ಇನ್ನೂ ಮುಗಿಯದ ಮಹಾ ಬಿಕ್ಕಟ್ಟು; ಅಧಿಕಾರ ಹಂಚಿಕೆಗೆ ಪಟ್ಟು ಬಿಡದ ಬಿಜೆಪಿ-ಶಿವಸೇನೆ

By Kannadaprabha News  |  First Published Oct 29, 2019, 7:45 AM IST

ಮಹರಾಷ್ಟ್ರದಲ್ಲಿ ಸರ್ಕಾರ ರಚನೆಯಲ್ಲಿ ಡ್ರೈವರ್‌ ಸೀಟ್‌ನಲ್ಲಿರುವ ಶಿವಸೇನೆ, ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ, ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಬಿಜೆಪಿಗೆ ಎಚ್ಚರಿಕೆ ನೀಡುವ ಮೂಲಕ, ಅಗತ್ಯ ಬಿದ್ದರೆ ಕಾಂಗ್ರೆಸ್‌, ಎನ್‌ಸಿಪಿ ಬೆಂಬಲ ಪಡೆದು ಸರ್ಕಾರ ರಚನೆ ನಡೆಸುವ ಸಂದೇಶ ರವಾನಿಸಿದೆ.


ಮುಂಬೈ (ಅ.29): ಅಧಿಕಾರ ಹಂಚಿಕೆ ಸಂಬಂಧ ಮಹಾರಾಷ್ಟ್ರದಲ್ಲಿ ಮೈತ್ರಿಕೂಟದ ಪಕ್ಷಗಳ ಬಿಜೆಪಿ ಮತ್ತು ಶಿವಸೇನೆ ನಡುವಿನ ಬಿಕ್ಕಟ್ಟು ತಣ್ಣಗಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಫಲಿತಾಂಶ ಪ್ರಕಟವಾಗಿ 5 ದಿನಗಳಾದರೂ, ಅಧಿಕಾರ ಹಂಚಿಕೆ ಸೂತ್ರ ಜಾರಿ ಬಗ್ಗೆ ಉಭಯ ಪಕ್ಷಗಳಲ್ಲಿ ಇನ್ನೂ ಒಮ್ಮತ ಮೂಡದ ಕಾರಣ, ಸರ್ಕಾರ ರಚನೆ ಕುರಿತು ಉಭಯ ಪಕ್ಷಗಳಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಈ ನಡುವೆ ಸದ್ಯಕ್ಕೆ ಸರ್ಕಾರ ರಚನೆಯಲ್ಲಿ ಡ್ರೈವರ್‌ ಸೀಟ್‌ನಲ್ಲಿರುವ ಶಿವಸೇನೆ, ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ, ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಬಿಜೆಪಿಗೆ ಎಚ್ಚರಿಕೆ ನೀಡುವ ಮೂಲಕ, ಅಗತ್ಯ ಬಿದ್ದರೆ ಕಾಂಗ್ರೆಸ್‌, ಎನ್‌ಸಿಪಿ ಬೆಂಬಲ ಪಡೆದು ಸರ್ಕಾರ ರಚನೆ ನಡೆಸುವ ಸಂದೇಶ ರವಾನಿಸಿದೆ.

Latest Videos

ಈ ನಡುವೆ ಸರ್ಕಾರ ರಚನೆ ಬಗ್ಗೆ ಇನ್ನೂ ರಾಜ್ಯಪಾಲರ ಬಳಿ ಇನ್ನೂ ಅಧಿಕೃತವಾಗಿ ಹಕ್ಕು ಮಂಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಸೋಮವಾರ ಪ್ರತ್ಯೇಕವಾಗಿ ರಾಜ್ಯಪಾಲ ಭಗತ್‌ಸಿಂಗ್‌ ಕೋಶಿಯಾರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದು ಉಭಯ ಪಕ್ಷಗಳ ನಡುವೆ ಇನ್ನು ಹೊಂದಾಣಿಕೆ ಮೂಡಿಲ್ಲ ಎಂಬುದಕ್ಕೆ ಸಾಕ್ಷಿ ಎಂದು ಬಣ್ಣಿಸಲಾಗಿದೆ.

ಮತ್ತೆ ಟಾಂಗ್‌: ಚುನಾವಣೆ ಫಲಿತಾಂಶದ ಬಳಿಕ ಶಿವಸೇನೆ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಹುಲಿ(ಶಿವಸೇನೆ ಚಿಹ್ನೆ)ಯ ಕೈಯಲ್ಲಿ ಕಮಲ(ಬಿಜೆಪಿ ಚಿಹ್ನೆ) ಹಿಡಿದ ಕಾರ್ಟೂನ್‌ ಪ್ರಕಟಿಸಿ ಬಿಜೆಪಿಗೆ ಶಾಂಗ್‌ ನೀಡಿದ್ದ ಶಿವಸೇನೆ ನಾಯಕರು ಸೋಮವಾರ ಮತ್ತೆ ಅದೇ ಕೆಲಸ ಮಾಡಿದ್ದಾರೆ. ಸೋಮವಾರ ಪತ್ರಿಕೆಯಲ್ಲಿ ಅಂಕಣ ಬರೆದಿರುವ ಶಿವಸೇನೆಯ ಸಂಜಯ್‌ ರಾವತ್‌, ಉದ್ಧವ್‌ ಠಾಕ್ರೆ ಮಹಾರಾಷ್ಟ್ರ ರಾಜಕಾರಣದ ‘ರಿಮೋಟ್‌ ಕಂಟ್ರೋಲ್‌’ ಎಂದು ಬರೆದುಕೊಂಡಿದ್ದಾರೆ.

ಈ ಮೂಲಕ ಶಿವಸೇನೆ ತನ್ನ ಬೇಡಿಕೆಗೆ ದೃಢವಾಗಿ ಅಂಟಿಕೊಂಡಿದೆ ಎಂದು ಅಂಕಣದಲ್ಲಿ ತೋರ್ಪಡಿಸಲಾಗಿದೆ. ಈ ಹಿಂದೆ ಪಕ್ಷದ ಅಧ್ಯಕ್ಷರಾಗಿದ್ದ ಬಾಳಾ ಠಾಕ್ರೆ ಅವರು ರಾಜಕಾರಣದ ರಿಮೋಟ್‌ ಕಂಟ್ರೋಲ್‌ ಆಗಿದ್ದರು. ಈಗ ಉದ್ಧವ್‌ ಠಾಕ್ರೆ ಆ ಸ್ಥಾನಕ್ಕೆ ಬಂದಿದ್ದಾರೆ ಎಂದು ಅಂಕಣದಲ್ಲಿ ಹೇಳಿದ್ದಾರೆ.

ಜೊತೆಗೆ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ರಾವತ್‌, ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ. ಈ ಹಿಂದೆ ಒಪ್ಪಂದ ಮಾಡಿಕೊಂಡಂತೆ ಬಿಜೆಪಿ ಅಧಿಕಾರ ಹಂಚಿಕೆ ಮಾಡಬೇಕು. ಒಂದು ವೇಳೆ ಈ ಒಪ್ಪಂದಕ್ಕೆ ಬಿಜೆಪಿ ಒಪ್ಪದೇ ಹೋದಲ್ಲಿ, ನಾವು ಪರ್ಯಾಯ ಮಾರ್ಗ ಹುಡುಕಿಕೊಳ್ಳಬೇಕಾಗುತ್ತದೆ ಎನ್ನುವ ಮೂಲಕ ಅಗತ್ಯ ಬಿದ್ದರೆ ಕಾಂಗ್ರೆಸ್‌- ಎನ್‌ಸಿಪಿ ಬೆಂಬಲ ಪಡೆಯುವ ಸುಳಿವು ನೀಡಿದ್ದಾರೆ.

ಪಕ್ಷೇತರ ಸೆಳೆತ:

ಈ ನಡುವೆ ಅಧಿಕಾರ ಹಂಚಿಕೆ ವಿಷಯದಲ್ಲಿ ತೀವ್ರ ಸೆಣಸಿಗೆ ಬಿದ್ದಿರುವ ಬಿಜೆಪಿ ಮತ್ತು ಶಿವಸೇನೆ, ಯಾವುದಕ್ಕೂ ಇರಲಿ ಎಂದು ಪಕ್ಷೇತರ ಸದಸ್ಯರನ್ನು ತಮ್ಮ ಬಣಕ್ಕೆ ಎಳೆಯುವ ಯತ್ನವನ್ನು ಚುರುಕುಗೊಳಿಸಿವೆ. ಇದರ ಫಲ ಎಂಬಂತೆ ಮೂವರು ಪಕ್ಷೇತರ ಸದಸ್ಯರು ಬಿಜೆಪಿಗೆ ಬೆಂಬಲ ಘೋಷಿಸಿದ್ದರೆ, ಇಬ್ಬರು ಪಕ್ಷೇತರ ಸದಸ್ಯರು ಶಿವಸೇನೆಗೆ ಬೆಂಬಲ ಘೋಷಿಸಿದ್ದಾರೆ. ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದುಬಂದ ಗೀತಾ ಜೈನ್‌, ರಾಜೇಂದ್ರ ರಾವತ್‌ ಮತ್ತು ರವಿ ರಾಣಾ ಈಗ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಗೀತಾ ಮತ್ತು ರಾಜೇಂದ್ರ ಬಿಜೆಪಿಯಿಂದ ಟಿಕೆಟ್‌ ಸಿಕ್ಕಿಲ್ಲವೆಂದು ಬಂಡಾಯವೆದ್ದು, ಶಿವಸೇನೆ ಅಭ್ಯರ್ಥಿಯ ವಿರುದ್ಧವೇ ಕಣಕ್ಕಿಳಿದು ಗೆದ್ದು ಬಂದಿದ್ದಾರೆ.

click me!