
ಪಾಲ್ಘರ್ (ಮಹಾರಾಷ್ಟ್ರ): ತಾನು ಸಾಕ್ಷಾತ್ ಶಿವನ ಅವತಾರ ಎಂದು ನಂಬಿಸಿ, ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾರಾಷ್ಟ್ರದ ಸ್ವಘೋಷಿತ ದೇವಮಾನವ ಹಾಗೂ ಜ್ಯೋತಿಷಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್ ಮೂಲದ ಋಷಿಕೇಶ್ ವೈದ್ಯ ಎಂಬಾತನೇ ಬಂಧಿತ ಆರೋಪಿ.
ಪುಣೆ ನಿವಾಸಿಯಾಗಿರುವ 35 ವರ್ಷದ ಸಂತ್ರಸ್ತ ಮಹಿಳೆಗೆ 2023ರಲ್ಲಿ ಫೇಸ್‌ಬುಕ್ ಮೂಲಕ ಋಷಿಕೇಶ್ ಪರಿಚಯವಾಗಿದ್ದ. ಬಳಿಕ 2023ರ ಡಿಸೆಂಬರ್‌ನಲ್ಲಿ ಆರೋಪಿಯು ಪುಣೆಯಲ್ಲಿ ಮೊದಲ ಬಾರಿಗೆ ಮಹಿಳೆಯನ್ನು ಭೇಟಿಯಾಗಿದ್ದನು. ಈ ವೇಳೆ ತಾನು ಶಿವನ ಅವತಾರ ಎಂದು ಮಹಿಳೆಯನ್ನು ನಂಬಿಸಿದ್ದಲ್ಲದೆ, ನೀನು ನನ್ನ 'ಪಾರ್ವತಿ' ಎಂದು ಹೇಳಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಮಹಿಳೆಗೆ ತಿಳಿಯದಂತೆ ದೌರ್ಜನ್ಯದ ದೃಶ್ಯಗಳನ್ನು ಆರೋಪಿ ತನ್ನ ಫೋನ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದ. ಈ ದೃಶ್ಯಗಳನ್ನು ತೋರಿಸಿ ಮಹಿಳೆಗೆ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಳೆದ ಮೇ ತಿಂಗಳಿನಲ್ಲಿ ಮಹಿಳೆಯನ್ನು ಹೋಟೆಲ್‌ವೊಂದಕ್ಕೆ ಕರೆಸಿಕೊಂಡಿದ್ದ ಆರೋಪಿ, ಅಲ್ಲಿಯೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಇತ್ತೀಚೆಗೆ ನಾಸಿಕ್‌ನಲ್ಲಿ ಮಾಜಿ ಮರ್ಚೆಂಟ್ ನೇವಿ ಉದ್ಯೋಗಿ ಹಾಗೂ ಸ್ವಘೋಷಿತ ದೇವಮಾನವ ಅಶೋಕ್ ಖರತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈ ಸುದ್ದಿ ತಿಳಿದ ಬಳಿಕ ತನಗೂ ದೂರು ನೀಡಲು ಧೈರ್ಯ ಬಂತು ಎಂದು ಸಂತ್ರಸ್ತ ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಋಷಿಕೇಶ್ ವೈದ್ಯ ಪಾಲ್ಘರ್ ಜಿಲ್ಲೆಯಲ್ಲಿ ಸಾಮಾಜಿಕ ಸಂಸ್ಥೆಯೊಂದನ್ನು ನಡೆಸುತ್ತಿದ್ದ. ತನ್ನನ್ನು ಬ್ಲ್ಯಾಕ್‌ಮೇಲ್ ಮಾಡಲು ಬಳಸಿದ ನಗ್ನ ಫೋಟೋಗಳನ್ನು ಪತ್ತೆಹಚ್ಚಿ ನಾಶಪಡಿಸಬೇಕು ಎಂದು ಮಹಿಳೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ