
ನವದೆಹಲಿ (ನ.06) ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟದಲ್ಲಿ ತಳಮಳ ಶುರುವಾಗಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಸೇರಿದಂತೆ ಮಿತ್ರ ಪಕ್ಷಗಳು ತಯಾರಿ ನಡೆಸುತ್ತಿದೆ. ಇದರ ನಡುವೆ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ಪಕ್ಷದ ನಡೆ ಇದೀಗ ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಯಲ್ಲೇ ಆತಂಕ ಸೃಷ್ಟಿಸಿದೆ. ಮೋದಿ ಸರ್ಕಾರದಲ್ಲಿ ಸಚಿವನಾಗಿರುವ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 403 ಸ್ಥಾನಗಳಲ್ಲಿ ತಮ್ಮ ಪಕ್ಷ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳುತ್ತಿರುವುದಾಗಿ ಘೋಷಿಸಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಹ್ಯಾಟ್ರಿಕ್ ಗೆಲುವಿಗಾಗಿ ಬಿಜೆಪಿ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಇತ್ತೀಚೆಗೆ ನಡೆದ ಸ್ಥಳೀಯ ಚುನಾವಣೆಗಳಲ್ಲಿ ಮೋದಿಯ ವಾರಣಸಿ ಸೇರಿದಂತೆ ಕೆಲ ಪ್ರಮುಖ ಕ್ಷೇತ್ರದಲ್ಲಿ ಸಮಾಜವಾದಿ ಪಾರ್ಟಿ ಗೆಲುವು ಕಂಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ಪಾರ್ಟಿ ಯುಪಿ ವಿಧಾನಸಭೆಯ ಎಲ್ಲಾ 403 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಮೋದಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿರುವ ಚಿರಾಗ್ ಪಾಸ್ವಾನ್ ಇದೀಗ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ತಲೆನೋವಾಗಿ ಪರಿಣಿಸಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಎಲ್‌ಜೆಪಿ ಪಾರ್ಟಿ ಎನ್‌ಡಿಎ ಜೊತೆ ಸೀಟು ಹಂಚಿಕೆ ಕುರಿತು ಚರ್ಚಿಸಲಿದೆ. ಬಿಜೆಪಿ ತಮ್ಮ ಪಕ್ಷಕ್ಕೆ ಸಾಕಷ್ಟು ಸೀಟುಗಳನ್ನು ನೀಡದಿದ್ದರೆ, ಎಲ್ಲಾ 403 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಚಿರಾಗ್ ಪಾಸ್ವಾನ್ ತಮ್ಮ ಎಲ್‌ಜೆಪಿ ಪಾರ್ಟಿ ವಿಸ್ತರಿಸಲು ಪ್ಲಾನ್ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಜೊತೆಗಿನ ಮೈತ್ರಿ ಮಾತುಕತೆ ಪ್ರಮುಖವಾಗಿ ಸೀಟು ಹಂಚಿಕೆಯಲ್ಲಿ ಒಮ್ಮತ ಅಭಿಪ್ರಾಯ ಮೂಡದಿದ್ದರೆ ತಮ್ಮ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ. ಚಿರಾಗ್ ಪಾಸ್ವಾನ್ ನಡೆಯಿಂದ ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಯಲ್ಲಿ ಕೋಲಾಹಲ ಶುರುವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಮೂರನೇ ಬಾರಿಗೆ ಅಧಿಕಾರ ಹಿಡಿಯಲು ಬಿಜೆಪಿ ಹಾಗೂ ಯೋಗಿ ಆದಿತ್ಯನಾಥ್ ಇನ್ನಿಲ್ಲದ ಕಸರತ್ತು ಮಾಡಬೇಕಿದೆ. ಇತ್ತೀಚೆಗಿನ ಚುನಾವಣೆ ಹಾಗೂ ಬೆಳವಣಿಗೆಯಿಂದ ಬಿಜೆಪಿ ಹೊಸ ರಣತಂತ್ರ ರೂಪಿಸಬೇಕಿದೆ. ಇದರ ನಡುವೆ ಚಿರಾಗ್ ಪಾಸ್ವಾನ್ ಹೇಳಿಕೆ ಬಿಜೆಪಿಯಲ್ಲಿ ನಡುಕ ಸೃಷ್ಟಿಸಿದೆ.
ಚಿರಾಗ್ ಪಾಸ್ವಾನ್ ಹೇಳಿಕೆ ಎನ್‌ಡಿಎ ಮೈತ್ರಿಯಲ್ಲಿ ಕೋಲಾಹಲ ಸೃಷ್ಟಿಸುತ್ತಿದ್ದಂತೆ ಸ್ಪಷ್ಟನೆ ನೀಡಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಡಳಿತ ಉತ್ತಮವಾಗಿದೆ. ಎಲ್ಲಾ ಸಮುದಾಯ, ಎಲ್ಲಾ ಜನರಿಗೆ ಸೌಲಭ್ಯಗಳನ್ನು ಸಿಗುವಂತೆ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದಾರೆ. ಯೋಗಿ ಆದಿತ್ಯನಾಥ್ ನಮ್ಮ ನಾಯಕರು ಎಂದು ಲಖನೌ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ