ಮಣಿಪುರದಲ್ಲಿ ಇಬ್ಬರು ಮಹಿಳೆಯರ ನಗ್ನ ಪರೇಡ್ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇಂಫಾಲ: ಮಣಿಪುರದಲ್ಲಿ ಇಬ್ಬರು ಮಹಿಳೆಯರ ನಗ್ನ ಪರೇಡ್ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 6ಕ್ಕೆ ಏರಿದೆ. ಇಬ್ಬರು ಮಹಿಳೆಯರನ್ನು ನಗ್ನ ಮೆರವಣಿಗೆ ನಡೆಸಿ, ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ನಡೆದ ದಿನವೇ ಮತ್ತಿಬ್ಬರು ಯುವತಿಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಣಿಪುರದಲ್ಲಿ ಮಹಿಳೆಯರಿಬ್ಬರ ನಗ್ನ ಪರೇಡ್ ಮಾಡಿ ಅವರನ್ನು ಅತ್ಯಾಚಾರಗೈದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಆದರೆ ಈ ಘಟನೆ ನಡೆದ ಸ್ಥಳವು ದೇಶದ ನಂ.1 ಪೊಲೀಸ್ ಠಾಣೆ ಎಂದು 2020ರಲ್ಲಿ ಕೇಂದ್ರ ಸರ್ಕಾರದಿಂದ ಗೌರವಕ್ಕೆ ಪಾತ್ರವಾಗಿದ್ದ ‘ನೊಂಗ್ಪೊಕ್ ಸೆಕ್ಮೆ’ ಪೊಲೀಸ್ ಠಾಣೆಯಿಂದ ಕೇವಲ 1 ಕಿ.ಮೀ. ದೂರದಲ್ಲಿದೆ. ಅಲ್ಲದೆ, ಘಟನೆ ತರುವಾಯ ಮೊನ್ನೆಯವರೆಗೂ ಏನೂ ಕ್ರಮ ಕೈಗೊಳ್ಳದೇ ಠಾಣೆ ಸುಮ್ಮನಿತ್ತು ಎಂಬ ಆಘಾತಕಾರಿ ವಿಚಾರ ಈಗ ಬೆಳಕಿಗೆ ಬಂದಿದೆ ಎಂದು ಕೆಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಬೆತ್ತಲೆ ಮೆರವಣಿಗೆ ದಿನ ನಡೆದಿತ್ತು ಮತ್ತೊಂದು ಘಟನೆ, ಇಬ್ಬರು ಯುವತಿಯರ ಮೇಲೆ 100 ಮಂದಿ ಗ್ಯಾಂಗ್ ರೇಪ್!
ಸ್ಥಳೀಯರೊಂದಿಗೆ ಸಮನ್ವಯತೆ, ಅಪರಾಧ ಪ್ರಮಾಣ ನಿಯಂತ್ರಣ, ಪ್ರಕರಣಗಳ ತ್ವರಿತ ವಿಲೇವಾರಿ ಮತ್ತು ಪೊಲೀಸ್ ಠಾಣೆಯ ಸ್ವಚ್ಛತೆ ಮುಂತಾದ ಮಾದರಿ ಕಾರ್ಯಗಳನ್ನು ಗಮನದಲ್ಲಿ ಇರಿಸಿಕೊಂಡು ಕೇಂದ್ರ ಗೃಹ ಸಚಿವಾಲಯ ಪ್ರತಿ ವರ್ಷ ದೇಶದ ಹಲವು ಠಾಣೆಗಳನ್ನು ಗುರುತಿಸಿ ವಾರ್ಷಿಕ ಪ್ರಶಸ್ತಿ ನೀಡುತ್ತದೆ.
ಆದರೆ, ಮೇ 4ರಂದು ಈ ಠಾಣೆಯಿಂದ ಸುಮಾರು 4 ಕಿ.ಮೀ. ದೂರದಲ್ಲಿರುವ ಬಿ-ಫೈನೋಂ ಎಂಬ ಹಳ್ಳಿಯಲ್ಲಿ ನೂರಾರು ದುಷ್ಕರ್ಮಿಗಳ ಗುಂಪು, ಅನೇಕರನ್ನು ಹತ್ಯೆ ಮಾಡಿ, ಮನೆ ಲೂಟಿ ಮಾಡಿ ಹಲವು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿತು. ಸಾಲದ್ದಕ್ಕೆ ಇಬ್ಬರು ಮಹಿಳೆಯರನ್ನು ಅಲ್ಲಿಂದ ಬೆತ್ತಲೆ ಮೆರವಣಿಗೆ ಮಾಡಲು ಆರಂಭಿಸಿತು. ಹೀಗೆಯೇ ಮೆರವಣಿಗೆ ಮಾಡುತ್ತ ಪೊಲೀಸ್ ಠಾಣೆಯಿಂದ 850 ಮೀ. ದೂರದ ಪ್ರದೇಶಕ್ಕೆ ಆಗಮಿಸಿತು. ಅಲ್ಲಿ ಈ ಇಬ್ಬರೂ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಕ್ರೌರ‍್ಯ ಮೆರೆಯಿತು ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ, ಘಟನಾ ಸ್ಥಳ ಹಾಗೂ ಠಾಣೆಯ ನಡುವಿನ ಅಂತರ ತೀರಾ ಸಮೀಪವಿತ್ತು ಎಂದು ಸಾಬೀತುಪಡಿಸುವ ಉಪಗ್ರಹ ಚಿತ್ರಗಳನ್ನು ಹಾಗೂ ಹಲವು ಭೌಗೋಳಿಕ ಮಾಹಿತಿಯುಳ್ಳ ಚಿತ್ರಗಳನ್ನು ಮಾಧ್ಯಮವೊಂದು ತನ್ನ ತನಿಖಾ ವರದಿಯಲ್ಲಿ ಪ್ರಕಟಿಸಿದೆ.
ಅಂದಿನ ಘಟನೆ ಬಗ್ಗೆ ಮೇ 18ರಂದು ಸೈಕುಲ್ ಎಂಬ ಊರಿನ ಅನ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಘಟನೆಯ ವ್ಯಾಪ್ತಿ ಗಮನಿಸಿ ಜೂ.21ರಂದು ‘ದೇಶ ನಂ.1 ಪೊಲೀಸ್ ಠಾಣೆ’ ಎನ್ನಿಸಿಕೊಂಡ ಹಾಗೂ ಘಟನಾ ಸ್ಥಳದಿಂದ ಕೇವಲ 1 ಕಿ.ಮೀ. (ನಿಖರವಾಗಿ 850 ಮೀ.) ದೂರದಲ್ಲಿದ್ದ ಸೆಕ್ಮೆ ಠಾಣೆಗೆ ಪ್ರಕರಣ ವರ್ಗಾವಣೆ ಆಗಿತ್ತು. ಇಷ್ಟಾದರೂ ಸೆಕ್ಮೆ ಠಾಣೆ ಪೊಲೀಸರು ಏನೂ ಮಾಡದೇ ಸುಮ್ಮನೇ ಕೂತಿದ್ದರು ಎಂದು ಮಾಧ್ಯಮ ವರದಿ ಹೇಳಿದೆ.
ಮಣಿಪುರ ಹೊತ್ತಿ ಉರಿಯುತ್ತಿರೋದ್ಯಾಕೆ?
ರಾಜ್ಯ ಬಿಡಲು ಮಿಜೋ ಉಗ್ರರಿಂದ ಬೆದರಿಕೆ: ಮೈತೇಯಿಗಳಿಗೆ ಭದ್ರತೆ
ಐಜ್ವಾಲ್: ಕುಕಿ ಸಮುದಾಯದ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಜೋರಂನಲ್ಲಿರುವ ಮೈತೇಯಿ ಸಮುದಾಯ ಕೂಡಲೇ ರಾಜ್ಯ ತೊರೆಯಬೇಕು ಎಂದು ಉಗ್ರ ಸಂಘಟನೆಗಳು ಬೆದರಿಕೆ ಒಡ್ಡಿವೆ. ಇದರ ಬೆನ್ನಲ್ಲೇ ಐಜ್ವಾಲ್‌ನಲ್ಲಿ ಮೈತೇಯಿ ಸಮುದಾಯಕ್ಕೆ ಭಾರಿ ಭದ್ರತೆ ಒದಗಿಸಲಾಗಿದೆ. ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದ್ದ ಉಗ್ರ ಸಂಘಟನೆ ಪಾಮ್ರಾ (Pamra), ತಮ್ಮದೇ ಹಿತಕ್ಕಾಗಿ ಮೈತೇಯಿಗಳು ಮಿಜೋರಂ ತೊರೆಯಬೇಕು. ಮಹಿಳೆಯರನ್ನು ನಗ್ನ ಮೆರವಣಿಗೆ ಮಾಡಿದ ಘಟನೆ ಮಿಜೋ ಜನರ ಭಾವನೆಗಳಿಗೆ ಧಕ್ಕೆ ತಂದಿದೆ. ಹೀಗಾಗಿ ಮೈತೇಯಿ ಜನರ ಮೇಲೆ ದಾಳಿಯಾಗುವ ಮೊದಲೇ ಅವರು ರಾಜ್ಯ ತೊರೆಯಬೇಕು. ಇಲ್ಲದಿದ್ದರೆ ಉಂಟಾಗುವ ಹಾನಿಗೆ ಅವರೇ ಜವಾಬ್ದಾರರಾಗಿರುತ್ತಾರೆ ಎಂದು ಹೇಳಿತ್ತು.
ಇದರ ಬೆನ್ನಲ್ಲೇ ಮೈತೇಯಿ ಸಮುದಾಯದವರ ರಕ್ಷಣೆಗೆ ಕ್ರಮ ಕೈಗೊಂಡಿರುವ ಮಿಜೋರಾಂ ಸರ್ಕಾರ, ಯಾರಿಗೂ ಹಾನಿಯಾಗದಂತೆ ಭದ್ರತೆ ನೀಡಲಾಗುವುದು ಎಂದು ಭರವಸೆ ನೀಡಿದೆ. ಈ ವಿಚಾರವಾಗಿ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ (Biren Singh) ಹಾಗೂ ಮಿಜೋರಾಂ (Mizoram CM) ಮುಖ್ಯಮಂತ್ರಿ ಜೋರಮ್‌ತಂಗಾ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
ಮಣಿಪುರ: ಪ್ರಧಾನಿ ಹೇಳಿಕೆಗೆ ಆಗ್ರಹಿಸಿ ನಾಳೆ ವಿಪಕ್ಷ ಪ್ರತಿಭಟನೆ
ಮಣಿಪುರ ಜನಾಂಗೀಯ ಗಲಭೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಸಂಸತ್ತಿನಲ್ಲಿ ಮಾತನಾಡಬೇಕು ಎಂದು ಆಗ್ರಹಿಸಿ ವಿಪಕ್ಷ ಸಂಸದರು ಸೋಮವಾರ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಬೆಳಗ್ಗೆ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸಭೆ ನಡೆಸಿ ಕಲಾಪದ ತಂತ್ರಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಬಳಿಕ ಬೆಳಗ್ಗೆ 10 ಗಂಟೆಗೆ ಸಂಸತ್ ಮುಂದಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ವಿಪಕ್ಷಗಳು ಹೇಳಿವೆ. ಜೊತೆಗೆ ಮಣಿಪುರ ವಿಷಯದ ಬಗ್ಗೆ ಎಲ್ಲ ಸಂಸದರಿಗೂ ಸಮಯ ನಿರ್ಬಂಧ ಇಲ್ಲದೆ ಮಾತನಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿವೆ