
ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗಗಳ ಬಗ್ಗೆ ಚರ್ಚೆ ಶುರುವಾಗಿವೆ. ಎನ್‌ಸಿಪಿ ಎರಡು ಪಕ್ಷಗಳ ವಿಲೀನಕ್ಕೆ ಸಂಬಂಧಿಸಿ ರಾಜಕೀಯ ಚಟುವಟಿಕೆಗಳು ಶುರುವಾಗಿದೆ ಎನ್ನಲಾಗಿದೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಮತ್ತೆ ಎನ್‌ಸಿಪಿ ವಿಲನದ ಚರ್ಚೆಗೆ ನಾಂದಿ ಹಾಡಿರೋದು ಎರಡು ಪ್ರಮುಖ ಘಟನೆಗಳು. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸದ್ಯ ಅಸ್ವಸ್ಥರಾಗಿದ್ದಾರೆ. ಈ ನಡುವೆ ಎನ್‌ಸಿಪಿ ರಾಜ್ಯಸಭೆ ಸದಸ್ಯ ಪ್ರಫುಲ್ ಪಟೇಲ್, ಅವರನ್ನು ಭೇಟಿಯಾಗಿದ್ದಾರೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಭೇಟಿಯಾಗಿ ಚರ್ಚೆ ಮಾಡುತ್ತಿರುವ ವಿಡಿಯೋ ಅದಾಗಿದೆ. ಇದರ ಮಧ್ಯೆ ಆಡಳಿತಾರೂಢ ಎನ್‌ಸಿಪಿ ಅಧ್ಯಕ್ಷ ಸುನಿಲ್ ತತ್ಕರೆ, ಅಜಿತ್ ಪವಾರ್ ಜೀವಂತವಾಗಿದ್ದರೆ ಈ ವರ್ಷದ ಫೆಬ್ರವರಿಯಲ್ಲಿಯೇ ಎರಡೂ ಬಣಗಳು ವಿಲೀನಗೊಳ್ಳುತ್ತಿದ್ದವು ಎಂಬ ಸ್ಫೋಟಕ ಹೇಳಿಕೆಯನ್ನ ನೀಡಿದ್ದಾರೆ. ಈ ಎರಡು ಬೆಳವಣಿಗೆಗಳು ಮಹಾರಾಷ್ಟ್ರ ರಾಜಕಾರಣದಲ್ಲಿ ಬೇರೆಯದ್ದೇ ಅರ್ಥ ನೀಡ್ತಿವೆ. ಎರಡು ಹೋಳಾಗಿರುವ ಎನ್‌ಸಿಪಿ ಬಣಗಳು ಮತ್ತೆ ಒಂದಾಗಲಿವೆ ಎಂಬ ಚರ್ಚೆ ಶುರುವಾಗಿವೆ. ಆಡಳಿತಾರೂಢ NCP ಯನ್ನು ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ನೇತೃತ್ವ ವಹಿಸಿದ್ದರೆ.. ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ (MVA) ಮೈತ್ರಿಕೂಟದ ಭಾಗವಾಗಿರುವ NCP ಶರದ್ ಪವಾರ್ ಮುಖ್ಯಸ್ಥರಾಗಿದ್ದಾರೆ.
ಅಜಿತ್ ಪವಾರ್ ಜೀವಂತವಾಗಿದ್ದರೆ.. ಕಳೆದ ಫೆಬ್ರವರಿ 12 ರಂದೇ ಎರಡೂ ಎನ್‌ಸಿಪಿ ಬಣಗಳ ವಿಲೀನ ಆಗುತ್ತಿದ್ದವು. ವಿಲೀನ ಮಾತುಕತೆ ಮತ್ತು ಅದನ್ನು ಹೇಗೆ ಅಂತಿಮಗೊಳಿಸಲಾಗುತ್ತದೆ ಎಂದು ಅಜಿತ್ ದಾದಾ, ಶರದ್ ಪವಾರ್‌ಗೆ ತಿಳಿಸಿದ್ದರು ಎಂದು ಸುನಿಲ್ ತತ್ಕರೆ ಹೇಳಿದ್ದಾರೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ಅಧ್ಯಕ್ಷರಾಗಿದ್ದ ಅಜಿತ್ ಪವಾರ್ ಜನವರಿ 28 ರಂದು ನಿಧನರಾದರು. ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆದ ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡರು. ಅವರ ಮರಣದ ನಂತರ ಪತ್ನಿ ಸುನೇತ್ರಾ ಪವಾರ್ ಎನ್‌ಸಿಪಿ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡರು ಮತ್ತು ಉಪಮುಖ್ಯಮಂತ್ರಿಯಾದರು.
ಶರದ್ ಪವಾರ್ ಪ್ರಸ್ತುತ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಎದೆ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಗುರುವಾರ ರಾತ್ರಿ ಪ್ರಫುಲ್ ಪಟೇಲ್ 85 ವರ್ಷದ ಪವಾರ್ ಅವರನ್ನು ಭೇಟಿಯಾದರು. ಪಟೇಲ್ ಮತ್ತು ಪವಾರ್ ನಡುವಿನ ಸಂಭಾಷಣೆಯ ವೀಡಿಯೊದಲ್ಲಿ.. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಎನ್‌ಸಿಪಿ ಕಾರ್ಯಾಧ್ಯಕ್ಷರಿಗೆ ಏನೋ ಹೇಳುತ್ತಿದ್ದಾರೆ. ಅದಕ್ಕೆ ಪಟೇಲ್, ನಾನು ನವೆಂಬರ್ 10 ರ ನಂತರ ಮುಂಬೈನಲ್ಲಿ ಇರುತ್ತೇನೆ. ಆಗ ನಾವು ಒಟ್ಟಿಗೆ ಕುಳಿತು ಈ ವಿಷಯ ಚರ್ಚೆ ಮಾಡೋಣ ಎಂದಿದ್ದಾರೆ. ಇದಕ್ಕೆ ಪವಾರ್ ಒಪ್ಪಿಗೆ ಸೂಚಿಸಿದ್ದಾರೆ. ಬೆನ್ನಲ್ಲೇ ಪಟೇಲ್ ಮಾಧ್ಯಮಗಳಿಗೆ ಎದುರಾದರು. ಭೇಟಿ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಪವಾರ್ ನನ್ನ ಜೊತೆ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯದ ಬಗ್ಗೆ ಚರ್ಚಿಸಿದರು. ನಮ್ಮ ಸಂಭಾಷಣೆಯಲ್ಲಿ ಎನ್‌ಸಿಪಿ ಆಂತರಿಕ ವಿಚಾರಗಳು ನಡೆದಿಲ್ಲ ಎಂದಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ, ಪವಾರ್‌ಗೆ ದೂರವಾಣಿ ಕರೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ.. ಇಬ್ಬರು ನಾಯಕರು ಉತ್ತಮ ಮತ್ತು ಗೌರವಯುತ ಸಂಬಂಧ ಹೊಂದಿದ್ದಾರೆ. ಮೋದಿ ಅವರು ಪವಾರ್ ಅವರ ಆರೋಗ್ಯ ವಿಚಾರಿಸಲು ಕರೆ ಮಾಡಿದ್ದರು ಎಂದಿದ್ದಾರೆ.
ಆಡಳಿತರೂಢ ಎನ್‌ಸಿಪಿಯಲ್ಲಿ ಪಾರ್ಥ ಅವರ ಪ್ರಭಾವ ಹೆಚ್ಚಾಗಿದೆ. ಈ ಪಾರ್ಥ ಪವಾರ್ ಬೇರೆ ಯಾರೂ ಅಲ್ಲ. ಎನ್‌ಸಿಪಿಯ ಇನ್ನೊಂದು ಬಣದ ಮುಖ್ಯಸ್ಥೆ ಸುನೇತ್ರಾ ಪವಾರ್ ಅವರ ಪುತ್ರ. ಪಕ್ಷದಲ್ಲಿ ಇವರ ಹಸ್ತಕ್ಷೇಪ ಕೆಲವು ಹಿರಿಯ ನಾಯಕರಿಗೆ ಇರಿಸು ಮುರಿಸು ಆಗಿದೆ. ಇದೇ ಕಾರಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಎನ್‌ಸಿಪಿ ಹಿರಿಯ ನಾಯಕರು ಭೇಟಿಯಾಗಿದ್ದರು. ಈ ವೇಳೆ ಉಪಮುಖ್ಯಮಂತ್ರಿ ಸುನೇತ್ರಾ ಹಾಗೂ ಪಾರ್ಥ್ ಪವಾರ್ ಇರಲಿಲ್ಲ. ಅವರು ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡುತ್ತಿದ್ದಂತೆಯೇ ಪ್ರಫುಲ್ ಪಾಟೇಲ್ ಅವರು ಶರದ್ ಪವಾರ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ