ಮಹಾರಾಷ್ಟ್ರ ಮತ್ತಷ್ಟು ಲಾಕ್: ಕೊರೋನಾ ನಿಯಂತ್ರಣಕ್ಕೆ ಹರಸಾಹಸ!

By Kannadaprabha NewsFirst Published Mar 13, 2021, 8:15 AM IST
Highlights

ಪುಣೆ, ಪರಭಣಿ, ಅಕೋಲಾದಲ್ಲಿ ರಾತ್ರಿ ಕರ್ಫ್ಯೂ| ಈ ಮಾಸಾಂತ್ಯದವರೆಗೆ ಕರ್ಫ್ಯೂ ಜಾರಿ| ಜಲಗಾಂವ್‌ನಲ್ಲಿ ನಾಳೆಯವರೆಗೆ ಜನತಾ ಕರ್ಫ್ಯೂ| ಕೊರೋನಾ ನಿಯಂತ್ರಣಕ್ಕೆ ‘ಮಹಾ’ಸಾಹಸ

ಪುಣೆ/ಮುಂಬೈ(ಮಾ.13): ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟುಕಡೆ ನಿರ್ಬಂಧಗಳನ್ನು ಹೇರಲಾಗಿದೆ. ಪುಣೆ, ಪರಭಣಿ, ಅಕೋಲಾದಲ್ಲಿ ಶುಕ್ರವಾರ ರಾತ್ರಿಯಿಂದಲೇ ರಾತ್ರಿ ಕರ್ಫ್ಯೂ ಹೇರಲಾಗಿದ್ದು, ಮಾ.31ರವರೆಗೆ ಜಾರಿಯಲ್ಲಿರಲಿದೆ.

ರಾತ್ರಿ 11 ಗಂಟೆಯಿಂದ ಬೆಳಗ್ಗೆ 6ರವರೆಗೆ ರಾತ್ರಿ ಕಫä್ರ್ಯ ಜಾರಿಯಲ್ಲಿರಲಿದೆ. ಅಂಗಡಿ-ಮುಂಗಟ್ಟುಗಳು, ಹೋಟೆಲ್‌ಗಳು ಸೇರಿದಂತೆ ಎಲ್ಲ ವಹಿವಾಟುಗಳನ್ನು ರಾತ್ರಿ 10ಕ್ಕೆ ಬಂದ್‌ ಮಾಡಲು ಸೂಚಿಸಲಾಗಿದೆ. ಇದಲ್ಲದೆ ಬೆಳಗ್ಗೆ ಹೋಟೆಲ್‌ಗಳಲ್ಲಿ ಶೇ.50ರಷ್ಟುಗ್ರಾಹಕರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಸೂಚಿಸಲಾಗಿದೆ. ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅಧ್ಯಕ್ಷತೆಯಲ್ಲಿ ನಡೆಸಿದ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ. ಇದರೊಂದಿಗೆ ಸೋಂಕು ಹೆಚ್ಚಿರುವ 10 ಜಿಲ್ಲೆಗಳ ಪೈಕಿ 8ರಲ್ಲಿ ವಿವಿಧ ರೀತಿಯ ಲಾಕ್ಡೌನ್‌ ಜಾರಿ ಮಾಡಿದಂತಾಗಿದೆ.

ಪರಭಣಿ, ಅಕೋಲಾದಲ್ಲೂ ಕರ್ಫ್ಯೂ:

ಪರಭಣಿ ಹಾಗೂ ಅಕೋಲಾದಲ್ಲೂ ಕರ್ಫ್ಯೂ ಹೇರಲಾಗಿದೆ. ಪರಭಣಿಯಲ್ಲಿ ರಾತ್ರಿ 8ರಿಂದ ಬೆಳಗ್ಗೆ 8ರವರೆಗೆ ಹಾಗೂ ಪರಭಣಿಯಲ್ಲಿ ರಾತ್ರಿ 12ರಿಂದ ಬೆಳಗ್ಗೆ 6ರವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ.

ಜಲಗಾಂವ್‌ನಲ್ಲಿ ಮಾ.12ರಿಂದ ಜನತಾ ಕರ್ಫ್ಯೂ ಆರಂಭವಾಗಿದ್ದು, ಮಾ.14ರವರೆಗೆ ಜಾರಿಯಲ್ಲಿರಲಿದೆ. ಗುರುವಾರವೇ ಮಾ.15ರಿಂದ ಮಾ.21ರವರೆಗೆ ನಾಗಪುರದಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಿಸಲಾಗಿತ್ತು.

ಗುರುವಾರ ಮಹಾರಾಷ್ಟ್ರದಲ್ಲಿ 14,317 ಕೊರೋನಾ ಪ್ರಕರಣಗಳು ದಾಖಲಾಗಿದ್ದವು. ಇತ್ತೀಚಿನ ದಾಖಲೆ ಇದಾಗಿತ್ತು. ಸಕ್ರಿಯ ಪ್ರಕರಣಗಳ ಸಂಖ್ಯೆ 1 ಲಕ್ಷ ಮೀರಿದ್ದು, 1.06 ಲಕ್ಷಕ್ಕೆ ಏರಿತ್ತು.

click me!