
ಅಹಮ್ಮದಾಬಾದ್ (ಜೂ.26) ಏರ್ ಇಂಡಿಯಾ ವಿಮಾನ ದುರಂತದಲ್ಲಿ ವಿಮಾನದಲ್ಲಿದ್ದ 241 ಮಂದಿ ಮೃತಪಟ್ಟರೆ, ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಸರಿಸುಮಾರು 300 ಮಂದಿ ಮೃತಪಟ್ಟಿದ್ದಾರೆ. ದುರಂತದ ತನಿಖೆ ನಡೆಯುತ್ತಿದೆ. ಇದೀಗ ಇಮೇಲ್ ಮಾಹಿತಿಯೊಂದು ಬಹಿರಂಗವಾಗಿದೆ. ಮಹಿಳಾ ಟೆಕ್ಕಿಯ ರಿವೇಂಜ್‌ಗೆ ಅಮಾಯಕ ಜೀವಗಳು ಬಲಿಯಾಯಿತಾ? ವಿಮಾನ ಪತನಕ್ಕೂ ಮೊದಲು, ಪತನದ ಬಳಿಕ ಬಂದ ಬೆದರಿಕೆ ಇಮೇಲ್ ಸಂದೇಶ ಪೊಲೀಸರ ನಿದ್ದೆಗೆಡಿಸಿತ್ತು. ತನಿಖೆ ತೀವ್ರಗೊಳಿಸಿದ ಪೊಲೀಸರು ಇದೀಗ ಮಹತ್ವದ ಮಾಹಿತಿ ಬಯಲಿಗೆಳೆದಿದ್ದಾರೆ.
ನಾವು ಹೇಳಿದಂತೆ ವಿಮಾನ ಪತನಗೊಳಿಸಿದ್ದೇವೆ
ನಿಮಗೆ ಈಗ ನಮ್ಮ ಶಕ್ತಿ ಸಾಮರ್ಥ್ಯದ ಅರಿವಾಗಿರಬೇಕು. ನಿನ್ನೆ ನಿಮಗೆ ಇಮೇಲ್ ಕಳುಹಿಸಿದ ರೀತಿಯಲ್ಲಿ, ಏರ್ ಇಂಡಿಯಾ ವಿಮಾನ ಪತನ ಮಾಡಿದ್ದೇವೆ. ಈ ವಿಮಾನದಲ್ಲಿ ಮಾಜಿ ಸಿಎಂ ಕೂಡ ಇದ್ದರು. ನಾವು ಬೆದರಿಕೆಯನ್ನು ಸುಮ್ಮನೆ ನೀಡುತ್ತಿಲ್ಲ ಅನ್ನೋದು ನಿಮಗೆ ಈಗ ಅರಿವಾಗಿರಬೇಕು. ಇದು ಜೂನ್ 12ರ ಏರ್ ಇಂಡಿಯಾ ವಿಮಾನ ಪತನದ ಬಳಿಕ ಬಂದ ಇಮೇಲ್. ಇದಕ್ಕೂ ಮೊದಲು ಅಹಮ್ಮದಾಬಾದ್ ವಿಮಾನ ನಿಲ್ದಾಣ ಸೇರಿದಂತೆ ಭಾರತದ ಹಲವು ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆ ಇಮೇಲ್ ಪೊಲೀಸರ ಕೈಸೇರಿತ್ತು.
ಮಹಿಳಾ ಟೆಕ್ಕಿ ಬಂಧನ
ಅಹಮ್ಮದಾಬಾದ್ ವಿಮಾನ ನಿಲ್ದಾಣ, ನರೇಂದ್ರ ಮೋದಿ ಕ್ರೀಡಾಂಗಣ, ಅಹಮ್ಮದಾಬಾದ್ ಸೇರಿದಂತೆ ಹಲೆವೆಡೆ ಬಾಂಬ್ ಇಡಲಾಗಿದೆ ಅನ್ನೋ ಹುಸಿ ಇಮೇಲ್ ಬೆದರಿಕೆ ಪೊಲೀಸರಿಗೆ ಬರುತ್ತಲೇ ಇತ್ತು. ಇತ್ತ ಪೊಲೀಸರು ತನಿಖೆ ನಡೆಸುತ್ತಿದ್ದರು. ಆದರೆ ಯಾವಾದ ಏರ್ ಇಂಡಿಯಾ ವಿಮಾನ ಅಪಘಾತ ಮಾಡಿಸಿದ್ದು ನಾವೆ ಎಂದು ಇಮೇಲ್ ಬಂದಿತ್ತೋ, ಪೊಲೀಸರ ತನಿಖೆ ಚುರಕುಗೊಂಡಿತ್ತು. ಈ ಪ್ರಕರಣ ಸಂಬಂಧ ಇಮೇಲ್ ಮೂಲಕ ಬೆದರಿಸಿದ್ದ ಮಹಿಳಾ ಟೆಕ್ಕಿ ರೆನೆ ಜೋಶಿಲ್ದಾಳನ್ನು ಪೊಲೀಸರು ಬಂಧಿಸಿದ್ದಾರೆ.
ತನಿಖೆಯಲ್ಲಿ ಬಯಲಾಗಿದ್ದೇನು?
ರೆನೆ ಜೋಶಿಲ್ದಾ ವೃತ್ತಿಯಲ್ಲಿ ಟೆಕ್ಕಿ. ಈಕೆ ದಿವಿಜ್ ಪ್ರಭಾಕರ್ ಅನ್ನೋ ವ್ಯಕ್ತಿಯನ್ನು ಪ್ರೀತಿಸುತ್ತಿದ್ದರು. ಆದರೆ ಇದು ಒನ್ ಸೈಡೆಡ್ ಲವ್ ಸ್ಟೋರಿ. ಈಕೆ ಪ್ರೀತಿಸುತ್ತಿರುವ ವಿಚಾರ ಆತನಿಗೆ ಗೊತ್ತೆ ಇರಲಿಲ್ಲ. ಇದರ ನಡುವೆ ಪ್ರಭಾಕರ್ ಬೇರೆ ಹುಡುಗಿಯನ್ನು ಮದುವೆಯಾಗಿದ್ದಾನೆ. ಇದು ರೆನೆಗೆ ಸಹಿಸಲು ಸಾಧ್ಯವಾಗಿಲ್ಲ. ಮಾನಸಿಕವಾಗಿ ಆಘಾತ ನೀಡಿತ್ತು. ಪ್ರತಿಭಾನ್ವಿತ ಮಹಿಳಾ ಟೆಕ್ಕಿಯಾಗಿ ಗುರುತಿಸಿಕೊಂಡಿದ್ದ ಈಕೆ ದಿವಿಜ್ ಪ್ರಭಾಕರ್ ಹೆಸರಿನಲ್ಲಿ ನಕಲಿ ಐಡಿ ಸೃಷ್ಟಿಸಿದ್ದಾಳೆ. ಈ ಮೂಲಕ ಆತನ ಹೆಸರಿನಲ್ಲಿ ರಿವೇಂಜ್ ತೀರಿಸಿಕೊಳ್ಳಲು ಪ್ರಯತ್ನ ಮಾಡಿದ್ದಾಳೆ.
ಟೆಕ್ಕಿಯಾಗಿದ್ದ ಕಾರಣ ವರ್ಚುವಲ್ ನೆಟ್‌ವರ್ಕ್, ಫೋನ್ ನಂಬರ್ ಜೊತೆಗೆ ಡಾರ್ಕ್ ವೆಬ್ ಬಳಸಿ ಇಮೇಲ್ ಕಳುಹಿಸುತ್ತಿದ್ದಳು. ಇದರಿಂದ ತಕ್ಷಣಕ್ಕೆ ಈಕೆಯನ್ನು ಪತ್ತೆ ಹಚ್ಚುವುದು ಸುಲಭವಾಗಿರಲಿಲ್ಲ. ಪ್ರತಿಷ್ಠಿತ ಕಂಪನಿಯಲ್ಲಿ ರೋಬೋಟಿಕ್ಸ್ ಎಂಜಿನಿಯರ್ ಆಗಿದ್ದ ರೆನೆ ಈ ಮೂಲಕ ಯಾರಿಗೂ ತಿಳಯಂದೆತೆ ತನಗೆ ಸಿಗದ ಪ್ರಭಾಕರ್ ಹೆಸರಿನಲ್ಲಿ ಇಮೇಲ್ ಮಾಡುತ್ತಿದ್ಧಳು. ವಿಮಾನ ಪತನದ ಬಳಿಕ ಪೊಲೀಸರು ಸೈಬರ್ ಪೊಲೀಸರು ಜಂಟಿಯಾಗಿ ತನಿಖೆ ನಡೆಸಿದ್ದಾರೆ. ಈ ವೇಳೆ ಈಕೆಯನ್ನು ಪತ್ತೆ ಹಚ್ಚಿದ್ದಾರೆ.
ಚೆನ್ನೈನಲ್ಲಿ ಮಹಿಳಾ ಟೆಕ್ಕಿ ಅರೆಸ್ಟ್
ವಿಮಾನ ನಿಲ್ದಾಣ, ಶಾಲೆ ಸೇರಿದಂತೆ ಹಲೆವೆಡೆ ಬಾಂಬ್ ಇಡಲಾಗಿದೆ ಎಂದು ಬೆದಿರಿಕೆ ಇಮೇಲ್ ಮಾಡುತ್ತಿದ್ದ ರೆನೆಯನ್ನು ಚೆನ್ನೈನಲ್ಲಿ ಬಧಿಸಲಾಗಿದೆ. ಪ್ರೀತಿ ಸಿಗದ ಕಾರಣ ಈತನ ವಿರುದ್ಧ ಸೇಡು ತೀರಿಸಿಕೊಳ್ಳಲು ರೆನೆ ಮುಂದಾಗಿದ್ದಳು ಅನ್ನೋದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಆದರೆ ಏರ್ ಇಂಡಿಯಾ ವಿಮಾನ ಪತನ ಮಾಡಿದ್ದೇವೆ ಅನ್ನೋ ಇಮೇಲ್ ಕಳುಹಿಸಿದ್ದು ಇದೆ ರೆನೆ ಅಥವಾ ಆ ಸಂದೇಶ ಕಳುಹಿಸಿದ ವ್ಯಕ್ತಿ ಬೇರೆಯೇ ಎಂದು ತನಿಖೆ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ