ಮಲ್‌ಶ್ರಿಯಾಸ್ ವಿಧಾನಸಭೆ ಕ್ಷೇತ್ರದ ಮರ್ಕರವಾಡಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿಗೆ ಅನಿರೀಕ್ಷಿತವಾಗಿ ಹೆಚ್ಚಿನ ಮತಗಳು ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬ್ಯಾಲೆಟ್ ಪೇಪರ್ ಮೂಲಕ ಮರುಮತದಾನಕ್ಕೆ ಒತ್ತಾಯಿಸಿದ ಘಟನೆ ನಡೆದಿದೆ.
ಸೊಲ್ಲಾಪುರ: ಇಲ್ಲಿನ ಮಲ್‌ಶ್ರಿಯಾಸ್ ವಿಧಾನಸಭೆ ಕ್ಷೇತ್ರದ ಮರ್ಕರವಾಡಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ರಾಮ್ ಸಾತ್ಪುತೆಗೆ 843 ಮತ ಬಂದಿದ್ದಕ್ಕೆ ಅಚ್ಚರಿ ಪಟ್ಟ ಗ್ರಾಮಸ್ಥರು, ಇವಿಎಂ ಬಗ್ಗೆ ಸಂದೇಹಿಸಿ ಮಂಗಳವಾರ ಬ್ಯಾಲೆಟ್ ಪೇಪರ್ ಮೂಲಕ ಮರುಮತದಾನಕ್ಕೆ ಮುಂದಾಗಿದ್ದರು. ಇದಕ್ಕೆ ಪೊಲೀಸರು ತಡೆಯೊಡ್ಡಿದ್ದಾರೆ.ವಿಜೇತ ಅಭ್ಯರ್ಥಿ ಎನ್‌ಸಿಪಿ (ಎಸ್‌ಪಿ) ಉತ್ತಮ್ ಜಾನಕರ್ ಗ್ರಾಮಸ್ಥರೊಂದಿಗೆ ಮಾತಕತೆ ನಡೆಸಿದ ಬಳಿಕೆ ಅವರು ಮರು ಮತದಾನದ ಆಲೋಚನೆಯನ್ನು ಕೈಬಿಟ್ಟಿದ್ದಾರೆ. ನ.20 ರಂದು ನಡೆದ ಚುನಾವಣೆಯಲ್ಲಿ ಮರ್ಕರವಾಡಿಯಲ್ಲಿ ಉತ್ತಮ್ ಜಾನಕರ್‌ಗೆ 1003 ವೋಟು ಹಾಗೂ ರಾಮ್ ಸಾತ್ಪುತೆಗೆ 843 ಮತ ಬಂದಿದ್ದವು. ಇದರಿಂದ ಗ್ರಾಮಸ್ಥರಿಗೆ ಅಚ್ಚರಿಯಾಗಿತ್ತು. 100 ರಿಂದ 150 ಮತ ಬಾರದವನಿಗೆ 843 ವೋಟ್ ಬಿದ್ದಿದ್ದು ಹೇಗೆ ಎಂದು ಇವಿಎಂ ಮೇಲೆ ಶಂಕಿಸಿ, ‘ಬ್ಯಾಲೆಟ್ ಪೇಪರ್ ಮೂಲಕ ಮರುಮತದಾನಕ್ಕೆ ಅವಕಾಶ ಕೊಡಿ, ಆತನಿಗೆ 100 ಮತಗಳೂ ಬೀಳುವುದಿಲ್ಲ ಎಂಬುದನ್ನು ಸಾಬೀತು ಮಾಡುತ್ತೇವೆ’ ಎಂದು ಪಟ್ಟು ಹಿಡಿದಿದ್ದರು.
ಕಾಶ್ಮೀರ: 7 ಜನರ ಕೊಂದಿದ್ದ ಉಗ್ರನ ಹತ್ಯೆ
ಪಿಟಿಐ ಶ್ರೀನಗರ: ಜಮ್ಮು-ಕಾಶ್ಮೀರದ ಗಂದೇರ್‌ಬಾಲ್‌ನಲ್ಲಿ ಅ.20ರಂದು ಖಾಸಗಿ ಕಂಪನಿಯ ವಸತಿ ಶಿಬಿರದಲ್ಲಿ 6 ಕಾರ್ಮಿಕರು ಮತ್ತು ವೈದ್ಯನ ಹತ್ಯೆಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿವೆ. ‘ಕುಲ್ಗಾಂ ನಿವಾಸಿ ಆಗಿದ್ದ ಜುನೈದ್ ಅಹ್ಮದ್ ಭಟ್ ಎಂಬ ಭಯೋತ್ಪಾದಕ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದವನು. ಈತ ಅವರು ಗಗಾಂಗೀರ್, ಗಂದೇರ್‌ಬಾಲ್ ಮತ್ತು ಇತರ ಸ್ಥಳಗಳಲ್ಲಿ ನಡೆದ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ. ಎ ದರ್ಜೆ ಉಗ್ರ ಈತನಾಗಿದ್ದ. ಇವನ ಹತ್ಯೆಯಿಂದ ಭದ್ರತಾ ಪಡೆಗಳಿಗೆ ಮಹತ್ವದ ಯಶಸ್ಸು ಸಿಕ್ಕಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಂದೇರ್ಬಾಲ್ ದಾಳಿಯ ಸಮಯದಲ್ಲಿ ಎಕೆ ರೈಫಲ್ ಅನ್ನು ಹೊತ್ತೊಯ್ಯುವ ವೇಳೆ ಸಿಸಿಟಿವಿಯಲ್ಲಿ ಭಟ್ ಕಾಣಿಸಿಕೊಂಡಿದ್ದ. ಕಾಶ್ಮೀರದ ದಚಿಗಂ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಗುಪ್ತಚರ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಈತನ ಶೋಧ ಕಾರ್ಯ ನಡೆಸಿದ್ದವು. ಈ ವೇಳೆ ಸೈನಿಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಪಡೆ ನಡೆಸಿದ ಪ್ರತಿದಾಳಿಯಲ್ಲಿ ಭಟ್ ಹತನಾಗಿದ್ದಾನೆ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಗೆ ಚಿನಾರ್ ವಾರಿಯರ್ಸ್, ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಲೆಫ್ಟಿನೆಂಟ್ ಜನರಲ್ ಸುಚಿಂದ್ರ ಕುಮಾರ್ ಅಭಿನಂದಿಸಿದ್ದಾರೆ’ ಎಂದು ಉತ್ತರ ಸೇನಾ ಕಮಾಂಡ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ನಾನು ನಿವೃತ್ತಿ ಆಗುತ್ತಿಲ್ಲ, ಬ್ರೇಕ್ ಅಷ್ಟೆ: ವಿಕ್ರಾಂತ್ ಮೈಸಿ ಸ್ಪಷ್ಟನೆ
ನವದೆಹಲಿ: ನಟ ವಿಕ್ರಾಂತ್ ಮೈಸಿ ಅವರು, ನಾನು ನಿವೃತ್ತಿ ಆಗುತ್ತಿಲ್ಲ. ಇದರ ಬದಲು ಚಿತ್ರರಂಗದಿಂದ ಬ್ರೇಕ್ ಪಡೆಯುತ್ತಿದ್ದೇನಷ್ಟೇ. ನನ್ನ ಸಂದೇಶವನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.ಸೋಮವಾರ ಹೇಳಿಕೆ ನೀಡಿದ್ದ ಅವರು, ಮನೆಗೆ ಹಿಂದಿರುಗಲು ಇದು ಸೂಕ್ತ ಸಮಯ. 2025ರಲ್ಲಿ ಕೊನೆಯದಾಗಿ ಪರಸ್ಪರ ಭೇಟಿಯಾಗೋಣ. ಎರಡು ಸಿನಿಮಾಗಳು ಮತ್ತು ಹಲವು ವರ್ಷಗಳ ನೆನಪುಗಳು ನನ್ನೊಂದಿಗೆ ಇವೆ. ಎಲ್ಲರಿಗೂ ಧನ್ಯವಾದ ಎಂದಿದ್ದರು. ಆಗ 2025ರಲ್ಲಿ ಬಿಡುಗಡೆ ಆಗುವ ಚಿತ್ರವೇ ಕೊನೆಯ ಸಿನಿಮಾ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಇದಕ್ಕ ಮಂಗಳವಾರ ಅವರು ಸ್ಪಷ್ಟನೆ ನೀಡಿ, ಸದ್ಯಕ್ಕೆ ನಾನು ಸುಸ್ತಾಗಿದ್ದೇನಷ್ಟೇ. ಬ್ರೇಕ್ ಪಡೆಯುತ್ತಿದ್ದೇನೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.