ಹಿಂಸಾಪೀಡಿತ ಮಣಿಪುರದಲ್ಲಿ ಕುಕಿ-ಜೋಮಿ ಸಮುದಾಯದ ಇಬ್ಬರು ಮಹಿಳೆಯರನ್ನು ಮೈತೇಯಿ ಸಮುದಾಯದವರು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ಘಟನೆ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವಾಗಲೇ, ಮಿಜೋರಂನಲ್ಲಿರುವ ಮೈತೇಯಿ ಸಮುದಾಯಕ್ಕೆ ಆತಂಕ ಎದುರಾಗಿದೆ.
ಗುವಾಹಟಿ: ಹಿಂಸಾಪೀಡಿತ ಮಣಿಪುರದಲ್ಲಿ ಕುಕಿ-ಜೋಮಿ ಸಮುದಾಯದ ಇಬ್ಬರು ಮಹಿಳೆಯರನ್ನು ಮೈತೇಯಿ ಸಮುದಾಯದವರು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ಘಟನೆ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವಾಗಲೇ, ಮಿಜೋರಂನಲ್ಲಿರುವ ಮೈತೇಯಿ ಸಮುದಾಯಕ್ಕೆ ಆತಂಕ ಎದುರಾಗಿದೆ. ಈಗ ಅಲ್ಲಿನ ಜನರು ಸುರಕ್ಷಿತ ರಾಜ್ಯಕ್ಕೆ ವಲಸೆ ಹೋಗಲು ಆರಂಭಿಸಿದ್ದಾರೆ. ಪರಿಸ್ಥಿತಿಯನ್ನು ಅರಿತಿರುವ ಮಣಿಪುರ ಸರ್ಕಾರ, ಮಿಜೋರಂನಿಂದ ಬರುವ ಮೈತೇಯಿ ಸಮುದಾಯದವರಿಗೆ ವಿಶೇಷ ವಿಮಾನ ವ್ಯವಸ್ಥೆ ಮಾಡಲು ಸಿದ್ಧವಿರುವುದಾಗಿ ಘೋಷಿಸಿದೆ.
ಮಿಜೋರಂನಲ್ಲಿ ಮಿಜೋ ಸಮುದಾಯ (Mizo community) ಬಲಾಢ್ಯವಾಗಿದೆ. ಆ ಸಮುದಾಯಕ್ಕೂ ಮಣಿಪುರದಲ್ಲಿ ಅಲ್ಪಸಂಖ್ಯಾತರಾಗಿರುವ ಕುಕಿ-ಜೋಮಿಗಳಿಗೂ ಆಳವಾದ ಜನಾಂಗೀಯ ಬಾಂಧವ್ಯವಿದೆ. ಮಣಿಪುರದಲ್ಲಿ ಕುಕಿ-ಜೋಮಿಗಳ (Kuki-jomis) ಮೇಲಾಗುತ್ತಿರುವ ಬೆಳವಣಿಗೆಗಳನ್ನು ಮಿಜೋರಂ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮಣಿಪುರದಲ್ಲಿ ಹಿಂಸಾಚಾರ ಆರಂಭವಾದ ಬಳಿಕ 12584 ಕುಕಿ-ಜೋಮಿಗಳು ಮಣಿಪುರದಿಂದ ವಲಸೆ ಬಂದು ಆಶ್ರಯ ಪಡೆದಿದ್ದಾರೆ. ಮಿಜೋಗಳು ತಮ್ಮ ವಿರುದ್ಧ ಪ್ರತೀಕಾರಕ್ಕೆ ಮುಂದಾಗಬಹುದು ಎಂಬ ಆತಂಕ ಮೈತೇಯಿಗಳನ್ನು ಕಾಡುತ್ತಿದೆ.
ಮಣಿಪುರದ 18 ವರ್ಷದ ಯುವತಿ ಮೇಲೆ ಗ್ಯಾಂಗ್ ರೇಪ್, ದುರಂತಕ್ಕೆ ಮಹಿಳೆಯರ ನೆರವು!
ಇದಕ್ಕೆ ಇಂಬು ನೀಡುವಂತೆ, ಮಾಜಿ ಬಂಡುಕೋರರ ಸಂಘಟನೆಯೊಂದು, ಮೈತೇಯಿಗಳು ತಮ್ಮ ಸುರಕ್ಷತೆಗಾಗಿ ಮಿಜೋರಂ ಬಿಟ್ಟು ಹೋಗುವುದು ಒಳಿತು ಎಂದು ಹೇಳಿದೆ. ಮಿಜೋರಂ ರಾಜಧಾನಿ ಐಜ್ವಾಲ್‌ನಲ್ಲಿ ಸುಮಾರು 2000 ಮೈತೇಯಿಗಳು ಇದ್ದಾರೆ. ಅವರಲ್ಲಿ ಹೆಚ್ಚಿನವರು ಅಸ್ಸಾಂನಿಂದ ಬಂದವರು. ಹೀಗಾಗಿ ಬಹುತೇಕರು ಅಸ್ಸಾಂನತ್ತ ತೆರಳುತ್ತಿದ್ದಾರೆ. ಈ ನಡುವೆ, ಯಾವುದೇ ಆತಂಕ ಬೇಡ ಎಂದು ಮಿಜೋರಂ ಗೃಹ ಸಚಿವಾಲಯ ತಿಳಿಸಿದೆ. ಅಲ್ಲದೆ, ಮೈತೇಯಿ ಸಮುದಾಯಕ್ಕೆ ರಕ್ಷಣೆ ನೀಡಲು ಸಿದ್ಧವಿರುವುದಾಗಿಯೂ ಹೇಳಿದೆ.
ಮಣಿಪುರದಲ್ಲಿ ನಿಲ್ಲದ ಹಿಂಸೆ: ಶಾಲೆಗೆ ಬೆಂಕಿ
ಇಂಫಾಲ: ಜನಾಂಗೀಯ ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ಹಿಂಸಾಚಾರ ನಿಲ್ಲುತ್ತಲೇ ಇಲ್ಲ. ಚುರಾಚಾಂದ್‌ಪುರದಲ್ಲಿ ಶಾಲೆಯೊಂದಕ್ಕೆ ಬೆಂಕಿ ಹಚ್ಚಲಾಗಿದೆ. ಮನೆ ಹಾಗೂ ವಾಹನಗಳನ್ನು ಧ್ವಂಸಗೊಳಿಸಲಾಗಿದೆ. ಎರಡು ಸಮುದಾಯಗಳು ರಾತ್ರಿ ಇಡೀ ಗುಂಡಿನ ಚಕಮಕಿ ನಡೆಸಿವೆ ಎಂದು ವರದಿಗಳು ತಿಳಿಸಿವೆ.
ಸ್ವಯಂ ಆತ್ಮರಕ್ಷಣೆಗೆ ಮುಂದಾದ ಮಣಿಪುರ ಮಹಿಳೆಯರು: ಊರಿನೊಳಗೆ ಸೇನೆಗೂ ನೋ ಎಂಟ್ರಿ