ದೀದೀಗೆ ಮುಳುವಾಗುತ್ತಾ ಅಸ್ಸಾಂನಲ್ಲಿ ದಾಖಲಾದ ಈ 5 ಕ್ರಿಮಿನಲ್‌ ಕೇಸ್‌?

By Suvarna NewsFirst Published Sep 14, 2021, 5:09 PM IST
Highlights

* ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ

* ಚುನಾವಣೆಗೂ ಮುನ್ನ ಡೀದಿ ಎಡವಟ್ಟು, ಮುಳುವಾಗುತ್ತಾ ಆ ಒಂದು ತಪ್ಪು

* ಮಮತಾ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಟ್ಟ ಬಿಜೆಪಿ

ಕೋಲ್ಕತ್ತಾ(ಸೆ.14): ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರ (ಭಬನಿಪುರ ಉಪಚುನಾವಣೆ) ಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಸವಾಲು ಹಾಕಿರುವ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ತಿಬ್ರೇವಾಲ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಮಮತಾ ಬ್ಯಾನರ್ಜಿ ತನ್ನ ಅಫಿಡವಿಟ್‌ನಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಮರೆಮಾಚಿದ್ದಾರೆ ಎಂದು ಈ ದೂರಿನಲ್ಲಿ ತಿಳಿಸಲಾಗಿದೆ. ಅಸ್ಸಾಂನಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ 5 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂಬುವುದು ಉಲ್ಲೇಖನೀಯ. ಸೆಪ್ಟೆಂಬರ್ 30 ರಂದು ಭವಾನಿಪುರದಲ್ಲಿ ಉಪಚುನಾವಣೆ ನಡೆಯಲಿದ್ದು, ಸೋಮವಾರ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ಮಮತಾ ಬ್ಯಾನರ್ಜಿ ನಾಮಪತ್ರ ಸಲ್ಲಿಸಿದ್ದರು.

ಚುನಾವಣಾ ಆಯೋಗಕ್ಕೆ ಪತ್ರ ಬರೆದ ಪ್ರಿಯಾಂಕಾ 

ಪ್ರಿಯಾಂಕಾ ತಿಬ್ರೇವಾಲ್  ಅವರ ಮುಖ್ಯ ಚುನಾವಣಾ ಏಜೆಂಟ್ ಸಜಲ್ ಘೋಷ್ ಈ ಕುರಿತು ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದು ದೂರು ಸಲ್ಲಿಸಿದ್ದಾರೆ. ಇದರಲ್ಲಿ ಮಮತಾ ಬ್ಯಾನರ್ಜಿಯವರ ನಾಮನಿರ್ದೇಶನವನ್ನು ಮತ್ತೆ ಪರಿಶೀಲಿಸಬೇಕು ಎಂದು ಒತ್ತಾಯಿಸಲಾಗಿದೆ. ಮಮತಾ ವಿರುದ್ಧದ ಈ ಎಲ್ಲಾ ಪ್ರಕರಣಗಳು 2018 ರಲ್ಲಿ ಅಸ್ಸಾಂನಲ್ಲಿ ದಾಖಲಾಗಿದ್ದು, ಪತ್ರದಲ್ಲಿ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. ಸುಪ್ರೀಂ ಕೋರ್ಟ್, ಮಾರ್ಚ್ 2018 ರಲ್ಲಿ ಮಹತ್ವದ ತೀರ್ಪೊಂದನ್ನು ಪ್ರಕಟಿಸಿದ್ದು, ಆಸ್ತಿ ಅಥವಾ ಕ್ರಿಮಿನಲ್ ಹಿನ್ನೆಲೆಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸದಿರುವ ಕಾರಣಕ್ಕಾಗಿ  ಅಭ್ಯರ್ಥಿಯ ನಾಮಪತ್ರಗಳನ್ನು ರಿಟರ್ನಿಂಗ್ ಅಧಿಕಾರಿ ತಿರಸ್ಕರಿಸಬಹುದು ಎಂದು ಹೇಳಿತ್ತು.

ಸೆಪ್ಟೆಂಬರ್ 10 ರಂದು ನಾಮಪತ್ರ ಸಲ್ಲಿಸಿದ್ದ ಮಮತಾ 

ಮಮತಾ ಬ್ಯಾನರ್ಜಿ ಸೆಪ್ಟೆಂಬರ್ 10 ರಂದು ನಾಮಪತ್ರ ಸಲ್ಲಿಸಿದ್ದರು. ಅತ್ತ ಕಾಂಗ್ರೆಸ್ ಈ ಸ್ಥಾನದಿಂದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದೆ, ದೀದೀಗೆ ಪರೋಕ್ಷ ಬೆಂಬಲ ಸೂಚಿಸಿದೆ. ಅಕ್ಟೋಬರ್ 3 ರಂದು ಫಲಿತಾಂಶ ಬರಲಿದ್ದು, ಈ ಸ್ಥಾನದ ಹೊರತಾಗಿ, ಸಂಸರ್‌ಗಂಜ್, ಬಂಗಾಳದ ಜಂಗೀಪುರ ಮತ್ತು ಒಡಿಶಾದ ಪಿಪ್ಲಿ ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದೆ.

ನವೆಂಬರ್ ವೇಳೆಗೆ ವಿಧಾನಸಭೆಯ ಸದಸ್ಯತ್ವ ಗಳಿಸಬೇಕು

ಮಮತಾ ಮುಖ್ಯಮಂತ್ರಿಯಾಗಿ ಮುಂದುವರಿಯಲು ಈ ಉಪಚುನಾವಣೆಯಲ್ಲಿ ಗೆಲ್ಲಲೇಬೇಕು. ಅಲ್ಲದೇ ನವೆಂಬರ್ 5 ರೊಳಗೆ ರಾಜ್ಯ ವಿಧಾನಸಭೆಯ ಸದಸ್ಯತ್ವವನ್ನು ಪಡೆಯಬೇಕು. ಭವಾನಿಪುರದ ಹೊರತಾಗಿ, ಸೆಪ್ಟೆಂಬರ್ 30 ರಂದು ಶಂಶೇರ್ಗಂಜ್ ಮತ್ತು ಜಂಗೀಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಅಮಿರುಲ್ ಇಸ್ಲಾಂ ಅವರನ್ನು ಶಂಶೇರ್ಗಂಜ್ ಮತ್ತು ಜಾಕಿರ್ ಹುಸೇನ್ ಅವರನ್ನು ಜಂಗೀಪುರ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಗಳನ್ನಾಗಿ ಮಾಡಲಾಗಿದೆ.

click me!