ಬೆತ್ತಲೆ ಮೆರವಣಿಗೆ ದಿನ ನಡೆದಿತ್ತು ಮತ್ತೊಂದು ಘಟನೆ, ಇಬ್ಬರು ಯುವತಿಯರ ಮೇಲೆ 100 ಮಂದಿ ಗ್ಯಾಂಗ್ ರೇಪ್!
ಮಣಿಪುರದ ಕರಾಳ ಘಟನೆಗಳು ಒಂದೊಂದೆ ಹೊರಬರುತ್ತಿದೆ. ಇಬ್ಬರು ಮಹಿಳೆಯರ ಬೆತ್ತಲೆ ಮೆರಣಿಗೆ ಘಟನೆ ದಿನವೇ ಮತ್ತೊಂದು ಭಯಾನಕ ಘಟನೆ ನಡೆದಿದೆ. 100ಕ್ಕೂ ಹೆಚ್ಚು ಉದ್ರಿಕ್ತರ ಗುಂಪು ಇಬ್ಬರು ಯುವತಿಯರ ಮೇಲೆ ಗ್ಯಾಂಗ್ ರೇಪ್ ಮಾಡಿ ಹತ್ಯೆಗೈದ ಭಯಾನಕ ಘಟನೆ ಬಹಿರಂಗವಾಗಿದೆ. ಇದಕ್ಕೆ ಉದ್ರಿಕ್ತ ಗುಂಪಿನಲ್ಲಿದ್ದ ಮಹಿಳೆಯರು ಸಾಥ್ ನೀಡಿದ್ದಾರೆ ಅನ್ನೋದು ಮತ್ತೊಂದು ದುರಂತ.
ಇಂಫಾಲ್(ಜು.22) ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ನಗ್ನ ಮೆರೆವಣಿಗೆ ಮಾಡಿ ಕಿರುಕುಳ ನೀಡಿದ ಘಟನೆಯಲ್ಲಿ ಭಾರತವೇ ಬೆತ್ತಲಾಗಿದೆ. ಕ್ರೂರ ಘಟನೆಗೆ ದೇಶಾದ್ಯಂತ ಆಕ್ರೋಶ, ಪ್ರತಿಭಟನೆಗಳು ವ್ಯಕ್ತವಾಗಿದೆ. ಮೇ.4 ರಂದು ನಡೆದ ಈ ಘಟನೆಯ ವಿಡಿಯೋ ಇತ್ತೀಚೆಗೆ ಹರಿದಾಡುವ ಮೂಲಕ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇದೇ ದಿನ ಬೆತ್ತಲೇ ಮೆರವಣಿಗೆ ಘಟನೆ ನಡೆದ 40 ಕಿಲೋಮೀಟರ್ ದೂರದಲ್ಲಿ ಮತ್ತೊಂದು ಭಯಾನಕ ಘಟನೆ ನಡೆದಿದೆ. ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಇಬ್ಬರು ಯುವತಿಯ ಮೇಲೆ 100ಕ್ಕೂ ಹೆಚ್ಚು ಮಂದಿಯ ಉದ್ರಿಕ್ತರ ಗುಂಪು ದಾಳಿ ಮಾಡಿ ಅತ್ಯಾಚಾರ ಎಸಗಿತ್ತು. ಬಳಿಕ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಇದೀಗ ಬೆಳಕಿಗೆ ಬಂದಿದೆ.
ಕುನಂಗ್ ಮಾಮಂಗ್ ಏರಿಯಾದಲ್ಲಿ 21 ವರ್ಷ ಹಾಗೂ 24 ವರ್ಷದ ಇಬ್ಬರು ಯುವತಿಯರು ಕಾರ್ ಸರ್ವೀಸ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಕಾರು ವಾಶಿಂಗ್ ಕೆಲಸದಲ್ಲಿದ್ದ ಈ ಇಬ್ಬರು ಎಂದಿನಂತೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಏಕಾಏಕಿ ಕಾರು ವಾಶಿಂಗ್ ಕೇಂದ್ರಕ್ಕೆ ನುಗ್ಗಿದ್ದ 100ಕ್ಕೂ ಹೆಚ್ಚು ಜನರಿದ್ದ ಉದ್ರಿಕ್ತರ ಗುಂಪು ಇಬ್ಬರು ಯುವತಿಯರ ಮೇಲೆ ದಾಳಿಗೆ ಮುಂದಾಗಿದೆ. ಈ ಗುಂಪಿನಲ್ಲಿದ್ದ ಮಹಿಳೆಯರು ನೇರವಾಗಿ ಕಾರು ವಾಶಿಂಗ್ ಕೇಂದ್ರದೊಳಗೆ ಯುವತಿಯರನ್ನು ಎಳೆದೊಯ್ದಿದ್ದಾರೆ. ಬಳಿಕ ಉದ್ರಿಕ್ತ ಗುಂಪಿನಲ್ಲಿದ್ದ ಪುರುಷರು ಗ್ಯಾಂಗ್ ರೇಪ್ ಮಾಡಿದ್ದಾರೆ.
ಕಾರ್ಗಿಲ್‌ನಲ್ಲಿ ದೇಶ ಕಾಪಾಡಿದ ನನ್ಗೆ, ಪತ್ನಿ ಕಾಪಾಡಲಾಗಲಿಲ್ಲ,ನಗ್ನ ಮೆರವಣಿಗೆ ಸಂತ್ರಸ್ತೆ ಪತಿ ಕಣ್ಣೀರು!
ಕಾರು ವಾಶಿಂಗ್ ಕೇಂದ್ರದಲ್ಲಿದ್ದ ಪುರುಷ ಸಿಬ್ಬಂದಿಗಳ ಮೇಲೂ ಥಳಿಸಿದ್ದಾರೆ. ಅತ್ತ ಕೋಣೆಯೊಳಗೆ ಯುವತಿಯರ ಚೀರಾಟ ಕೀಳಿಸುತ್ತಿತ್ತು. ಆದರೆ ನಾವು ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಈ ಕುರಿತು ದೂರು ದಾಖಲಿಸುವ ಧೈರ್ಯವೂ ನಮಗಿಲ್ಲ. ದಾಖಲಿಸಿದರೆ ನಾಳೆ ನಾವು ಹಾಗೂ ನಮ್ಮ ಕುಟುಂಬ ಪರಿಸ್ಥಿತಿ ಇದಕ್ಕಿಂತ ಭಿನ್ನವಲ್ಲ ಎಂದು ಕಾರು ವಾಶಿಂಗ್ ಕೇಂದ್ರದ ಸಿಬ್ಬಂದಿಗಳು ಹೇಳಿದ್ದಾರೆ.
ಕ್ರೂರವಾಗಿ ಇಬ್ಬರು ಯುವತಿಯ ಮೇಲೆ ಗ್ಯಾಂಗ್ ರೇಪ್ ಮಾಡಿದ ಉದ್ರಿಕ್ತರ ಗುಂಪು ಬಳಿಕ ಯುವತಿಯರ ದೇಹವನ್ನು ಸರ್ವೀಸ್ ಕೇಂದ್ರದ ಪಕ್ಕದಲ್ಲೆ ಬೀಸಾಡಿ ಹೋಗಿದ್ದರು. ಮೇ.4 ರಂದು ಈ ಘಟನೆ ನಡೆದಿತ್ತು. ಯಾರೊಬ್ಬರು ದೂರು ನೀಡಲಿಲ್ಲ. ಯುವತಿ ತಾಯಿ ಧೈರ್ಯ ಮಾಡಿ ಮೇ. 16 ರಂದು ದೂರು ನೀಡಿದ್ದಾರೆ. ದೂರಿನಲ್ಲಿ ತನ್ನ ಪುತ್ರಿ ಹಾಗೂ ಇನ್ನೊಬ್ಬಳು ಯುವತಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿದೆ. 100ಕ್ಕೂ ಹೆಚ್ಚು ಉದ್ರಿಕ್ತರ ಗುಂಪು ಹತ್ಯೆ ಮಾಡಿದೆ. ಪುತ್ರಿಯ ದೇಹವನ್ನು ಛಿದ್ರ ಮಾಡಲಾಗಿದೆ. ತಪ್ಪತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದರು.
ಆದರೆ ಮೇ.16 ರಂದು ದೂರು ದಾಖಲಾಗಿದ್ದರೂ ಇದುವರೆಗೆ ಈ ಪ್ರಕರಣ ಸಂಬಂಧ ಒಬ್ಬರೂ ಅರೆಸ್ಟ್ ಆಗಿಲ್ಲ. ಇದೇ ಪೊಲೀಸ್ ಠಾಣೆಯಲ್ಲೇ ಮಹಿಳೆಯರಿಬ್ಬರ ಬೆತ್ತಲೆ ಮೆರವಣಿಗೆ ಪ್ರಕರಣ ಕೂಡ ದಾಖಲಾಗಿದೆ.
ಹಿಂಸಾಚಾರದಲ್ಲಿ ಬೆಂದಿರುವ ಮಣಿಪುರ ಜನತೆಗೆ ಮತ್ತೊಂದು ಆಘಾತ, ಹಲೆವೆಡೆ ಭೂಕಂಪನ!
ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಘಟನೆ ಕುರಿತು ರಾಜ್ಯದ ಅಧಿಕಾರಿಗಳನ್ನು ಕಳೆದ ಮೂರು ತಿಂಗಳಲ್ಲಿ ಮೂರು ಬಾರಿ ಪತ್ರ ಬರೆದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ, ಮನೆಗಳಿಗೆ ಬೆಂಕಿ ಸೇರಿದಂತೆ ವಿವಿಧ ದೌರ್ಜನ್ಯಗಳ ವಿರುದ್ಧ ಮೇ 18, ಮೇ 29 ಮತ್ತು ಜೂ.19 ರಂದು ಆಯೋಗ ಪತ್ರ ಬರೆದಿತ್ತು.