ರಾಹುಲ್‌ ಗಾಂಧಿ, ಅದಾನಿ ವಿಚಾರಕ್ಕೆ ಬಲಿಯಾದ ಸಂಸತ್‌ ಕಲಾಪ: ಕಪ್ಪು ಬಟ್ಟೆ ಧರಿಸಿ ಬಂದ ಕಾಂಗ್ರೆಸ್‌ ಸಂಸದರು

By BK AshwinFirst Published Mar 27, 2023, 12:26 PM IST
Highlights

ಅದಾನಿ ವಿಷಯದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಪ್ರತಿಪಕ್ಷಗಳ ಬೇಡಿಕೆಯ ನಡುವೆ ಸೋಮವಾರ ಸಂಸತ್‌ ಕಲಾಪ ಮೂರನೇ ವಾರವೂ ಸ್ಥಗಿತಗೊಂಡಿದೆ. ಉಭಯ ಸದನಗಳ ಕಲಾಪ ಆರಂಭವಾದ ಕೆಲವೇ ನಿಮಿಷಗಳಲ್ಲಿ ವಿಪಕ್ಷಗಳ ಸಂಸದರ ಪ್ರತಿಭಟನೆಯ ನಡುವೆ ರಾಜ್ಯಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮತ್ತು ಲೋಕಸಭೆಯನ್ನು ಸಂಜೆ 4 ಗಂಟೆಗೆ ಮುಂದೂಡಲಾಯಿತು.

ನವದೆಹಲಿ (ಮಾರ್ಚ್‌ 27, 2023): ಅದಾನಿ ವಿಚಾರ ಹಾಗೂ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿದ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ತನ್ನ ಪ್ರತಿಭಟನೆಯನ್ನು ಕಾಂಗ್ರೆಸ್‌ ಮುಂದುವರಿಸಿದೆ. ಈ ಪ್ರತಿಭಟನೆಯ ಕಾವು ಕಲಾಪದ ಮೇಲೂ ಪರಿಣಾಮ ಬೀರಿದ್ದು, ಸೋಮವಾರ ಲೋಕಸಭೆ, ರಾಜ್ಯಸಭೆ ಕಲಾಪ ಆರಂಭವಾಗುತ್ತಿದ್ದಂತೆ ಆಡಳಿತಾರೂಢ ಬಿಜೆಪಿ ವಿರುದ್ದ ಕಾಂಗ್ರೆಸ್‌ ಸಂಸದರು ಕಪ್ಪು ಬಟ್ಟೆ ಧರಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ಕಾರಣದಿಂದ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪ ಸಹ ಮುಂದೂಡಲಾಗಿದೆ. 

ಅದಾನಿ ವಿಷಯದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಪ್ರತಿಪಕ್ಷಗಳ ಬೇಡಿಕೆಯ ನಡುವೆ ಸೋಮವಾರ ಸಂಸತ್‌ ಕಲಾಪ ಮೂರನೇ ವಾರವೂ ಸ್ಥಗಿತಗೊಂಡಿದೆ. ಉಭಯ ಸದನಗಳ ಕಲಾಪ ಆರಂಭವಾದ ಕೆಲವೇ ನಿಮಿಷಗಳಲ್ಲಿ ವಿಪಕ್ಷಗಳ ಸಂಸದರ ಪ್ರತಿಭಟನೆಯ ನಡುವೆ ರಾಜ್ಯಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮತ್ತು ಲೋಕಸಭೆಯನ್ನು ಸಂಜೆ 4 ಗಂಟೆಗೆ ಮುಂದೂಡಲಾಯಿತು. ರಾಹುಲ್ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳು ಪ್ರತಿಭಟನೆಯನ್ನು ಮುಂದುವರಿಸಿವೆ.  ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಮೇಲೆ ಪೇಪರ್‌ ಎಸೆದು ಇಂದು ಕಾಂಗ್ರೆಸ್‌ ಸಂಸದರು ಅವಮಾನ ಮಾಡಿದ್ದಾರೆ. 

ಇದನ್ನು ಓದಿ: ರಾಹುಲ್‌ ಗಾಂಧಿ ಹಾರ್ವರ್ಡ್‌, ಕೇಂಬ್ರಿಡ್ಜ್‌ನಿಂದ ಪದವಿ ಪಡೆದಿದ್ದಾರೆ, ಆದರೂ ಪಪ್ಪು ಅಂತೀರಿ: ಪ್ರಿಯಾಂಕಾ ಗಾಂಧಿ

Why are we here in black clothes? We want to show that PM Modi is ending democracy in the country. He first finished autonomous bodies, then they put up their own govt everywhere by threatening those who had won polls. Then they used ED, CBI to use bend those who didn't bow:… pic.twitter.com/HCBr1yDhsy

— ANI (@ANI)

ಇದು ಸಂಸತ್ ಅಧಿವೇಶನದ ಎರಡನೇ ಭಾಗದ ಮೂರನೇ ವಾರವಾಗಿದ್ದು, ಅದಾನಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಜೆಪಿಸಿಗೆ ಒತ್ತಾಯಿಸುತ್ತಿರುವುದರಿಂದ ಇದುವರೆಗೆ ಸಂಸತ್ತು ಗದ್ದಲಕ್ಕೆ ಸಾಕ್ಷಿಯಾಗಿದೆ. ಅಲ್ಲದೆ, ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ಮಾಡಿದ ಭಾಷಣಕ್ಕೆ ವಿದೇಶಿ ನೆಲದಲ್ಲಿ ದೇಶವನ್ನು ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ರಾಹುಲ್‌ ಕ್ಷಮೆಯಾಚಿಸುವಂತೆ ಒತ್ತಾಯಿಸುತ್ತಿದ್ದ ಕಾರಣದಿಂದಲೂ ಹಲವು ದಿನಗಳಿಂದ ಕಲಾಪ ನಡೆಯುತ್ತಿಲ್ಲ.

ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿದ ನಂತರ ಸೋಮವಾರವೂ ಸಂಸತ್ತಿನಲ್ಲಿ ಗದ್ದಲ ಮುಂದುವರಿದಿದೆ. ಈ ನಡುವೆ, ಲೋಕಸಭೆಯಲ್ಲಿ ಚರ್ಚೆಯಿಲ್ಲದೆ ಬಜೆಟ್‌ಗೆ ಅಂಗೀಕಾರ ಮಾಡಲಾಗಿದ್ದು, ರಾಜ್ಯಸಭೆಯಲ್ಲೂ ಇಂದು ಬಜೆಟ್ ಅನ್ನು ಅಂಗೀಕರಿಸಲು ಬಿಜೆಪಿ ಪ್ಲ್ಯಾನ್‌ ಮಾಡುತ್ತಿದೆ.

ಇದನ್ನೂ ಓದಿ: ಅನರ್ಹ ಸಂಸದ ಎಂದು ಟ್ವಿಟ್ಟರ್‌ ಪ್ರೊಫೈಲ್‌ನಲ್ಲಿ ಬರೆದುಕೊಂಡ 'ಕೈ' ನಾಯಕ ರಾಹುಲ್‌ ಗಾಂಧಿ

ವಿಪಕ್ಷಗಳಲ್ಲಿ ಒಗ್ಗಟ್ಟು..!

ಈ ನಡುವೆ, ಸಂಸತ್ತಿನಲ್ಲಿ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಮಾನ ಮನಸ್ಕ ವಿರೋಧ ಪಕ್ಷದ ನಾಯಕರು ಸಹ ಭಾಗಿಯಾಗಿದ್ದು, ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು. ಈ ಸಭೆಯಲ್ಲಿ ಅಚ್ಚರಿಯೆಂಬಂತೆ ತೃಣಮೂಲ ಕಾಂಗ್ರೆಸ್ ಕೂಡ ಸೇರಿಕೊಂಡಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಸಮಾನ ಅಂತರದಲ್ಲಿ ಉಳಿಯುವುದಾಗಿ ಹೇಳಿದ್ದ ತೃಣಮೂಲ ಕಾಂಗ್ರೆಸ್ ಇಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ನಡೆದ ದೊಡ್ಡ ಕಾರ್ಯತಂತ್ರದ ಸಭೆಯಲ್ಲಿ ಭಾಗಿಯಾಗಿತ್ತು.

ಪ್ರಸೂನ್ ಬ್ಯಾನರ್ಜಿ ಮತ್ತು ಜವಾಹರ್ ಸಿರ್ಕಾರ್ ಅವರು ಟಿಎಂಸಿಯನ್ನು ಪ್ರತಿನಿಧಿಸಿದ್ದು, ಸಭೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸುವ ಬಗ್ಗೆ ಪ್ರತಿಪಕ್ಷಗಳ ಕಾರ್ಯತಂತ್ರವನ್ನು ಚರ್ಚಿಸಲಾಯಿತು. ಇತರ ವಿಷಯಗಳಲ್ಲಿ ಬಿಜೆಪಿ - ಕಾಂಗ್ರೆಸ್‌ನಿಂದ ದೂರವಿದ್ದರೂ ರಾಹುಲ್‌ ಗಾಂಧಿಯನ್ನು ಸಂಸತ್‌ ಸ್ಥಾನದಿಂದ ಅನರ್ಹಗೊಳಿಸಿರುವ ವಿಚಾರದಲ್ಲಿ ಪ್ರತಿಪಕ್ಷಗಳು ಒಂದಾಗಬೇಕು ಎಂದು ಟಿಎಂಸಿ ಹೇಳಿದೆ. 

ಇದನ್ನೂ ಓದಿ: ಭಾರತದ ಪ್ರಧಾನಿ ಹೇಡಿ; ನನ್ನ ವಿರುದ್ಧವೂ ಕೇಸು ದಾಖಲಿಸಿ, ನನ್ನನ್ನೂ ಜೈಲಿಗೆ ಹಾಕಿ: ಪ್ರಿಯಾಂಕಾ ಗಾಂಧಿ ಆಕ್ರೋಶ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮುಂದೆ ಸಾಗುವ ಯಾರನ್ನಾದರೂ ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ ಎಂದು ಹೇಳಿದರು. "ಇದನ್ನು ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಹೇಳುತ್ತದೆ. ಅದಕ್ಕಾಗಿಯೇ ನಾನು ನಿನ್ನೆ ಎಲ್ಲರಿಗೂ ಧನ್ಯವಾದ ಹೇಳಿದ್ದೇನೆ ಮತ್ತು ಇಂದು ಕೂಡ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಲು ಮತ್ತು ಜನರನ್ನು ರಕ್ಷಿಸಲು ಯಾರಾದರೂ ಮುಂದೆ ಬಂದರೆ ನಾವು ಸ್ವಾಗತಿಸುತ್ತೇವೆ. ನಮ್ಮನ್ನು ಬೆಂಬಲಿಸುವ ಜನರಿಗೆ ನಾವು ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ’’ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.

click me!