವಾರ ಮಾಹಿತಿ ನೀಡಿದ್ದಾರೆ.

ಪ್ರಕರಣದಲ್ಲಿ ಎಟಿಎಸ್‌ನ ಮಾಜಿ ಪೊಲೀಸ್‌ ಅಧಿಕಾರಿ ಸಚಿನ್‌ ವಾಝೆ ಪ್ರಮುಖ ಆರೋಪಿ ಎಂದು ಸಾಬೀತಾಗಿದ್ದು, ಇದೇ ಪ್ರಕರಣ ಸಂಬಂಧ, ಅಮಾನತ್ತಿಲ್ಲಿರುವ ಮತ್ತೋರ್ವ ಪೊಲೀಸ್‌ ಕಾನ್ಸ್‌ಟೇಬಲ್‌ ವಿನಾಯಕ್‌ ಶಿಂಧೆ ಮತ್ತು ಬುಕ್ಕಿ ನರೇಶ್‌ ಗೌರ್‌ ಎಂಬುವವರನ್ನು ಬಂಧಿಸಲಾಗಿದೆ. ಪ್ರಕರಣದ ಹಿಂದಿರುವ ಇನ್ನಿತರೆ ವ್ಯಕ್ತಿ ಮತ್ತು ಹತ್ಯೆಯ ಮುಖ್ಯ ಉದ್ದೇಶ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಮಾಹಿತಿ ನೀಡಿದ್ದಾರೆ.

ನಕಲಿ ಎನ್‌ಕೌಂಟರ್‌ ಕೇಸಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಿಂಧೆ ಇತ್ತೀಚೆಗೆ ಪರೋಲ್‌ ಮೇಲೆ ಹೊರಬಂದಿದ್ದ. ಬಳಿಕ ಆತ ವಾಝೆ ಜೊತೆ ನಿಕಟ ಸಂಪರ್ಕದಲ್ಲಿದ್ದ. ಕೆಲ ದಿನಗಳ ಹಿಂದಷ್ಟೇ ಶಿಂಧೆ, ಹಿರೇನ್‌ ಹತ್ಯೆ ಸಂಚಿಗೆ ನೆರವಾಗಲು ವಾಝೆ ಮತ್ತು ಗೌರ್‌ಗೆ 5 ಸಿಮ್‌ಕಾರ್ಡ್‌ ಒದಗಿಸಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಈ ಮೊದಲು ಕೂಡಾ ವಾಝೆಯ ಅಕ್ರಮ ಚಟುವಟಿಕೆಗಳಿಗೆ ಶಿಂಧೆ ನೆರವಾಗುತ್ತಿದ್ದುದ್ದು ಕಂಡುಬಂದಿದೆ ಎಂದು ಎಟಿಎಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ನಿಗೂಢ ಸಾವಿಗೂ ಹಿಂದಿನ ದಿನ ಹಿರೇನ್‌, ವಾಝೆ ಜೊತೆ ಇದ್ದಿದ್ದು ದಾಖಲೆಗಳಿಂದ ಕಂಡುಬಂದಿತ್ತು. ಇನ್ನು ಹಿರೇನ್‌ರ ಪತ್ನಿ ಕೂಡಾ ಪತಿ ಸಾವಿಗೆ ವಾಝೆ ಕಾರಣ ಎಂದು ನೇರ ಆರೋಪ ಮಾಡಿದ್ದರು.

click me!