ಆಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನೆರವೇರಿದೆ. ಪ್ರಧಾನಿ ಮೋದಿ ಅಮೃತಹಸ್ತದಿಂದ ಪ್ರಾಣಪ್ರತಿಷ್ಠೆ ಹಾಗೂ ಪೂಜಾ ವಿಧಿವಿಧಾನಗಳು ನೆರವೇರಿದೆ. ಪ್ರಾಣಪ್ರತಿಷ್ಠೆ ಬೆನ್ನಲ್ಲೇ ಬಾಲರಾಮ ದರ್ಶನ ಭಾಗ್ಯ ಸಿಕ್ಕಿದೆ.
ಆಯೋಧ್ಯೆ(ಜ.22) ಆಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆಯಾಗಿದೆ. ಸತತ 500 ವರ್ಷಗಳ ಹೋರಾಟದ ಬಳಿಕ ಭವ್ಯ ರಾಮ ಮಂದಿರದಲ್ಲಿ ಶ್ರೀರಾಮ ವಿರಾಜಮಾನನಾಗಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಪ್ರಾಣಪ್ರತಿಷ್ಠೆ ನೆರವೇರಿಸಿದ ಬೆನ್ನಲ್ಲೇ ಪ್ರಭು ಶ್ರೀರಾಮನ ದರ್ಶನವಾಗಿದೆ. ಭವ್ಯ ಮಂದಿರದಲ್ಲಿ ಬಾಲರಾಮನ ದರ್ಶನ ಭಾಗ್ಯ ಸಿಗುತ್ತಿದ್ದಂತೆ ರಾಮ ಭಕ್ತರು ಕೈಗಮುಗಿದು ಜೈಶ್ರೀರಾಮ ಘೋಷಣೆ ಮೊಳಗಿಸಿದ್ದಾರೆ.
ರಾಮ ಮಂದಿರ ಪ್ರಾಣಪ್ರತಿಷ್ಠೆ ನೇರಪ್ರಸಾರ ದೇಶಾದ್ಯಂತ ನಡೆದಿದೆ. ಶ್ರೀರಾಮನ ಪ್ರಾಣಪ್ರತಿಷ್ಠೆ ಬೆನ್ನಲ್ಲೇ ಬಾಲರಾಮನ ದರ್ಶನ ಭಾಗ್ಯ ಸಿಗುತ್ತಿದ್ದಂತೆ ನೇರ ಪ್ರಸಾರ ವೀಕ್ಷಿಸುತ್ತಿದ್ದ ಕೋಟ್ಯಾಂತರ ಭಕ್ತರು ಜೈ ಶ್ರೀರಾಮ ಘೋಷಣೆ ಮೊಳಗಿಸಿದ್ದಾರೆ. ಹಲವು ಭಕ್ತರ ಕಣ್ಣಲ್ಲಿ ಆನಂದಬಾಷ್ಪ ಜಿನುಗಿತ್ತು. ಶತ ಶತಮಾನಗಳ ಹೋರಾಟದ ಸಾರ್ಥಕ ಭಾವ ಮೂಡಿತ್ತು. ರಾಮ ಮಂದಿರ ಧ್ವಂಸಗೊಂಡ ಬಳಿಕ ಬಾಲರಾಮನ ಮೂರ್ತಿ ನೋಡಿ ಕಣ್ಣೀರಿಟ್ಟವರೇ ಹೆಚ್ಚು. ಇದೀಗ ಭವ್ಯ ಮಂದಿರದಲ್ಲಿ ಶ್ರೀರಾಮ ವಿರಾಜಮಾನನಾಗುತ್ತಿದ್ದಂತೆ ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದೆ.
ರಾಮಜನ್ಮಭೂಮಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಬೆಳ್ಳಿ ಛಾತ್ರ ಹಾಗೂ ವಸ್ತ್ರವನ್ನು ಅರ್ಪಿಸಿ ಗರ್ಭಗುಡಿ ಪ್ರವೇಶಕ್ಕೂ ಮೊದಲು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು. ಬಳಿಕ ಗರ್ಭಗುಡಿ ಪ್ರವೇಶಿಸಿದ ಪ್ರಧಾನಿ ಮೋದಿ ಹಾಗೂ ಪ್ರಮುಖರು, ಬಾಲರಾಮನ ಮೂರ್ತಿಗೆ ಪ್ರಾಣಪ್ರತಿಷ್ಠೆ ಮಾಡಿದ್ದಾರೆ. ಪ್ರಾಣಪ್ರತಿಷ್ಠೆ ಬಲಿಕ ಪೂಜಾ ಕೈಂಕರ್ಯಗಳು ಆರಂಭಗೊಂಡಿದೆ. ಕಮಲ ಹೂವುಗಳನ್ನು ಅರ್ಪಿಸಲಾಯಿತು.
ಪ್ರಧಾನಿ ಮೋದಿಯಿಂದ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ, 500 ವರ್ಷದ ಹೋರಾಟ ಸಾರ್ಥಕ!
ಮೈಸೂರಿನ ಅರುಣ್ ಯೋಗಿರಾಜ್ ಕೆತ್ತನೆಯ ಅತ್ಯಂತ ಸುಂದರ, ಮಂದಹಾಸದ ಶ್ರೀ ಬಾಲರಾಮನ ಮೂರ್ತಿಯ ಪ್ರಾಣಪ್ರತಿಷ್ಠೆಯಿಂದ ದೈವಿಕ ಕಳೆ ಎದ್ದುಕಾಣುತ್ತಿದೆ. ಮೈಸೂರಿನ ಹೆಚ್‌ಡಿ ಕೋಟೆಯ ರೈತನ ಜಮೀನಿನಲ್ಲಿ ಸಿಕ್ಕ ಕಲನ್ನು ಆರಿಸಿಕೊಂಡು ಹಲವು ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ಕಲ್ಲಿನಲ್ಲಿ ಶ್ರೀ ಬಾಲರಾಮನ ಮೂರ್ತಿಯನ್ನು ಕೆತ್ತಲಾಗಿದೆ. ಸುಮಾರು 3 ಲಕ್ಷ ಕೋಟಿ ವರ್ಷಗಳ ಹಳೆ ಕಲ್ಲು ಇದಾಗಿದೆ ಎಂದು ಕೋಲಾರದ ಕಲ್ಲು ಅಧ್ಯಯನ ಕೇಂದ್ರ ಸ್ಪಷ್ಟಪಡಿಸಿದೆ.
ಆಯೋಧ್ಯೆ ರಾಮ ಮಂದಿರದಲ್ಲಿ ಹೋರಾಟದಲ್ಲಿ ಪಾಲ್ಗೊಂಡ ಕರಸೇವಕರು ಸಂತಸಕ್ಕೆ ಪಾರವೇ ಇಲ್ಲ. ಜೈಶ್ರೀರಾಮ ಘೋಷಣೆಯೊಂದಿಗೆ ಸಂಭ್ರಮ ಆಚರಿಸಿದ್ದಾರೆ. ಪ್ರಧಾನಿ ಮೋದಿ ಬಾಲರಾಮನಿಗೆ ಮೊದಲ ಮಂಗಳಾರತಿ ಮಾಡುತ್ತಿದ್ದಂತೆ ಹರ್ಷೋದ್ಘಾರ ಹಾಗೂ ಭಕ್ತಿಯಿಂದ ನಮಿಸಿದ್ದಾರೆ.