ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ/ ಶ್ರೀರಾಮ ಏನು ಬಿಜೆಪಿ ಆಸ್ತಿಯಾ? ಶಶಿ ತರೂರ್ ಖಡಕ್ ಪ್ರಶ್ನೆ/ ಕಾಂಗ್ರೆಸ್ ಯಾವ ಸಂದರ್ಭದಲ್ಲಿಯೂ ಮಂದಿರ ನಿರ್ಮಾಣ ವಿರೋಧಿಸಿಲ್ಲ
ನವದೆಹಲಿ(ಆ.06) ಶ್ರೀರಾಮ ಮತ್ತು ರಾಮಮಂದಿರ ವಿಚಾರ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಶ್ರೀರಾಮನ ವಿಚಾರದಲ್ಲಿ ಕಾಂಗ್ರೆಸ್ 'ಬಿಜೆಪಿ-ಲೈಟ್' ತರ ವರ್ತಿಸುತ್ತಿದೆ ಎಂಬ ಆರೋಪಕ್ಕೆ ತರೂರ್ ಕೆಂಡ ಕಾರಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ಶಶಿ ತರೂರ್ ಅಖಾಡಕ್ಕೆ ಇಳಿದಿದ್ದಾರೆ. ಶ್ರೀರಾಮನ ವಿಚಾರ ಬಿಜೆಪಿಯ ಆಸ್ತಿಯಲ್ಲ ಎಂದು ತರೂರ್ ವಾಗ್ದಾಳಿ ಮಾಡಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ತರೂರ್ ಅನೇಕ ವಿಚಾರಗಳನ್ನು ಒಂದಾದ ಮೇಲೆ ಒಂದು ಹೇಳಿಕೊಂಡು ಹೋಗಿದ್ದಾರೆ. ಈ ವಿಚಾರದಲ್ಲಿ ಮುಸ್ಲಿಮರನ್ನು ಓಲೈಕೆ ಮಾಡಲು ಯಾವ ಸಂದರ್ಭದಲ್ಲಿ ಕಾಂಗ್ರೆಸ್ ಮುಂದಾಗಿತ್ತು ಎಂದು ತರೂರ್ ಪ್ರಶ್ನೆ ಮಾಡಿದ್ದಾರೆ.
ರಾಮನಾಮ ಜಪಿಸಲು ಆರಂಭಿಸಿದ ಕಾಂಗ್ರೆಸ್! ಕಾರಣ ಏನು?
ರಾಮಮಂದಿರ ಶಿಲಾನ್ಯಾಸ ವಿಚಾರವನ್ನು ಉತ್ತರ ಪ್ರದೇಶ ಕಾಂಗ್ರೆಸ್ ಸ್ವಾಗತ ಮಾಡಿತ್ತು. ಶಿಲಾನ್ಯಾಸ ಕಾರ್ಯಕ್ರಮ ರಾಷ್ಟ್ರೀಯ ಭಾವೈಕ್ಯ ಸಾರುವ ಸಮಾರಂಭ ಎಂದು ಕಾಂಗ್ರೆಸ್ ಹೇಳಿತ್ತು. ಹಲವಾರು ಕಾಂಗ್ರೆಸ್ ನಾಯಕರು ಭೂಮಿ ಪೂಜೆ ಕಾರ್ಯಕ್ರಮ ಸ್ವಾಗತ ಮಾಡಿದ್ದರು. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಹ ಶ್ರೀರಾಮನ ಬಗ್ಗೆ ಮಾತಾಡಿದ್ದರು.
ಬಿಜೆಪಿ ಮೇಲೆ ವಾಗ್ದಾಳಿ ಮಾಡಿದ ತರೂರ್ ಶ್ರೀರಾಮ ಬಿಜೆಪಿ ಆಸ್ತಿ ಅಲ್ಲ, ಶ್ರೀರಾಮ ಒಂದು ಮಾದರಿ ವ್ಯಕ್ತಿತ್ವ, ಕೋಟ್ಯಂತರ ಜನರ ಮನದಲ್ಲಿ ನೆಲೆಯಾಗಿದೆ. ಮಹಾತ್ಮ ಗಾಂಧೀಜಿ ಸದಾ ಕಾಲ ಶ್ರೀರಾಮನ ಭಜನೆ ಮಾಡುತ್ತಿದ್ದರು. ಶಾಂತಿ ಮತ್ತು ಸಮೃದ್ಧಿಯ ಸಂಕೇತ ಎಂದು ನಂಬಿದ್ದರು ಎಂಬ ವಿಚಾರವನ್ನು ತರೂರ್ ಉಲ್ಲೇಖಿಸುತ್ತಾರೆ.
ಶ್ರೀರಾಮ ಮತ್ತು ಸನಾತನ ಧರ್ಮವನ್ನು ಘೋಷಣೆಗಳಿಗೆ ಸೀಮಿತ ಮಾಡಲು ಸಾಧ್ಯವಿಲ್ಲ. ಇದೊಂದು ಮಾನವೀಯತೆ ಎಂದು ತರೂರ್ ವ್ಯಾಖ್ಯಾನ ಮಾಡಿದ್ದಾರೆ.
ರಾಮ ಮಂದಿರ ನಿರ್ಮಾಣವನ್ನು ಕಾಂಗ್ರೆಸ್ ಯಾವಾಗಲೂ ವಿರೋಧ ಮಾಡಿಲ್ಲ, ಆದರೆ ಬಾಬ್ರಿ ಮಸೀದಿ ಧ್ವಂಸದಂತಹ ವಿಧ್ವಂಸಕ ಕೃತ್ಯವನ್ನು ವಿರೋಧಿಸಿದೆ ಎಂದಿದ್ದರೆ. ರಾಜೀವ್ ಗಾಂಧಿ ಕಾಲದ ಘಟನೆಗಳು, ನರಸಿಂಹ ರಾವ್ ಅಧಿಕಾರ ಅವಧಿಯಲ್ಲಿ ನಡೆದ ಸಂಗತಿಗಳು, ನಂತರ ರಾಹುಲ್ ಗಾಂಧಿ ಹಿಂದೊಮ್ಮೆ ನೀಡಿದ್ದ ಹೇಳಿಕೆ ಎಲ್ಲವನ್ನು ತರೂರ್ ಉಲ್ಲೇಖ ಮಾಡಿದ್ದಾರೆ.