ಮಧ್ಯಪ್ರದೇಶ ಸರ್ಕಾರ ಆಯೋಜಿಸಿದ್ದ ಸಾಮೂಹಿಕ ವಿವಾಹದ ವೇಳೆ ಅವಾಂತರವಾಗಿದೆ. ವಧುಗಳಿಗೆ ಅಧಿಕಾರಿಗಳು ಗರ್ಭಧಾರಣೆ ಪರೀಕ್ಷೆ ನಡೆಸಿದ್ದು, ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಭೋಪಾಲ್: ಮಧ್ಯಪ್ರದೇಶ ಸರ್ಕಾರ ಆಯೋಜಿಸಿದ್ದ ಸಾಮೂಹಿಕ ವಿವಾಹದ ವೇಳೆ ಅವಾಂತರವಾಗಿದೆ. ವಧುಗಳಿಗೆ ಅಧಿಕಾರಿಗಳು ಗರ್ಭಧಾರಣೆ ಪರೀಕ್ಷೆ ನಡೆಸಿದ್ದು, ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.. ರಾಜ್ಯ ಸರ್ಕಾರದ ಮುಖ್ಯಮಂತ್ರಿ ಕನ್ಯಾ ವಿವಾಹ/ನಿಖಾ ಯೋಜನೆಯಡಿ ಮಧ್ಯಪ್ರದೇಶದ ಗಡ್ಸರೈ (Gadsarai) ಪ್ರದೇಶದ ದಿಂಡೊರಿ (Dindori) ಎಂಬಲ್ಲಿ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ಈ ವಿವಾಹ ಸಮಾರಂಭದಲ್ಲಿ ಅಧಿಕಾರಿಗಳು ವಧುಗಳಿಗೆ ಗರ್ಭಧಾರಣೆ ತಪಾಸಣೆ ನಡೆಸಿದ್ದಾರೆ. ಈ ಘಟನೆಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹಲವು ಪ್ರಶ್ನೆಗಳನ್ನು ಎತ್ತಿದೆ. ಯಾರು ಈ ತಪಾಸಣೆಗೆ ಆದೇಶ ನೀಡಿದರು ಎಂದು ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡಿದ್ದಾರೆ.
ಶನಿವಾರ ಈ ಘಟನೆ ನಡೆದಿದ್ದು, 29 ಯುವತಿಯರಲ್ಲಿ ಐವರು ಗರ್ಭಧರಿಸಿರುವುದು ಈ ತಪಾಸಣೆಯಿಂದ ಪತ್ತೆಯಾಗಿದ್ದು, ಅವರು ವಿವಾಹದಿಂದ ದೂರ ಉಳಿದಿದ್ದಾರೆ. ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲವಾದ ಕುಟುಂಬದ ಯುವತಿಯರಿಗಾಗಿ ಸರ್ಕಾರ ಮುಖ್ಯಮಂತ್ರಿ ಕನ್ಯಾ ವಿವಾಹ/ನಿಖಾ ಯೋಜನೆ ಜಾರಿಗೊಳಿಸಿತ್ತು. ಕಾಂಗ್ರೆಸ್ ಘಟನೆ ಬಗ್ಗೆ ತನಿಖೆಗೆ ಆಗ್ರಹಿಸಿದ್ದು, ಇದು ರಾಜ್ಯದ ಬಡ ಹೆಣ್ಣು ಮಕ್ಕಳಿಗೆ ಸರ್ಕಾರ ಮಾಡಿದ ಅವಮಾನ ಎಂದು ಆರೋಪಿಸಿದೆ. ಕಾಂಗ್ರೆಸ್ ಶಾಸಕ (Congress legislator) ಓಂಕಾರ್ ಸಿಂಗ್ ಮರ್ಕಂ (Omkar Singh Markam) ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ಇಂತಹ ಗರ್ಭಧಾರಣೆ ಪರೀಕ್ಷೆಯ ಮಾರ್ಗಸೂಚಿ ಹಾಗೂ ನಿಯಮಾವಳಿಗಳೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಾಫಿನಾಡಿನಲ್ಲಿ ಸರಳ ಸಾಮೂಹಿಕ ವಿವಾಹ, ದಲಿತರ ಸಾಂಸ್ಕೃತಿಕ ವೈಭವದ ಅನಾವರಣ
ಮಧ್ಯಪ್ರದೇಶ (Madhya Pradesh) ಕಾಂಗ್ರೆಸ್ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಕಮಲನಾಥ್ (Kamal Nath) ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ. ಮಾಧ್ಯಮಗಳಲ್ಲಿ ಬಂದಿರುವ ಈ ವಿಚಾರ ನಿಜವಾಗಿದ್ದಲ್ಲಿ ಯಾರ ಆದೇಶದ ಮೇರೆಗೆ ಮಧ್ಯಪ್ರದೇಶದ ಹೆಣ್ಣು ಮಕ್ಕಳಿಗೆ ಈ ರೀತಿ ಅವಮಾನ ಮಾಡಲಾಗಿದೆ? ರಾಜ್ಯದ ಮುಖ್ಯಮಂತ್ರಿಗಳ ಕಣ್ಣಲ್ಲಿ ರಾಜ್ಯದ ಬಡ ಹಾಗೂ ಆದಿವಾಸಿ ಸಮುದಾಯದ ಹೆಣ್ಣು ಮಕ್ಕಳಿಗೆ ಘನತೆ ಇಲ್ಲವೇ ? ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಮಹಿಳೆಯರೊಂದಿಗೆ ಅನುಚಿತ ವರ್ತನೆ ಪ್ರಕರಣದಲ್ಲಿ ಮುಂಚೂಣಿಯಲ್ಲಿದೆ ಎಂದು ಕಮಲ್‌ನಾಥ್ ಟ್ವಿಟ್ ಮಾಡಿದ್ದಾರೆ.
ಘಟನೆ ಬಗ್ಗೆ ಪಾರದರ್ಶಕವಾದ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಇದು ಕೇವಲ ಗರ್ಭಧಾರಣೆ ಪರೀಕ್ಷೆ ಅಲ್ಲ, ಇದು ಹೆಣ್ಣು ಮಕ್ಕಳ ಘನತೆಗೆ ಕಳಂಕ ತರುವ ವಿಚಾರವಾಗಿದೆ ಎಂದು ಅವರು ಹೇಳಿದ್ದಾರೆ.
ಇತ್ತ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿದ್ದಾಗ, ಗರ್ಭಧಾರಣೆ ಪರೀಕ್ಷೆಗೆ ( pregnancy tests) ಯಾವುದೇ ಆದೇಶವಿರಲಿಲ್ಲ ಎಂದು ತಿಳಿದು ಬಂದಿದೆ. ಆದರೆ ಕೆಲವು ವಧುಗಳು ಸ್ತ್ರೀರೋಗ ಸಂಬಂಧಿತ ಕಾಯಿಲೆಗಳ ಬಗ್ಗೆ ಹೇಳಿಕೊಂಡಾಗ ಅಲ್ಲಿದ್ದ ವೈದ್ಯರು ಅವರಿಗೆ ಗರ್ಭಧಾರಣೆ ಪರೀಕ್ಷೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ದಿಂಡೋರಿ ಕಲೆಕ್ಟರ್ ವಿಕಾಸ್ ಮಿಶ್ರಾ ( Vikas Mishra) ಸುದ್ದಿಸಂಸ್ಥೆ ಪಿಟಿಐಗೆ ಪ್ರತಿಕ್ರಿಯಿಸಿದ್ದು, ಸಾಮೂಹಿಕ ವಿವಾಹದಲ್ಲಿ ಭಾಗಿಯಾದವರಿಗೆ ಅನಿಮಿಯಾ (ರಕ್ತಹೀನತೆ) ಪತ್ತೆಗೆ ನಿರ್ದೇಶನಗಳನ್ನು ನೀಡಲಾಗಿತ್ತು. ಆದರೆ ಈ ವೈದ್ಯಕೀಯ ತಪಾಸಣೆ ವೇಳೆ ಕೆಲವು ವಧುಗಳು ತಮಗೆ ಮುಟ್ಟಿನ (ಋತುಚಕ್ರ) ಸಮಸ್ಯೆ ಇದೆ ಎಂದು ಹೇಳಿಕೊಂಡಿದ್ದಾರೆ. ಇದಾದ ನಂತರ ಅಲ್ಲಿದ್ದ ವೈದ್ಯರು ಅವರಿಗೆ ಗರ್ಭಧಾರಣೆ ಪರೀಕ್ಷೆ ನಡೆಸಲು ಮುಂದಾದರು ಎಂದು ಮಿಶ್ರಾ ಹೇಳಿದ್ದಾರೆ.
6 ಜೋಡಿಗಳಿಗೆ ಕಣಭ್ಯಾಗ, ಕೇವಲ 10 ನಿಮಿಷದಲ್ಲಿ ಮುಗಿದ ಮದ್ವೆ
ಆಡಳಿತ ಮಂಡಳಿಯಿಂದ ಪ್ರಗ್ನೆನ್ಸಿ ಪರೀಕ್ಷೆ ನಡೆಸುವ ಯಾವುದೇ ಆದೇಶ ಇರಲಿಲ್ಲ. ಆದರೆ ಪರೀಕ್ಷೆಗೊಳಗಾದ ವಧುಗಳಲ್ಲಿ ನಾಲ್ವರು ಗರ್ಭಿಣಿಯರಾಗಿದ್ದು, ಅವರಿಗೆ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಲು ಅವಕಾಶ ನೀಡಿಲ್ಲ ಎಂದು ಮಿಶ್ರಾ ಹೇಳಿದ್ದಾರೆ. ಮುಖ್ಯಮಂತ್ರಿ ಕನ್ಯಾ ವಿವಾಹ ಯೋಜನೆಯನ್ನು (Mukhaya Mantri Kanya Vivah Yojana) 2006 ರಲ್ಲಿ ರಾಜ್ಯದಲ್ಲಿ ಜಾರಿಗೆ ತರಲಾಗಿದ್ದು, ಈ ಸಾಮೂಹಿಕ ವಿವಾಹದಡಿ ಮದ್ವೆಯಾಗುವವರಿಗೆ 56 ಸಾವಿರ ರೂಪಾಯಿಯನ್ನು ಸರ್ಕಾರದ ವತಿಯಿಂದ ನೀಡಲಾಗುತ್ತದೆ.