2 ಕೋಟಿ ಹಣ, ಐಷಾರಾಮಿ ವಸ್ತುಗಳ ಲಂಚ ಪಡೆದ ಮಹುವಾ! ಇನ್ನೂ 30 ವರ್ಷ ಹೋರಾಡುವೆ ಎಂದು ಗುಡುಗು

By Kannadaprabha News  |  First Published Dec 9, 2023, 8:52 AM IST

ನನಗೀಗ 49 ವರ್ಷ. ಮುಂದಿನ 30 ವರ್ಷಗಳ ಕಾಲ ಸಂಸತ್ತಿನ ಒಳಗೆ ಹಾಗೂ ಹೊರಗೆ ನಿಮ್ಮ ವಿರುದ್ಧ ಹೋರಾಡುತ್ತೇನೆ’ ಎಂದು ಮಹುವಾ ಮೊಯಿತ್ರಾ ಗುಡುಗಿದ್ದಾರೆ.


ನವದೆಹಲಿ (ಡಿಸೆಂಬರ್ 9, 2023): ಲೋಕಸಭೆಯಿಂದ ಉಚ್ಚಾಟನೆಗೊಂಡ ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ ಅವರು ಉದ್ಯಮಿ ದರ್ಶನ್‌ ಹೀರಾನಂದಾನಿಯಿಂದ 2 ಕೋಟಿ ರೂ. ಹಣ ಹಾಗೂ ಐಷಾರಾಮಿ ವಸ್ತುಗಳನ್ನು ಲಂಚದ ರೂಪದಲ್ಲಿ ಪಡೆದಿದ್ದಾರೆ ಎಂದು ನೈತಿಕ ಸಮಿತಿಯ ವರದಿಯಲ್ಲಿ ಹೇಳಲಾಗಿದೆ. ತನ್ನ 495 ಪುಟಗಳ ವರದಿಯಲ್ಲಿ ನೈತಿಕ ಸಮಿತಿಯು ಮಹುವಾ ಮಾಡಿದ ತಪ್ಪುಗಳನ್ನು ಉಲ್ಲೇಖ ಮಾಡಿದೆ. 

ಅದರಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರಶ್ನೆಗಳನ್ನು ಕೇಳಲು ಮಹುವಾ 2 ಕೋಟಿ ರೂ. ಹಣ, ಐಷಾರಾಮಿ ವಸ್ತುಗಳ ಉಡುಗೊರೆ, ದೆಹಲಿಯಲ್ಲಿ ತಮಗೆ ನೀಡಲಾದ ಅಧಿಕೃತ ಬಂಗಲೆಯ ನವೀಕರಣಕ್ಕೆ ಸಹಾಯ, ಪ್ರವಾಸಕ್ಕೆ ನೆರವು, ರಜೆಗಳನ್ನು ಕಳೆಯಲು ಸೌಕರ್ಯ ಮುಂತಾದವುಗಳನ್ನು ಉದ್ಯಮಿಯಿಂದ ಕೇಳಿ ಪಡೆದುಕೊಂಡಿದ್ದಾರೆ. ಈ ಆರೋಪಗಳೆಲ್ಲ ಸಾಬೀತಾಗಿವೆ. ತನ್ನ ಲಾಗಿನ್‌ ಐಡಿಯನ್ನು ಯಾವ ಉದ್ಯಮಿಗೆ ನೀಡಿದ್ದರೋ ಅವರಿಂದ ಉಡುಗೊರೆ ಪಡೆದಿರುವುದರಿಂದ ಅದು ಲಂಚವೆಂಬುದು ಸ್ಪಷ್ಟವಾಗುತ್ತದೆ. ಸಂಸದರೊಬ್ಬರು ಹೀಗೆ ಮಾಡುವುದು ಅನೈತಿಕ ನಡೆಯಾಗುತ್ತದೆ. ಇದಕ್ಕೆ ಗಂಭೀರ ಶಿಕ್ಷೆಯಾಗಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.

Tap to resize

Latest Videos

ಇದನ್ನು ಓದಿ: ಸಂಸದೆ ಮಹುವಾ ಮೊಯಿತ್ರಾ ಲೋಕಸಭೆ ಸದಸ್ಯತ್ವ ರದ್ದು, ಶಿಸ್ತು ಸಮಿತಿ ಶಿಫಾರಸು ಅಂಗೀಕಾರ!

ಮಹುವಾ ತಪ್ಪು ಮಾಡಿರುವುದು ಸಾಬೀತಾಗಿರುವುದರಿಂದ ಅವರನ್ನು 17ನೇ ಲೋಕಸಭೆಯಿಂದ ಉಚ್ಚಾಟನೆ ಮಾಡಬೇಕು. ಜೊತೆಗೆ ಅವರ ಮೇಲಿರುವ ಅನೈತಿಕ, ಗಂಭೀರ ಹಾಗೂ ಕ್ರಿಮಿನಲ್‌ ಆರೋಪಗಳ ಬಗ್ಗೆ ಕಾನೂನಿನ ಪ್ರಕಾರ ಸರ್ಕಾರ ತನಿಖೆ ನಡೆಸಬೇಕು. ಅವರಿಗೆ ಹಣ ಸಂದಾಯವಾಗಿದ್ದು ಹೇಗೆ ಮತ್ತು ಅದರ ಮೂಲ ಯಾವುದು ಎಂಬ ಬಗ್ಗೆ ತನಿಖೆ ನಡೆಸಲು ನಮ್ಮಲ್ಲಿ ತಾಂತ್ರಿಕ ನೈಪುಣ್ಯವಿಲ್ಲ. ಹೀಗಾಗಿ ತನಿಖಾ ಸಂಸ್ಥೆಯಿಂದ ಕಾಲಮಿತಿಯಲ್ಲಿ ತನಿಖೆ ಮಾಡಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಇನ್ನೂ 30 ವರ್ಷ ಹೋರಾಡುವೆ: ಮಹುವಾ
ಲೋಕಸಭೆಯಿಂದ ತಮ್ಮ ಉಚ್ಚಾಟನೆಗೆ ಆಕ್ರೋಶ ವ್ಯಕ್ತಪಡಿಸಿರುವ ಮಹುವಾ ಮೊಯಿತ್ರಾ, ‘ಯಾವುದೇ ಸಾಕ್ಷ್ಯವಿಲ್ಲದೆ ನೈತಿಕ ಸಮಿತಿ ನನ್ನ ವಿರುದ್ಧ ವರದಿ ನೀಡಿದೆ. ಅಸ್ತಿತ್ವದಲ್ಲೇ ಇಲ್ಲದ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ನನ್ನನ್ನು ಉಚ್ಚಾಟಿಸಲಾಗಿದೆ. ಎಲ್ಲ ಸಂಸದರೂ ಮಾಡುವುದನ್ನೇ ನಾನೂ ಮಾಡಿದ್ದೇನೆ. ನಾನು ಲಂಚ ಪಡೆದಿರುವುದಕ್ಕೆ ಯಾವುದೇ ಸಾಕ್ಷ್ಯ ಲಭಿಸಿಲ್ಲ’ ಎಂದು ಹೇಳಿದರು.

ಇದು ಬಿಜೆಪಿಯ ಅಂತ್ಯದ ಆರಂಭ, ಲೋಕಸಭೆಯ ಹೊರಗೆ ಗುಡುಗಿದ ಮಹುವಾ ಮೊಯಿತ್ರಾ!

‘ಅದಾನಿ ವಿರುದ್ಧ ನನ್ನ ಬಾಯಿ ಮುಚ್ಚಿಸಲು ತರಾತುರಿಯಲ್ಲಿ ಮೋದಿ ಸರ್ಕಾರ ಹೀಗೆ ಮಾಡಿದೆ. ಆದರೆ ಅದರ ಮೂಲಕ ಅದಾನಿ ತಮಗೆ ಎಷ್ಟು ಮುಖ್ಯ ಎಂಬುದನ್ನು ಈ ಕಾಂಗರೂ ಕೋರ್ಟ್‌ ತೋರಿಸಿದೆ. ಒಬ್ಬ ಮಹಿಳಾ ಸಂಸದೆಯ ಬಾಯಿ ಮುಚ್ಚಿಸಲು ಎಲ್ಲಿಯವರೆಗೆ ಹೋಗುತ್ತೀರಿ? ನನಗೀಗ 49 ವರ್ಷ. ಮುಂದಿನ 30 ವರ್ಷಗಳ ಕಾಲ ಸಂಸತ್ತಿನ ಒಳಗೆ ಹಾಗೂ ಹೊರಗೆ ನಿಮ್ಮ ವಿರುದ್ಧ ಹೋರಾಡುತ್ತೇನೆ’ ಎಂದು ಗುಡುಗಿದರು.

ಪ್ರಶ್ನೆಗಾಗಿ ಲಂಚ ಕೇಸ್‌: ಉದ್ಯಮಿಗೆ ಪಾಸ್‌ವರ್ಡ್‌ ನೀಡಿದ್ದು ನಿಜವೆಂದು ಒಪ್ಪಿಕೊಂಡ ಟಿಎಂಸಿ ಸಂಸದೆ

click me!