ಬಡವರಿಗೆ ನೆರವಾಗಲು ಕನಿಷ್ಠ 65,000 ಕೋಟಿ ಬೇಕು: ರಾಜನ್‌

Kannadaprabha News   | Asianet News
Published : May 01, 2020, 11:34 AM ISTUpdated : May 01, 2020, 11:37 AM IST
ಬಡವರಿಗೆ ನೆರವಾಗಲು ಕನಿಷ್ಠ 65,000 ಕೋಟಿ ಬೇಕು: ರಾಜನ್‌

ಸಾರಾಂಶ

ದೇಶ ಆರ್ಥಿಕ ಸಂಕಷ್ಟದಿಂದ ಪಾರಾಗಲು ಆದಷ್ಟು ಬೇಗ ಲಾಕ್‌ಡೌನ್ ತೆರವು ಮಾಡಬೇಕು ಹಾಗೆಯೇ ಬಡ ಜನರಿಗೆ ನೆರವಾಗಲು ಕನಿಷ್ಠ 65000 ಕೋಟಿ ರುಪಾಯಿ ಸರ್ಕಾರ ವೆಚ್ಚ ಮಾಡಬೇಕು ಎಂದು ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಂ ರಾಜನ್‌ ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಮೇ.01): ಕೊರೋನಾ ಸೋಂಕು ವ್ಯಾಪಕವಾಗದಂತೆ ತಡೆಯಲು ದೇಶಾದ್ಯಂತ ಹೇರಿರುವ ಲಾಕ್‌ಡೌನ್‌ ತೆರವಿಗೂ ಮುನ್ನ ಭಾರತ ಜಾಣತನ ಪ್ರದರ್ಶಿಸಬೇಕು. ಇಂಥ ನಿರ್ಧಾರ ಯೋಜಿತ ರೀತಿಯಲ್ಲಿರಬೇಕು ಮತ್ತು ಎಷ್ಟು ಸಾಧ್ಯವೋ ಅಷ್ಟುಬೇಗ ಲಾಕ್‌ಡೌನ್‌ ತೆರವುಗೊಳಿಸುವ ಮೂಲಕ ಜನರು ಉದ್ಯೋಗ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಆರ್‌ಬಿಐನ ಮಾಜಿ ಗವರ್ನರ್‌ ರಘುರಾಂ ರಾಜನ್‌ ಸಲಹೆ ನೀಡಿದ್ದಾರೆ.

ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ದೇಶದ ಆಗುಹೋಗು, ಪ್ರಸಕ್ತ ಪರಿಸ್ಥಿತಿ ಕುರಿತು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ನಡೆಸಿದ ಸಂವಾದದ ವೇಳೆ ಹಾಲಿ ಅಮೆರಿಕದಲ್ಲಿರುವ ರಾಜನ್‌ ಈ ಸಲಹೆ ನೀಡಿದ್ದಾರೆ. ಸಮಾಜದ ಎಲ್ಲಾ ವರ್ಗಗಳ ಜನರಿಗೂ ಸುದೀರ್ಘ ಕಾಲ ನೆರವು ನೀಡುವ ಸ್ಥಿತಿಯಲ್ಲಿ ಭಾರತದ ಆರ್ಥಿಕತೆ ಇಲ್ಲದ ಕಾರಣ, ಸರ್ಕಾರ ಆದಷ್ಟು ಶೀಘ್ರ ಯೋಜಿತ ರೀತಿಯಲ್ಲಿ ಲಾಕ್‌ಡೌನ್‌ ತೆರವು ಮಾಡಬೇಕು. ಈ ಮೂಲಕ ಕೋಟ್ಯಂತರ ಉದ್ಯೋಗ ಉಳಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಇದೇ ವೇಳೆ ಭಾರತದ ಬಡಜನರಿಗೆ ನೆರವಾಗಲು ಎಷ್ಟು ಹಣ ಬೇಕಾಗಬಹುದು ಎಂಬ ರಾಹುಲ್‌ ಪ್ರಶ್ನೆಗೆ, ನಮ್ಮದು 200 ಲಕ್ಷ ಕೋಟಿ ರು. ಆರ್ಥಿಕತೆ. ಕೊರೋನಾ ಪಿಡುಗಿನ ಈ ಸಂದರ್ಭದಲ್ಲಿ ಬಡ ಜನರಿಗೆ ನೆರವಾಗಲು ಕನಿಷ್ಠ 65,000 ಕೋಟಿ ರು. ಬೇಕಾಗುತ್ತದೆ. ಇದು ಬಡಜನರಿಗಾಗಿ ಮತ್ತು ಅವರ ಜೀವ ಉಳಿಸಲು ಮತ್ತು ಜೀವನೋಪಾಯಕ್ಕಾಗಿ ಎಂದಾದಲ್ಲಿ ನಾವು ಅದನ್ನು ಮಾಡಲೇಬೇಕು. ಭಾರತದ ಜಿಡಿಪಿಯನ್ನು ಪರಿಗಣಿಸಿದಾಗ ಇದೇನು ಹೊರೆಯಾಗದು ಎಂದು ರಾಜನ್‌ ಹೇಳಿದರು.

ಇನ್ನು ಭಾರತದಲ್ಲಿ ವಿಕೇಂದ್ರಿಕೃತ ವ್ಯವಸ್ಥೆಯು ಮರಳಿ ಕೇಂದ್ರೀಕೃತ ವ್ಯವಸ್ಥೆಯತ್ತ ಹೊರಳುತ್ತಿದೆ ಎಂದು ಮೋದಿ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸಿದ ರಾಹುಲ್‌ ಗಾಂಧಿ ‘ನಾವೆಲ್ಲರೂ ವ್ಯವಸ್ಥೆಯ ಭಾಗ ಮತ್ತು ಎಲ್ಲರೂ ವ್ಯವಸ್ಥೆಯಲ್ಲಿ ಸಮಾನ ಪಾಲುದಾರರು ಎಂದು ಎಲ್ಲರೂ ಭಾವಿಸುವಂತೆ ಮಾಡುವುದು ಅತ್ಯಗತ್ಯ. ಈ ವಿಷಯದಲ್ಲಿ ದಕ್ಷಿಣದ ರಾಜ್ಯಗಳು ಈ ಕೆಲಸವನ್ನು ಹೆಚ್ಚು ಯಶಸ್ವಿಯಾಗಿ ಮಾಡುತ್ತಿವೆ. ಅಲ್ಲಿ ಅಧಿಕಾರ ಹೆಚ್ಚು ವಿಕೇಂದ್ರೀಕೃತಗೊಂಡಿದೆ. ಆದರೆ ಉತ್ತರ ಭಾರತದ ರಾಜ್ಯಗಳಲ್ಲಿ ಅಧಿಕಾರ ಹೆಚ್ಚು ಕೇಂದ್ರೀಕೃತವಾಗಿದೆ ಎಂದರು.

ವಿಶ್ವಸಂಸ್ಥೆಯ ಒಂದು ಟ್ವೀಟ್, ರಾಹುಲ್ ಫ್ಯಾನ್ಸ್ ಫುಲ್ ಖುಷ್: ಕಾರಣವೇನು?

ಇದೇ ವೇಳೆ ಕೇಂದ್ರೀಕೃತ ವ್ಯವಸ್ಥೆಯ ಬಿಕ್ಕಟ್ಟು ಕಾಣಿಸಿಕೊಂಡಿದೆಯೇ ಎಂಬ ರಾಹುಲ್‌ ಪ್ರಶ್ನೆಗೆ ‘ಸ್ಥಳೀಯ ಜನರನ್ನು ಹೆಚ್ಚು ಸಶಕ್ತರನ್ನಾಡಿ ಮಾಡುವಲ್ಲಿ ಮತ್ತು ಸ್ಥಳೀಯ ಮಾಹಿತಿಯನ್ನು ಹೆಚ್ಚಾಗಿ ಸಂಗ್ರಹಿಸುವಲ್ಲಿ ವಿಕೇಂದ್ರೀಕೃತ ವ್ಯವಸ್ಥೆ ಮಹತ್ವಪೂರ್ಣವಾದುದು’ ಎಂದು ಉತ್ತರಿಸಿದರು ರಾಜನ್‌.

ಇನ್ನು ಪ್ರಗತಿಪರ ಮಾದರಿಯನ್ನು ಪ್ರಶ್ನಿಸುವ ಸರ್ವಾಧಿಕಾರಿ ಮಾದರಿಯ ಹೆಚ್ಚೆಚ್ಚು ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕುರಿತ ರಾಹುಲ್‌ ಪ್ರಶ್ನೆಗೆ ‘ಕೇಂದ್ರೀಕೃತ ಸರ್ವಾಧಿಕಾರಿ ಮಾದರಿಯು ಕಳವಳಕಾರಿ. ಇಂಥ ವ್ಯವಸ್ಥೆಯಲ್ಲಿ ನಾನೇ ಜನರ ಶಕ್ತಿ ನಾನು ಹೇಳಿದ್ದಲ್ಲ ನಡೆಯುತ್ತದೆ. ನಾನು ಮಾಡಿದ್ದೇ ಕಾನೂನು ಮತ್ತು ಅದಕ್ಕೆ ಲೆಕ್ಕಪತ್ರ ನೀಡಬೇಕಿಲ್ಲ ಎಂಬ ಮನೋಭಾವನೆ ಹುಟ್ಟಿಕೊಳ್ಳುತ್ತದೆ ಎಂದರು ರಾಜನ್‌.

ರಾಹುಲ್‌ ಮತ್ತು ರಾಜನ್‌ ಸಂವಾದ ಕಾರ್ಯಕ್ರಮವನ್ನು ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರ ಮಾಡಲಾಯಿತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಟಿಹಾರ್ ಜಂಕ್ಷನ್‌ನಲ್ಲಿ ಮಹಿಳೆಯ ಭಯಾನಕ ಅನುಭವ: 30-40 ಪುರುಷರು ನುಗ್ಗಲು ಯತ್ನ, ಶೌಚಾಲಯದಲ್ಲಿ ಸಿಲುಕಿದ ಮಹಿಳೆ!
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!