* ಶಾಸಕರ ಪುತ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತ
* ಅಪಘಾತದಲ್ಲಿ ಶಾಸಕರ ಪುತ್ರ ಸೇರಿ ಏಳು ವಿದ್ಯಾರ್ಥಿಗಳು ಸಾವು
* ಮಹಾರಾಷ್ಟ್ರದಲ್ಲಿ ನಡೆದ ಭೀಕರ ಅಪಘಾತ
ಮುಂಬೈ(ಜ.15): ಮಹಾರಾಷ್ಟ್ರದ ಸೆಲ್ಸೂರ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 7 ವಿದ್ಯಾರ್ಥಿಗಳು ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ಮೃತರ ಪೈಕಿ ಭಾರತೀಯ ಜನತಾ ಪಕ್ಷದ ಶಾಸಕ ವಿಜಯ್ ರಹಂಗ್‌ಡೇಲ್ ಅವರ ಪುತ್ರನ ಹೆಸರೂ ಸೇರಿದೆ ಎಂದು ವರದಿಯಾಗಿದೆ. ಸೋಮವಾರ ರಾತ್ರಿ 11.30ರ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿಯಿಂದ ಬಂದ ಮಾಹಿತಿ ಪ್ರಕಾರ, ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳು ವಾರ್ಧಾ ಕಡೆಗೆ ಹೋಗುತ್ತಿದ್ದರು.
ಎಲ್ಲರೂ ಸಾವಂಗಿಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಎಂದು ವರದಿಯಾಗಿದೆ. ಅಪಘಾತ ಎಷ್ಟು ತೀವ್ರವಾಗಿತ್ತು ಎಂದರೆ ವಾಹನ ನಿಯಂತ್ರಣ ತಪ್ಪಿ ಸೇತುವೆ ಮುರಿದು ನದಿಗೆ ಬಿದ್ದಿದೆ. ಅಪಘಾತದಲ್ಲಿ ಮೃತಪಟ್ಟ ಎಲ್ಲಾ ವಿದ್ಯಾರ್ಥಿಗಳು 25 ರಿಂದ 35 ವರ್ಷ ವಯಸ್ಸಿನವರು. ಪ್ರಸ್ತುತ, ಪೊಲೀಸರು ಮತ್ತು ಆಡಳಿತವು ಹೆಚ್ಚಿನ ತನಿಖೆ ನಡೆಸುತ್ತಿದೆ. ಮೃತರನ್ನು ನೀರಜ್ ಚವಾನ್, ಅವಿಶ್ ರಹಂಗ್‌ಡೇಲ್, ನಿತೇಶ್ ಸಿಂಗ್, ವಿವೇಕ್ ನಂದನ್, ಪ್ರತ್ಯೂಷ್ ಸಿಂಗ್, ಶುಭಂ ಜೈಸ್ವಾಲ್ ಮತ್ತು ಪವನ್ ಶಕ್ತಿ ಎಂದು ಗುರುತಿಸಲಾಗಿದೆ. ರಹಂಗ್‌ಡೇಲ್ ಅವರು ತಿರೋಡಾ ಗೋರೆಗಾಂವ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.
undefined
ಮೋದಿ ಸಂತಾಪ
ಪ್ರಧಾನಿ ನರೇಂದ್ರ ಮೋದಿ ಅವರು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ₹ 2 ಲಕ್ಷ ಹಾಗೂ ಗಾಯಗೊಂಡವರಿಗೆ ₹ 50,000 ನೀಡುವುದಾಗಿ ಘೋಷಿಸಿದ್ದಾರೆ. "ಮಹಾರಾಷ್ಟ್ರದ ಸೆಲ್ಸೂರ ಬಳಿ ಅಪಘಾತದಿಂದ ಪ್ರಾಣಹಾನಿಯಿಂದ ನೋವಾಗಿದೆ. ಈ ದುಃಖದ ಸಮಯದಲ್ಲಿ, ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.